Advertisement

ಕೊರೊನಾಕ್ಕೆ ಭಯಪಡಬೇಡಿ, ಧೈರ್ಯವಾಗಿ ಎದುರಿಸಿ: ಪುನೀತ್ ರಾಜ್ ಕುಮಾರ್

03:20 PM Apr 24, 2021 | Team Udayavani |

ದಿನದಿಂದ ದಿನಕ್ಕೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದೆ. ಇದು ಸಹಜವಾಗಿಯೇ ಜನಸಾಮಾನ್ಯರಲ್ಲಿ ಭಯ-ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ನಟ ಪವರ್ ಸ್ಟಾರ್‌ ಪುನೀತ್‌ ರಾಜಕುಮಾರ್‌, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Advertisement

“ಒಂದು ವೇಳೆ ಕೊರೋನಾ ಪಾಸಿಟಿವ್‌ ಬಂದ್ರೂ ಬೇಜಾರಾಗಬೇಡಿ, ಭಯ ಪಡಬೇಡಿ. ಧೈರ್ಯವಾಗಿ ಎದುರಿಸಿ. ಮಾಸ್ಕ್ ಧರಿಸೋದು ಮರಿಬೇಡಿ. ಸುರಕ್ಷತಾ ಕ್ರಮಗಳನ್ನು ಅನುಸರಿಸಿ’ ಎಂದು ಪವರ್‌ಸ್ಟಾರ್‌ ಮನವಿ ಮಾಡಿದ್ದಾರೆ.

ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಪುನೀತ್‌ ರಾಜಕುಮಾರ್‌, “ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ವ್ಯಾಕ್ಸಿನೇಷನ್‌ ಶುರುವಾಗಿದೆ. ನಾನು ಕೂಡ ಮೊದಲ ಹಂತದ ವ್ಯಾಕ್ಸಿನ್‌ ತೆಗೆದುಕೊಂಡಿದ್ದೇನೆ. ವ್ಯಾಕ್ಸಿನ್‌ ತುಂಬ ಸುರಕ್ಷಿತವಾಗಿದೆ. ಹಾಗಾಗಿ, ಎಲ್ಲರೂ ಹೋಗಿ ವ್ಯಾಕ್ಸಿನ್‌ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ದೃಶ್ಯವೊಂದಕ್ಕಾಗಿ ರಾಜ್‌ ಕುಮಾರ್ ಎಂಟು ಗಂಟೆ ಕದಲದೇ ನಿಂತೇ ಇದ್ದರು!

“ಹಾಗೆಯೇ ದಯವಿಟ್ಟು ಎಲ್ಲ ಕಡೆ ಮಾಸ್ಕ್ಗಳನ್ನು ಹಾಕಿಕೊಳ್ಳುವುದನ್ನು ಮರೆಯಬೇಡಿ. ಅದರಲ್ಲೂ ಮುಖ್ಯವಾಗಿ ಜನರ ಮಧ್ಯೆ ಇರುವಾಗ, ಕೆಲಸಗಳಿಗೆ ಹೋಗುವಾಗ ಮರೆಯದೇ ಮಾಸ್ಕ್ ಬಳಸಿ. ಈ ಹೊತ್ತಿನಲ್ಲಿ ಮಾಸ್ಕ್ ತುಂಬ ಮಹತ್ವದ್ದು’ ಎಂದು ಮಾಸ್ಕ್ ಬಳಕೆಯ ಬಗ್ಗೆ ಕರೆ ನೀಡಿದ್ದಾರೆ.

Advertisement

“ಈಗ ಕೊರೊನಾ ಅಲೆ ಹೆಚ್ಚಾಗುತ್ತಿದ್ದು, ಆಕಸ್ಮಾತ್‌ ನಮಗೆ ಸೋಂಕು ತಗುಲಿದರೆ, ಭಯಪಡೋದು ಬೇಡ. ಧೈರ್ಯವಾಗಿರೋಣ. ಸಂಬಂಧಪಟ್ಟವರಿಗೆ ಕರೆ ಮಾಡಿ, ಆಸ್ಪತ್ರೆಗೆ ಹೋಗಬೇಕಾ? ಮನೆಯಲ್ಲೇ ಇರೋದಾ ಎಂದು ತಿಳಿದುಕೊಂಡು ಚಿಕಿತ್ಸೆ ಪಡೆಯೋಣ. ಮನೆಯಲ್ಲೇ ಕ್ವಾರಂಟೈನ್‌ ಆಗಿ, ನಮ್ಮ ಕೊರೋನಾ ವರದಿ ನೆಗೆಟಿವ್‌ ಆದಮೇಲೆ ಹೊರಗೆ ಬರೋಣ. ಅದರ ಜೊತೆಗೆ ಸರ್ಕಾರದ ರೂಲ್ಸ್ ಗಳನ್ನು ನಾವು ಫಾಲೋ ಮಾಡೋಣ’ ಎಂದಿದ್ದಾರೆ ಅಪ್ಪು.

“ಕೊರೋನಾ ಬಂದಿದೆ ಅಂದಾಕ್ಷಣ ಯಾರೂ ಭಯಪಟ್ಟು ಕೊಳ್ಳಬೇಕಾದ ಅಗತ್ಯವಿಲ್ಲ. ಕೊರೋನಾ ಬಂದರೆ ಬೇಜಾರು ಮಾಡಿಕೊಳ್ಳಬೇಡಿ. ಧೈರ್ಯವಾಗಿದ್ದು, ಬೇಕಾದ ಟ್ರೀಟ್‌ಮೆಂಟ್‌ ಪಡೆಯೋಣ. ಇದರಲ್ಲಿ ನಾಚಿಕೆ ಪಟ್ಟುಕೊಳ್ಳುವುದು, ಭಯ ಪಡುವುದು ಏನೂ ಇಲ್ಲ. ತುಂಬ ಕಾನ್ಫಿಡೆಂಟ್‌ ಆಗಿರಿ. ನಮ್ಮ ಕೆಲಸಗಳನ್ನು ನಾವುಮಾಡಲೇಬೇಕು. ಆದ್ದರಿಂದ ನಿಯಮಗಳನ್ನು ಫಾಲೋ ಮಾಡಿಕೊಂಡು ಕೆಲಸ ಮಾಡಿಕೊಳ್ಳೋಣ’ ಎಂದಿದ್ದಾರೆ ಪುನೀತ್‌.

ಸದ್ಯ ಬೆಂಗಳೂರು ನಗರ ಪೊಲೀಸ್‌ ತಮ್ಮ ಟ್ವಿಟ್ಟರ್‌ ಪೇಜ್‌ನಲ್ಲಿ ಪುನೀತ್‌ ರಾಜಕುಮಾರ್‌ ಜನರಿಗೆ ಕರೆಕೊಟ್ಟ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದು, ಅಪ್ಪು ಆಡಿರುವ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next