Advertisement

ಪತ್ರಕರ್ತರಿಗೆ ಶಿಕ್ಷೆ: ವಿಧಾನಸಭೆ ಉದಾತ್ತವಾಗಿ ನಡೆದುಕೊಳ್ಳಲಿ..

06:40 AM Dec 01, 2017 | Team Udayavani |

ಬೆಂಗಳೂರು: ಹಕ್ಕುಚ್ಯುತಿ ಪ್ರಕರಣದಲ್ಲಿ ಪತ್ರಕರ್ತರಾದ ರವಿಬೆಳೆಗೆರೆ ಮತ್ತು ಅನಿಲ್‌ರಾಜ್‌ ಅವರಿಗೆ ವಿಧಿಸಿರುವ
ಶಿಕ್ಷೆಗೆ ಸಂಬಂಧಪಟ್ಟಂತೆ ವಿಧಾನ ಸಭಾಧ್ಯಕ್ಷರು ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ಉದಾತ್ತ ಮನಸ್ಸಿನಿಂದ
ನಡೆದುಕೊಳ್ಳಬೇಕಿದೆ ಎಂದು ಹೈಕೋರ್ಟ್‌ ಮೌಖೀಕವಾಗಿ ಹೇಳಿತು.

Advertisement

ಹಕ್ಕುಚ್ಯುತಿ ಪ್ರಕರಣದಲ್ಲಿ ವಿಧಾನ ಸಭೆ ತಮಗೆ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿ ಪತ್ರಕರ್ತರಾದ
ರವಿ ಬೆಳೆಗೆರೆ ಹಾಗೂ ಅನಿಲ್‌ ರಾಜ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್‌.ಬೋಪಣ್ಣ ಅವರಿದ್ದ
ಏಕಸದಸ್ಯ ಪೀಠ ಈ ಅಭಿಪ್ರಾಯಪಟ್ಟಿತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿವಾದಿಗಳಾದ ವಿಧಾನಸಭೆ ಸ್ಪೀಕರ್‌ ಕೆ.ಬಿ.ಕೋಳಿವಾಡ, ವಿಧಾನಸಭೆ
ಹಕ್ಕು ಬಾಧ್ಯತೆಗಳ ಸಮಿತಿ ಮುಖ್ಯಸ್ಥರು, ಶಾಸಕರಾದ ಬಿ.ಎನ್‌.ನಾಗರಾಜ್‌ ಮತ್ತು ಎಸ್‌.ಆರ್‌.ವಿಶ್ವನಾಥ್‌ರಿಗೆ
ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು.

ಅದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿಧಾನ ಸಭಾಧ್ಯಕ್ಷರು ಹಾಗೂ ವಿಧಾನಸಭೆ
ಹಕ್ಕು ಬಾಧ್ಯತೆಗಳ ಸಮಿತಿ ಮುಖ್ಯಸ್ಥರು ಅರ್ಜಿದಾರರಿಗೆ ಜೈಲು ಶಿಕ್ಷೆ ವಿಧಿಸಿ ನೀಡಿರುವ ತೀರ್ಪು ಸಂವಿಧಾನ
ಬಾಹಿರ. ಪ್ರಸ್ತುತ ಅವರಿಗೆ ಬಂಧನ ಭೀತಿಯಿದ್ದು, ಸ್ಪೀಕರ್‌ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಏಕಸದಸ್ಯ ಪೀಠ, ಪ್ರಕರಣವು ನ್ಯಾಯಾಲಯದಲ್ಲಿದೆ. ಅರ್ಜಿದಾರರಿಗೆ ಶಿಕ್ಷೆ ವಿಧಿಸಿರುವ
ಕುರಿತು ಸಂವಿಧಾನದ ಅವಕಾಶಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ. ವಾದ,ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿತು.

Advertisement

ಏನಿದು ಪ್ರಕರಣ?: ಪತ್ರಕರ್ತ ರವಿ ಬೆಳಗೆರೆ ಅವರು ವಿಧಾನಸಭೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಹಾಗೂ ಪತ್ರಕರ್ತ ಅನಿಲ್‌ ರಾಜ್‌ ಅವರು ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಿರುದಟಛಿ ಮಾನಹಾನಿ ವರದಿ ಪ್ರಕಟಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದರಿಂದ ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿ ವಿಚಾರಣೆ ನಡೆಸಿ ಈ ಇಬ್ಬರು ಪತ್ರಕರ್ತರಿಗೂ ತಲಾ ಒಂದು ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಲು ಶಿಫಾರಸು ಮಾಡಿತ್ತು.

ಇದನ್ನು ವಿಧಾನಸಭೆ ಸ್ಪೀಕರ್‌ ಅನುಮೋದಿಸಿ 2017ರ ಜುಲೈ 21ರಂದು ಆದೇಶ ಹೊರಡಿಸಿದ್ದರು. ಈ ಆದೇಶದ
ಮರು ಪರಿಶೀಲನೆಗೆ ಕೋರಿದ್ದ ಅರ್ಜಿಯನ್ನು ನ.21ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸ್ಪೀಕರ್‌ ತಿರಸ್ಕರಿಸಿ, ಶಿಕ್ಷೆ ವಿಧಿಸಿದ್ದ ಆದೇಶವನ್ನೇ ಕಾಯಂಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next