ದೊಡ್ಡಬಳ್ಳಾಪುರ: ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ವಿನಾಕಾರಣ ವಿಳಂಬ ಮಾಡುವುದು, ಸಕಾಲದಲ್ಲಿ ಬರುವ ಅರ್ಜಿಗೆ ಸೂಕ್ತ ರೀತಿ ಸ್ಪಂದಿಸದೇ ಇರುವುದು ಸಾಬೀತಾದರೆ ಶಿಕ್ಷೆ ಆಗುವುದು ಖಚಿತ ಎಂದು ಭ್ರಷ್ಟಾಚಾರ ನಿಗ್ರಹ ದಳ ಬೆಂ.ಗ್ರಾ. ಜಿಲ್ಲಾ ಡಿವೈಎಸ್‌ಪಿ ಗೋಪಾಲ್ ಡಿ.ಜೋಗಿನ ಎಚ್ಚರಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಎಸಿಬಿ ಯಿಂದ ನಡೆದ ಸಾರ್ವಜನಿಕರ ಕುಂದು- ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ನಂತರ ಮತ್ತೆ ಸಾರ್ವಜನಿಕರ ಕುಂದು-ಕೊರತೆ ಸಭೆಯನ್ನುಎಸಿಬಿಯಿಂದ ಪ್ರಾರಂಭಿಸಲಾಗಿದೆ. ಆದರೆ, ಈ ಬಗ್ಗೆ ಸೂಕ್ತ ಪ್ರಚಾರದ ಕೊರತೆಯಿಂದ ಸಭೆಗಳಿಗೆ ಸಾರ್ವಜನಿಕರಿಂದ ಸೂಕ್ತ ಸ್ಪಂದನೆದೊರೆಯುತ್ತಿಲ್ಲ. ಸಭೆಯಲ್ಲಿ ತಾಲೂಕುಮಟ್ಟದ ಇಲಾಖೆ ಅಧಿಕಾರಿಗಳು ಕಡ್ಡಾಯ ಭಾಗವಹಿಸ ಬೇಕು ಎಂದರು.
ಹೋಬಳಿಮಟ್ಟದಲ್ಲೂ ಸಭೆ: ಸಾರ್ವಜ ನಿಕರಿಂದ ಬರುವ ದೂರುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ಒಮ್ಮೆ ದೂರು ದಾಖಲಾದರೆ ಅಧಿಕಾರಿಗಳು ತನಿಖೆಯನ್ನು ಎದುರಿಸಲೇಬೇಕು. ಮುಂದಿನ ದಿನ ದಿನಗಳಲ್ಲಿ ಹೋಬಳಿಮಟ್ಟದಲ್ಲೂ ಸಾರ್ವಜನಿ ಕರ ಕುಂದು-ಕೊರತೆ ಸಭೆ ನಡೆಸಲಾಗುವುದು ಎಂದರು.
ಸರ್ಕಾರಿ ಅನುದಾನ ಬಳಕೆಯಲ್ಲಿನ ತಾರತಮ್ಯ, ಭ್ರಷ್ಟಾಚಾರ, ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಮುಂತಾದ ಪ್ರಕರಣ ಎಸಿಬಿಯಲ್ಲಿ ದಾಖಲಿಸಲು ಅವಕಾಶ ಇದೆ. ಜಿಲ್ಲೆಯಲ್ಲಿ ದಾಖಲಾಗಿರುವ 250 ಪ್ರಕರಣಗಳಲ್ಲಿ 50 ಪ್ರಕರಣ ಮಾತ್ರ ನಮ್ಮ ತನಿಖಾ ವ್ಯಾಪ್ತಿಗೆ ಬರುತ್ತಿವೆ. ಉಳಿದ ಬಹುತೇಕ ಪ್ರಕರಣ ನ್ಯಾಯಾಲಯ ವ್ಯಾಪ್ತಿಗೆ ಒಳಪಟ್ಟಿವೆ ಎಂದರು.
ಲಿಖೀತ ದೂರು: ಸಭೆ ಯಲ್ಲಿ ಕೋಳೂರು ನಿವಾಸಿ ಸಂಪಂಗಿರಾಮಯ್ಯ, ತಾಲೂಕು ಕಚೇರಿಯಿಂದ ಹಳೆ ಪಹಣಿ ಸೇರಿದಂತೆ ಯಾವುದೇ ದಾಖಲೆ ಪಡೆಯಬೇಕಿದ್ದರು ರೈತರು ಅಲೆದಾಡುವಂತಾಗಿದೆ. ಹಣ ನೀಡಿದರೆ ತಕ್ಷಣ ದೊರೆಯುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸಿಬಿ ಡಿವೈಎಸ್ಪಿ ಅವರಿಗೆ ಲಿಖೀತ ದೂರು ನೀಡಿದರು. ತಹಶೀಲ್ದಾರ್ ಟಿ.ಎಸ್. ಶಿವರಾಜ್, ತಾಪಂ ಇಒ ಮುರುಡಯ್ಯ, ಎಸಿಬಿ ಸರ್ಕಲ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ಕಾನ್ಸ್‌ಟೇಬಲ್ ಧನಂಜಯ ಹಾಗೂ ವಿವಿಧ ಇಲಾಖೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.