ಚಂಡೀಗಢ: ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಗೆ ಭದ್ರತೆಯನ್ನು ಕಡಿಮೆಗೊಳಿಸಿದ್ದೇಕೆ? ಹಾಗೆಯೇ ಆ ಮಾಹಿತಿಯನ್ನು ಬಹಿರಂಗ ಮಾಡಿದ್ದೇಕೆ? ಎಂದು ಪಂಜಾಬ್ ಉಚ್ಚ ನ್ಯಾಯಾಲಯ ಆಪ್ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ಈ ಬಗ್ಗೆ ಜೂ.2ರೊಳಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್‌ಗೆ ಸೂಚಿಸಿದೆ.
ಕಳೆದ ಶನಿವಾರವಷ್ಟೇ ಪಂಜಾಬ್ 400 ಮಂದಿ ಅತಿ ಪ್ರಭಾವಿ ವ್ಯಕ್ತಿಗಳಿಗೆ ನೀಡಿದ್ದ ಭದ್ರತೆಯನ್ನು ಕಡಿಮೆಗೊಳಿಸಿತ್ತು. ಇದು ವಿಐಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಈ ರೀತಿಯ ಭದ್ರತೆಗಳನ್ನು ಒಂದು ಗೌರವವೆಂದೇ ತಿಳಿದುಕೊಳ್ಳಲಾಗಿದೆ. ಆದ್ದರಿಂದ ಭದ್ರತಾ ಸಿಬ್ಬಂದಿಯನ್ನು ಕಡಿಮೆ ಮಾಡಲಾಗಿದೆ ಎಂದು ಆಪ್ ಸರ್ಕಾರ ಹೇಳಿತ್ತು. ಅಷ್ಟು ಮಾತ್ರವಲ್ಲ ಅದನ್ನು ಟ್ವಿಟರ್‌ನಲ್ಲೂ ಪ್ರಕಟಿಸಿತ್ತು.
ಈ ಮಾಹಿತಿ ಸೋರಿಕೆಯಾಗಿರುವುದರಿಂದಲೇ ತಮ್ಮ ಪುತ್ರ ಮೃತಪಟ್ಟಿದ್ದಾರೆಂದು ಮೂಸೆವಾಲ ತಂದೆ ಬಲ್ಕರ್ ಸಿಂಗ್ ಸಿಧು ಆರೋಪಿಸಿದ್ದರು.
ಮಸ್ಸಾದಲ್ಲಿ ಅಂತ್ಯಕ್ರಿಯೆ: ಮಂಗಳವಾರ ಮಾನ್ಸಾ ಜಿಲ್ಲೆಯ ಮೂಸಾದಲ್ಲಿ ಸಿಧು ಅವರ ಅಂತ್ಯಕ್ರಿಯೆ ನಡೆಯಿತು. ಸಿಧು ಅಭಿಮಾನಿಗಳು ಪಂಜಾಬ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗಾಯಕರಿಗೆ ಪಾತಕಿಗಳ ಕಾಟ: ಮೂಸೆವಾಲ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಇನ್ನೊಬ್ಬ ಪ್ರಖ್ಯಾತ ಗಾಯಕ ಮಿಕಾ ಸಿಂಗ್, ಪಂಜಾಬ್‌ನ ಹಲವು ಗಾಯಕರು ಭೂಗತ ಪಾತಕಿಗಳಿಂದ ಶೋಷಣೆಗೊಳಗಾಗಿದ್ದಾರೆ. ಅವರೆಲ್ಲ ಜೀವ ಉಳಿಸಿಕೊಳ್ಳಲು ಹಣ ನೀಡಿ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.