Advertisement

ಪುನೀತಯಾತ್ರೆ ಕಲಬುರಗಿಯಿಂದ ಆರಂಭ

10:03 AM Nov 03, 2017 | |

ಕಲಬುರಗಿ: ನೆರೆಯ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ, ಶ್ರೀಶೈಲಂ ಮಲ್ಲಿಕಾರ್ಜುನ, ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ, ನಾಸಿಕ ತ್ರಯಂಬಕೇಶ್ವರ, ಬಸವೇಶ್ವರ ಜನ್ಮ ಸ್ಥಳ ಹಾಗೂ ಕೂಡಲಸಂಗಮ ಸೇರಿದಂತೆ ಇತರ ಪ್ರೇಕ್ಷಣಿಯ, ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಹೈದ್ರಾಬಾದ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಲಬುರಗಿಯಿಂದ ಬಸ್‌ ಹೊರಡಲು ಪ್ರವಾಸಿ ಪ್ಯಾಕೇಜ್‌ಗಳನ್ನು ಆಯೋಜಿಸಿದೆ.

Advertisement

ಕಳೆದ ತಿಂಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು 21 ಮಾರ್ಗಗಳಿಗೆ ಪುನೀತಯಾತ್ರೆ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಕಲಬುರಗಿಯಿಂದ ಎಂಟು ಮಾರ್ಗಗಳಿಗೆ ಪ್ರವಾಸ ಪ್ಯಾಕೇಜ್‌ ಯೋಜನೆ ಜಾರಿಗೆ ತರಲಾಗಿದ್ದು, ಅ.
2ರಂದು ಚಾಲನೆ ನೀಡಲಾಗಿದೆ. ಆರಂಭಿಕವಾಗಿ ಕನಿಷ್ಠ ಪ್ರವಾಸಿಗರು ಬುಕ್ಕಿಂಗ್‌ ಆದ ಮೇಲೆ ಬಸ್‌ ಹೊರಡುವುದು ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲರಿಗೂ ಬೆಂಗಳೂರಿಗೆ ತೆರಳಿ ಪ್ರವಾಸಿ ಕ್ಷೇತ್ರಗಳಿಗೆ ತೆರಳು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಮನಗಂಡು ಹಾಗೂ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡನೇ ಹಂತದ ಪುನೀತ ಯಾತ್ರೆಗೆ ಕಲಬುರಗಿ ಕೇಂದ್ರವನ್ನಾಗಿಸಲಾಗಿದೆ. ಈ ಪ್ರವಾಸ ಪ್ಯಾಕೇಜ್‌ ದರ ಕಡಿಮೆಯಾಗಿದ್ದು, ಶೇ. 25ರಷ್ಟು ರಿಯಾಯ್ತಿ ಘೋಷಿಸಲಾಗಿದೆ. ಸುಸಜ್ಜಿತ ವಾಸ್ತವ್ಯ ವ್ಯವಸ್ಥೆಯನ್ನು ನಿಗಮದ ಹೊಟೆಲ್‌ಗ‌ಳಲ್ಲಿ ಮಾಡಲಾಗುತ್ತದೆ.

ತಮ್ಮ ನಿಗಮದ ಹೊಟೆಲ್‌ಗ‌ಳು ಇರದ ಕಡೆ ಬೇರೆ ಸುಸಜ್ಜಿತ ಹೊಟೆಲ್‌ಗ‌ಳಲ್ಲಿ ಇಲಾಖೆಯೇ ವ್ಯವಸ್ಥೆ ಮಾಡಿದೆ. ಊಟ, ಉಪಹಾರ ವ್ಯವಸ್ಥೆಯನ್ನು ಪ್ರಯಾಣಿಕರೇ ನೋಡಿಕೊಳ್ಳಬೇಕು.ಊಟ-ತಿಂಡಿಗೆ ಉತ್ತಮ ಹೊಟೇಲಗಳನ್ನು ಇಲಾಖೆ ಆಯ್ಕೆ ಮಾಡಿಕೊಂಡಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಸ್ಥಳಗಳಿಗೂ ಮಾರ್ಗ ಪ್ರವಾಸಿ ಪ್ಯಾಕೇಜ್‌ ಆಯೋಜಿಸಲಾಗುವುದು ಎಂದು ವಿವರಿಸಿದರು.

ಕಲಬುರಗಿ ಜಿಲ್ಲೆಯ ಪ್ರೇಕ್ಷಣಿಕ ಸ್ಥಳಗಳಿಗೂ ಪ್ರವಾಸಿ ಪ್ಯಾಕೇಜ್‌ ನೀಡಲಾಗಿ ಮಾರ್ಗಸೂಚಿ ರೂಪಿಸಲಾಗಿದೆ. ಪ್ರಮುಖವಾಗಿ ಬಸವೇಶ್ವರರ ಜನ್ಮ ಸ್ಥಳ ಬಸವನ ಬಾಗೇವಾಡಿ, ಕೂಡಲಸಂಗಮ, ಬಸವಕಲ್ಯಾಣ, ವಿಜಯಪುರ ಗೋಲಗುಮ್ಮಟ, ಬೀದರ್‌ನ ಕೋಟೆ, ಗುರುದ್ವಾರ ಸೇರಿದಂತೆ ಇತರ ಸ್ಥಳಗಳಿಗೂ ಒಂದು ದಿನ ಹಾಗೂ ಎರಡು
ದಿನದ ಪ್ರವಾಸ ಪ್ಯಾಕೇಜ್‌ ನಿಗದಿ ಮಾಡಲಾಗಿದೆ. 

Advertisement

ಅದೇ ರೀತಿ ಕಲಬುರಗಿ ನಗರ ವೀಕ್ಷಣೆ ಹಾಗೂ ದೇವಲ್‌ಗಾಣಗಾಪುರ ಸ್ಥಳಗಳಿಗೆ ಒಂದು ದಿನದ 180 ರೂ. ಪ್ಯಾಕೇಜ್‌, ನಾಗಾವಿ, ಸನ್ನತಿ ಸ್ಥೂಪ್‌, ಕೋರಿ ಸಿದ್ದೇಶ್ವರ ದರ್ಶನಕ್ಕೆಂದು ಮತ್ತೂಂದು ಪ್ರವಾಸಿ ಮಾರ್ಗರೂಪಿಸಿ ಒಬ್ಬರಿಗೆ 390 ರೂ. ದರ ನಿಗದಿ ಮಾಡಲಾಗಿದೆ. ಕಲಬುರಗಿ ನಗರದಲ್ಲಿ ಶರಣಬಸವೇಶ್ವರ, ಕೋಟೆ, ಖಾಜಾ ಬಂದೇನವಾಜ್‌ ಸ್ಥಳಗಳು ಸೇರಿವೆ ಎಂದರು.

ಆನ್‌ಲೈನ್‌-ಆಫ್‌ಲೈನ್‌ಲ್ಲಿ ಟಿಕೆಟ್‌ ಬುಕ್ಕಿಂಗ್‌: ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಟಿಕೆಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಇಲ್ಲವೇ ಆಫ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಮೂರು ದಿನದ ತಿರುಪತಿಗೆ ಒಬ್ಬರಿಗೆ 3400 ರೂ. ದರವಿದ್ದು, ಪ್ರತಿ ಮಂಗಳವಾರ ಮತ್ತು ಗುರುವಾರದಂದು ಕಲಬುರಗಿ ನಗರದ
ಸಾರ್ವಜನಿಕ ಉದ್ಯಾನವನದ ನಿಗಮದ ಯಾತ್ರಿಕ ನಿವಾಸದಿಂದ ಮಧ್ಯಾಹ್ನ 2:00 ಗಂಟೆಯಿಂದ ಹೊರಡಲಿದೆ. ಅದೇ ರೀತಿ ಎರಡು ಹಗಲು, ಎರಡು ರಾತ್ರಿ ಒಳಗೊಂಡ ನಾಲ್ಕು ದಿನದ ಶಿರಡಿ, ನಾಸಿಕ್‌, ತೃಂಭಕೇಶ್ವರ, ಶನಿಸಿಂಗನಾಪುರಕ್ಕೆ ಒಬ್ಬರಿಗೆ 3500 ರೂ., ದರ ನಿಗದಿ ಮಾಡಲಾಗಿದ್ದರೆ ಪ್ರತಿ ಶುಕ್ರವಾರ ಹೊರಡಲಿದೆ. ಎರಡು ರಾತ್ರಿ, ಎರಡು ಹಗಲು ದಿನಗಳನ್ನು ಒಳಗೊಂಡ ನಾಲ್ಕು ದಿನದ ಶ್ರೀಶೈಲ್‌, ಮಹಾನಂದಿ, ಸಾಕ್ಷಿ ಗಣೇಶ ಕ್ಷೇತ್ರಗಳಿಗೆ ಪ್ರತಿ ಬುಧವಾರ ಮತ್ತು ಶುಕ್ರವಾರ ದಂದು ಹೊರಡಲಿದ್ದು, ಒಬ್ಬರಿಗೆ 2900 ರೂ. ದರ ನಿಗದಿ ಮಾಡಲಾಗಿದೆ. ಶೀಘ್ರ ದರ್ಶನಕ್ಕಾಗಿ ದೇಗುಲದ ಆಡಳಿತ ಮಂಡಳಿ ಜತೆ ನಿಗಮದ ಅಧಿಕಾರಿಗಳು ಮಾತನಾಡಿ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.

ಪ್ರವಾಸ ಹೊರಡುವ 48 ಗಂಟೆಗಳ ಮೊದಲೇ ಕಾಯ್ದಿರಿಸಿದ ಟಿಕೆಟ್‌ ರದ್ದುಪಡಿಸಿದಲ್ಲಿ ಶೇ. 10ರಷ್ಟು ಕಡಿತಗೊಳಿಸಿ ಉಳಿದ ಮೊತ್ತ ಮಾತ್ರ ಮರುಪಾವತಿಸಲಾಗುವುದು ಅದೇ ರೀತಿ ಪ್ರವಾಸಕ್ಕೆ ಹೊರಡುವ 48 ಗಂಟೆಗಳ ನಂತರ ಟಿಕೆಟ್‌ ರದ್ದುಪಡಿಸಿದಲ್ಲಿ ಶೇ. 25ರಷ್ಟು ಕಡಿತಗೊಳಿಸಿ ಉಳಿದ ಮೊತ್ತ ಮಾತ್ರ ಮರುಪಾವತಿಸಲಾಗುವುದು ಎಂದು ಹೇಳಿದರು. 

ಪ್ರಯಾಣಿಕರು ಪ್ರವಾಸಿ ಪ್ಯಾಕೇಜ್‌ಗಾಗಿ ಹಾಗೂ ಟಿಕೆಟ್‌ ಬುಕ್ಕಿಂಗ್‌ ಸಲುವಾಗಿ ದೂ. ಸಂ. 08472-249919ಕ್ಕೆ ಅಥವಾ ಮೊ.ಸಂ. 9611658770ಕ್ಕೆ ಸಂಪರ್ಕಿಬಹುದು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ
ಅಲ್ಲಂಖಾನ್‌, ನಿಗಮದ ವ್ಯವಸ್ಥಾಪಕ ನಿರ್ದೇಶಕ ಪುಷ್ಕರಕುಮಾರ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next