Advertisement
ಸ್ಟಾರ್ ನಟನಾದರೂ ಅಹಂ ಇಲ್ಲಇಡೀ ಚಿತ್ರರಂಗ ಪುನೀತ್ ಅವರನ್ನು ಇಷ್ಟಪಡಲು ಕಾರಣ ಅವರ ವ್ಯಕ್ತಿತ್ವ. ಸಾಮಾನ್ಯವಾಗಿ ಸ್ಟಾರ್ ನಟರಾದ ಮೇಲೆ ಸಹಜವಾಗಿಯೇ ಇನ್ನೊಬ್ಬ ಸ್ಟಾರ್ ನಟನ ಮೇಲೆ ಹೊಟ್ಟೆಕಿಚ್ಚು ಇರುತ್ತದೆ. ಮತ್ತೂಬ್ಬ ಸ್ಟಾರ್ ನಟ ಬರುವ ವೇದಿಕೆಯಲ್ಲಿ ತಾನು ಬೆರೆಯುವುದಿಲ್ಲ ಎಂಬ ಧೋರಣೆಯನ್ನು ಹೊಂದಿರುತ್ತಾರೆ.
ಬೇರೆ ನಟರ ಸಿನಿಮಾಗಳು ಬಿಡುಗಡೆಯಾದಾಗ, ಹುಟ್ಟುಹಬ್ಬವಾದಾಗ ಶುಭ ಕೋರುತ್ತಿದ್ದರು. ಇಂಥ ಆತ್ಮೀಯ ವ್ಯಕ್ತಿತ್ವದ ಪುನೀತ್ ರಾಜ್‌ಕುಮಾರ್ ಇವತ್ತು ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ.
Related Articles
Advertisement
ಪುನೀತ್ ಅವರು “ನಿರ್ಮಾಪಕ ಸ್ನೇಹಿ ನಟ’ ಕೂಡ ಆಗಿದ್ದರು. ಸ್ಟಾರ್ ನಟರಾಗಿದ್ದು, ದೊಡ್ಡ ಅಭಿಮಾನಿ ಸಮೂಹವನ್ನು ಹೊಂದಿದ್ದರೂ, ಯಾವತ್ತಿಗೂ ದುರಹಂಕಾರ ಮೆರೆದವರಲ್ಲ. ನಿರ್ದೇಶಕರು ಹೇಳಿದ ಸಮಯಕ್ಕೆ ಶೂಟಿಂಗ್ ಸೆಟ್‌ನಲ್ಲಿರುವ ಜೊತೆಗೆ ದುಂದುವೆಚ್ಚದಿಂದ ನಿರ್ಮಾಪಕರನ್ನು ಪಾರು ಮಾಡುತ್ತಿದ್ದರು. ಅದೇ ಕಾರಣದಿಂದ ಪುನೀತ್ ಜೊತೆ ಒಮ್ಮೆ ಸಿನಿಮಾ ಮಾಡಿದ ನಿರ್ಮಾಪಕ, ನಿರ್ದೇಶಕರು ಮತ್ತೆ ಮತ್ತೆ ಸಿನಿಮಾ ಮಾಡಲು ಬಯಸುತ್ತಿದ್ದರು.
ಇದನ್ನೂ ಓದಿ:ವೆಸ್ಟ್ ಇಂಡೀಸ್ ಎದುರು ನಡೆದ ರೋಚಕ ಹೋರಾಟದಲ್ಲಿ ಬಾಂಗ್ಲಾಕ್ಕೆ ಸೋಲು
ಕೊನೆ ಕಾರ್ಯಕ್ರಮದಲ್ಲಿ ಪುನೀತ್ ಮಾತುಪುನೀತ್ ರಾಜ್‌ಕುಮಾರ್ ಸಾಕಷ್ಟು ಸಿನಿಮಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಿದ್ದರು. ಈ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸುತ್ತಿದ್ದರು. ಇತ್ತೀಚೆಗೆ ಪುನೀತ್‌ರಾಜ್‌ಕುಮಾರ್ ಹಾಗೆ ಅತಿಥಿಯಾಗಿ ಹೋದ ಎರಡು ಕಾರ್ಯಕ್ರಮಗಳೆಂದರೆ “ಭಜರಂಗಿ-2′ ಪ್ರೀ ರಿಲೀಸ್ ಇವೆಂಟ್ ಮತ್ತು “ಮಹಾಯೋಗಿ ಸಿದ್ದರೂಢ’ ಚಿತ್ರದ ಟ್ರೇಲರ್ ಬಿಡುಗಡೆ. ಪುನೀತ್ ರಾಜ್‌ಕುಮಾರ್ ಭಾಗವಹಿಸಿದ ಕೊನೆಯ ಸಿನಿಮಾ ಕಾರ್ಯಕ್ರಮ “ಮಹಾಯೋಗಿ ಸಿದ್ದರೂಢ’. ಅ.27ರಂದು ನಡೆದಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್, ಮಠದ ಹಾಗೂ ತಮ್ಮ ಕುಟುಂಬದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಕೊನೆಯ ಸಿನಿಮಾ ಕಾರ್ಯಕ್ರಮದಲ್ಲಿ ಪುನೀತ್ ಮಾತನಾಡಿದ ಮಾತು ಹೀಗಿದೆ, “ನಮ್ಮ ಮನೆಗೂ, ಸಿದ್ದರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಸಿದ್ದರೂಢರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು’ ಎಂದಿದ್ದರು. ಅಂದು ಸ್ವಾಮೀಜಿ ಪುನೀತ್ ಅವರನ್ನು ಸಮ್ಮಾನಿಸಿದರು. ಮಲ್ಲೇಶ್ವರಂ ಎಸ್‌ಆರ್‌ವಿ ಮಿನಿ ಚಿತ್ರಮಂದಿರದಲ್ಲಿ ನಡೆದಿದ್ದ ಈ ಕಾರ್ಯಕ್ರಮ ಮುಗಿಸಿ ಪುನೀತ್ ಕೆಳಗಡೆ ಬರುತ್ತಿದ್ದಂತೆ, ಸಾಕಷ್ಟು ಮಂದಿ ಫೋಟೋ ತೆಗೆಸಿಕೊಳ್ಳಲು ಬಂದರು. ಅವರೆಲ್ಲರ ಜೊತೆ ನಗು ನಗುತ್ತಲೇ ಫೋಟೋಗೆ ಫೋಸ್ ಕೊಟ್ಟ ಪುನೀತ್ ಕಾರು ಹತ್ತಿಕೊಂಡು ಹೊರಟೇ ಬಿಟ್ಟರು. ಅದೇ ಅವರ ಕೊನೆಯ ಸಿನಿಮಾ ಕಾರ್ಯಕ್ರಮವಾಗುತ್ತದೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಸೇವೆಗೆಂದೇ ನಿಗದಿತ ಮೊತ್ತ ಮೀಸಲಿಡುತ್ತಿದ್ದ ಪುನಿತ್
“ಡಾ. ರಾಜ್ ಫೌಂಡೇಶನ್’ ಮೂಲಕ ಪುನೀತ್ ರಾಜಕುಮಾರ್ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಸದ್ದಿಲ್ಲದೆ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದರು. ತಮ್ಮ ಸಂಭಾವನೆಯಲ್ಲಿ ಬರುವ ಒಂದು ನಿಗದಿತ ಮೊತ್ತವನ್ನು ಪುನೀತ್ ತಮ್ಮ ಟ್ರಸ್ಟ್‌ನ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಿಡುತ್ತಿದ್ದರು. ತಾವು ಹಾಡುವ ಪ್ರತಿ ಸಿನಿಮಾದ ಹಾಡಿನ ಸಂಭಾವನೆಯನ್ನು ಪುನೀತ್ ತಮ್ಮ ಟ್ರಸ್ಟ್‌ನ ಸಾಮಾಜಿಕ ಕೆಲಸಗಳಿಗೆ ನೀಡುವಂತೆ ಅದರ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಹೇಳುತ್ತಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಆರ್ಥಿಕವಾಗಿ ಹಿಂದುಳಿದ ನೂರಾರು ಕುಟುಂಬಗಳಿಗೆ ತಮ್ಮ ಸಂಸ್ಥೆಯ ಮೂಲಕ ಪುನೀತ್ ವೈದ್ಯಕೀಯ ಮತ್ತು ಹಣಕಾಸು ನೆರವು ಒದಗಿಸುತ್ತಿದ್ದರು. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಕಂಪ್ಯೂಟರ್ ಮತ್ತಿತರ ಶೈಕ್ಷಣಿಕ ಸೌಕರ್ಯಗಳನ್ನು ಈ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಇತ್ತೀಚೆಗೆ ವಿಶೇಷ ಆ್ಯಪ್ ಒಂದನ್ನು ಕೂಡ ಪುನೀತ್ ರಾಜಕುಮಾರ್ ಅವರ ಸಂಸ್ಥೆ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿತ್ತು. ಅನ್ನ, ಅಕ್ಷರ, ಆರೋಗ್ಯ ಸೇರಿದಂತೆ ಜನರ ಮೂಲಭೂತ ಅಗತ್ಯಗಳಿಗೆ ತಮ್ಮಿಂದಾಗುವ ನೆರವು ನೀಡುವ ಸಲುವಾಗಿಯೇ ಹೆಚ್ಚು ಗಮನ ಹರಿಸುವಂತೆ ಪುನೀತ್ ತಮ್ಮ ಸಂಸ್ಥೆಯ ಕಾರ್ಯಗಳನ್ನು ರೂಪಿಸುತ್ತಿದ್ದರು. ಹೆಚ್ಚಿನ ಪ್ರಚಾರವಿಲ್ಲದೆ ತೆರೆಮರೆಯಲ್ಲಿಯೇ ಪುನೀತ್ ರಾಜಕುಮಾರ್ ಟ್ರಸ್ಟ್ ಕೆಲಸಗಳು ನಡೆಯುತ್ತಿದ್ದು, ಪುನೀತ್ ಎಂದಿಗೂ ಈ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ.