Advertisement

ಅಕ್ಟೋಬರ್‌ 5ಕ್ಕೆ ನಟ ಸಾರ್ವಭೌಮ, ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ

03:56 PM Jul 16, 2018 | Team Udayavani |

ಮೊದಲ ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸ್ಟಾರ್‌ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆ.  ಹಾಗಾಗಿಯೇ ಸ್ಟಾರ್‌ ನಟರ ಅಭಿಮಾನಿಗಳು ಮುಂದಿನ ಆರು ತಿಂಗಳಿನತ್ತ ದೃಷ್ಟಿನೆಟ್ಟು ಕೂತಿದ್ದಾರೆ. “ನಮ್‌ ಬಾಸ್‌ ಸಿನಿಮಾ ಯಾವಾಗ ಬರುತ್ತೆ’ ಎಂದು ಲೆಕ್ಕ ಹಾಕುತ್ತಿರುವಾಗಲೇ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿಗಳಿಗೊಂದು ಸಿಹಿಸುದ್ದಿ ಸಿಕ್ಕಿದೆ. ಅದು ಅವರ ಹೊಸ ಸಿನಿಮಾದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಅದು ಅಕ್ಟೋಬರ್‌ 5. ಹೌದು, ಪುನೀತ್‌ರಾಜಕುಮಾರ್‌ ಅವರ “ನಟ ಸಾರ್ವಭೌಮ’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಅಕ್ಟೋಬರ್‌ 5ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. 

Advertisement

ಈ ಮೂಲಕ ಸ್ಟಾರ್‌ ಸಿನಿಮಾಗಳ ಬಿಡುಗಡೆಯ ಭರಾಟೆ ಆರಂಭವಾಗಿದೆ. ಅತ್ತ ಕಡೆ “ಕುರುಕ್ಷೇತ್ರ’, “ಕೆಜಿಎಫ್’, “ದಿ ವಿಲನ್‌’ ಚಿತ್ರಗಳ ಬಿಡುಗಡೆಯ ದಿನಾಂಕ ಇನ್ನೂ ಫೈನಲ್‌ ಆಗದೇ, ಅಭಿಮಾನಿಗಳು ಕನ್‌ಫ್ಯೂಶನ್‌ ನಲ್ಲಿರುವಾಗಲೇ ಪುನೀತ್‌ ಚಿತ್ರದ ಬಿಡುಗಡೆಯ ದಿನಾಂಕವನ್ನುಚಿತ್ರತಂಡ ಬಹುತೇಕ ಅಂತಿಮಗೊಳಿಸಿದೆ.

ಮುಹೂರ್ತ ನಡೆದ ದಿನದಿಂದಲೂ ಸತತವಾಗಿ ಚಿತ್ರೀಕರಣದಲ್ಲಿದ್ದ “ನಟ ಸಾರ್ವಭೌಮ’ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದೆ. ಜೊತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡಾ ಜೋರಾಗಿ ನಡೆಯುತ್ತಿವೆ. ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದು, ಪವನ್‌
ಒಡೆಯರ್‌ ನಿರ್ದೇಶನವಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ.ಇನ್ನು ಚಿತ್ರದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.

ತುಂಬಾ ವರ್ಷಗಳ ನಂತರ ಅವರು ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಕೂಡಾ ಪ್ರಮುಖವಾಗಿದೆ. ಚಿತ್ರಕ್ಕೆ ಡಿ ಇಮಾನ್‌ ಸಂಗೀತ ನೀಡುತ್ತಿದ್ದು, ವೈದಿ ಛಾಯಾಗ್ರಹಣವಿದೆ. ಈ ಹಿಂದೆ ಪವನ್‌ ಒಡೆಯರ್‌ ಅವರ “ಗೂಗ್ಲಿ’ ಹಾಗೂ “ರಣವಿಕ್ರಮ’ 
ಚಿತ್ರಗಳಿಗೂ ವೈದಿ ಛಾಯಾಗ್ರಹಣವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next