Advertisement

ತಿರುಗೋ ಭೂಮಿ ನಿಂತಿದೆ ಕೊರಗಿ

01:56 AM Oct 30, 2021 | Team Udayavani |

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರ “ರಾಜಕುಮಾರ’ ಚಿತ್ರದ “ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ, ನೀನೇ ರಾಜಕುಮಾರ’ ಎಂಬ ಹಾಡಿನ ಸಾಲುಗಳು ಪುನೀತ್‌ ಅವರನ್ನೇ ವರ್ಣಿಸುವಂತಿವೆ. ಅವರೊಬ್ಬ ಪರಿಪೂರ್ಣ ಜಂಟಲ್‌ಮನ್‌. ಇಡೀ ಕುಟುಂಬ ಒಪ್ಪುವಂಥ ನಟ.

Advertisement

ಹೀಗೆ ಮನೆ- ಮನದ ತುಂಬೆಲ್ಲ ಆವರಿಸಿದ್ದ ಪುನೀತ್‌ ರಾಜ್‌ಕುಮಾರ್‌ ಈಗ ನಮ್ಮೊಂದಿಗಿಲ್ಲ. ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿರುವಾಗ ಕುಸಿದುಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬದುಕುಳಿ ಸಲು ಶತಪ್ರಯತ್ನ ಮಾಡಲಾಯಿ ತಾದರೂ ವೈದ್ಯರ ಸಾಹಸ, ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫ‌ಲಿಸಲಿಲ್ಲ, ಯುವರತ್ನ ವನ್ನು ಬದುಕಿಸಿಕೊಳ್ಳಲು ಆಗಲಿಲ್ಲ.

ಆರಿದ ದೀಪ
“ದೊಡ್ಡಮನೆ’ಯ ಶಕ್ತಿ, ಕನ್ನಡ ಚಿತ್ರರಂಗದ ಎಲ್ಲರ ಮನೆಯ ಮಗ ನಂತಿದ್ದ ಪ್ರೀತಿಯ ಅಪ್ಪು ಬಾರದ ಲೋಕಕ್ಕೆ ತೆರಳಿ ದೀಪಾವಳಿಗೆ ಮುನ್ನವೇ ಎಲ್ಲರ ಮನೆ -ಮನ ಬೆಳಗುವ ದೀಪ ಆರಿದಂತಾಗಿದೆ.

1975ರ ಮಾ. 17ರಂದು ಮೇರು ನಟ ಡಾ| ರಾಜ್‌ಕುಮಾರ್‌ ಮತ್ತು ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಪುತ್ರನಾಗಿ ಜನಿಸಿದ ಪುನೀತ್‌ ಶುಕ್ರ ವಾರ ಬೆಳಗ್ಗೆ 11.30ಕ್ಕೆ ತಮ್ಮ 46ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಪತ್ನಿ ಅಶ್ವಿ‌ನಿ ಮತ್ತು ಇಬ್ಬರು ಪುತ್ರಿಯರು, ಸಹೋದರರಾದ ಶಿವರಾಜಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಸೋದರಿ ಪೂರ್ಣಿಮಾ ಮತ್ತು ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ಅತೀ ಚಿಕ್ಕ ವಯಸ್ಸು ಅಂದರೆ, ಐದನೇ ವಯಸ್ಸಿನಲ್ಲಿಯೇ ಬಾಲ ನಟನಾಗಿ “ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಪುನೀತ್‌ ರಾಜಕುಮಾರ್‌, ಬಾಲನಟ ನಾಗಿ ನಟಿಸಿದ್ದ “ಬೆಟ್ಟದ ಹೂ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗದ ಪ್ರೀತಿಯ “ಅಪ್ಪು’ವಾಗಿ ಗುರುತಿಸಿಕೊಂಡಿದ್ದರು.

Advertisement

“ಅಪ್ಪು’ ಚಿತ್ರದ ಮೂಲಕ ನಾಯಕ ನಟರಾಗಿ ಬೆಳ್ಳಿ ತೆರೆಯ ಮೇಲೆ ಕಲಾ ಜೀವನ ಮುಂದುವರಿಸಿದ್ದ ಪುನೀತ್‌ ರಾಜಕುಮಾರ್‌ ಅನಂತರ ಅಭಿ, ಆಕಾಶ್‌, ಮಿಲನ, ಅಜಯ್‌, ವೀರ ಕನ್ನಡಿಗ, ನಮ್ಮ ಬಸವ, ರಾಮ್‌, ಜಾಕಿ, ಪೃಥ್ವಿ, ಹುಡುಗರು, ಅಣ್ಣಾಬಾಂಡ್‌, ವಂಶಿ, ರಾಜಕುಮಾರ, ನಟ ಸಾರ್ವಭೌಮ, ದೊಡ್ಮನೆ ಹುಡುಗ, ಪರಮಾತ್ಮ, ಯುವರತ್ನ ಸೇರಿದಂತೆ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದರು.

ಇದನ್ನೂ ಓದಿ:ಶ್ರೀಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ನಮನ

ಎದೆ ನೋವು
ಶುಕ್ರವಾರ ಎಂದಿನಂತೆ ಪುನೀತ್‌ ರಾಜಕುಮಾರ್‌ ತಮ್ಮ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆ ಯಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿದ್ದು, ತತ್‌ಕ್ಷಣ ತಮ್ಮ ಕುಟುಂಬದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದರು. ಅಲ್ಲಿಯೇ ಅವರಿಗೆ ಇಸಿಜಿ ಮಾಡಿಸ ಲಾಗಿದ್ದು, ಆಗಲೇ ಅವರಿಗೆ ಹೃದಯಾಘಾತ ಆಗಿರುವ ಮಾಹಿತಿ ಲಭ್ಯವಾಗಿತ್ತು. ತತ್‌ಕ್ಷಣ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ಆಗ ಮಿಸುವಷ್ಟರಲ್ಲಿಯೇ ಪುನೀತ್‌  ಅಸುನೀಗಿದ್ದರು ಎಂದು ವಿಕ್ರಂ ಆಸ್ಪತ್ರೆ ವೈದ್ಯರು  ಹೇಳಿಕೆ ನೀಡಿದ್ದಾರೆ.

ಸಿಎಂ ದೌಡು
ಗೃಹ ಕಚೇರಿ “ಕೃಷ್ಣಾ’ದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಪುನೀತ್‌ಗೆ ಹೃದಯಾಘಾತವಾಗಿರುವ ಸುದ್ದಿ ತಿಳಿದ ತತ್‌ಕ್ಷಣ ವಿಕ್ರಂ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯರೊಂದಿಗೆ  ಸುದೀರ್ಘ‌ ಸಮಾಲೋಚನೆ ನಡೆಸಿದರು. ಅಲ್ಲದೆ ತಮ್ಮ ಎಲ್ಲ ಸರಕಾರಿ ಕಾರ್ಯಕ್ರಮಗಳು ಮತ್ತು ಶನಿವಾರದ ಜಿಲ್ಲಾ ಪ್ರವಾಸವನ್ನು ರದ್ದುಗೊಳಿಸಿದರು. ಅವರಿಗೆ ಹೃದಯಾಘಾತವಾಗಿರುವ ಸುದ್ದಿ ಮಿಂಚಿನಂತೆ ಎಲ್ಲೆಡೆ ಪ್ರಸಾರವಾಗಿ ನಟ ಯಶ್‌, ದರ್ಶನ್‌ ಸೇರಿದಂತೆ ಚಲನಚಿತ್ರ ರಂಗದ ಗಣ್ಯರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ಧಾವಿಸಿದರು.

ಅಧಿಕೃತ ಘೋಷಣೆ
ನಟ ಪುನೀತ್‌ ರಾಜಕುಮಾರ್‌ ವಿಕ್ರಂ ಆಸ್ಪತ್ರೆಗೆ ಬೆಳಗ್ಗೆ 11.30ರ ಸುಮಾರಿಗೆ ದಾಖಲಾಗಿದ್ದರು. ಅವರು ನಿಧನ ಹೊಂದಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೊದಲು ಸರಕಾರ ಎಲ್ಲ ರೀತಿಯ ಮುಂಜಾ ಗ್ರತೆ ಕ್ರಮ ಕೈಗೊಂಡು ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಿಗೆ ಬಿಗಿ ಭದ್ರತೆಯ ಸೂಚನೆ ನೀಡಿತ್ತು.   ಬೊಮ್ಮಾಯಿ ಅವರು ನಟ ಶಿವರಾಜಕುಮಾರ್‌ ಜತೆಗೆ ಮುಂದಿನ ಕಾರ್ಯ ವಿಧಾನಗಳ ಕುರಿತು ಚರ್ಚೆ ನಡೆಸಿದರು. ಅನಂತರ ಕಂದಾಯ ಸಚಿವ ಆರ್‌. ಅಶೋಕ್‌ ಮಧ್ಯಾಹ್ನ 3.30ರ ಸುಮಾರಿಗೆ ಪುನೀತ್‌ ರಾಜಕುಮಾರ್‌ ವಿಧಿವಶರಾಗಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಿದರು.

ಅಪರಾಹ್ನ ಪುನೀತ್‌ ರಾಜಕುಮಾರ್‌ ಅವರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಸದಾಶಿವ ನಗರದಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಸದಾಶಿವ ನಗರದ ನಿವಾಸದಿಂದ ಪಾರ್ಥಿವ ಶರೀರವನ್ನು ಸಾರ್ವ ಜನಿಕರ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣಕ್ಕೆ ತೆಗೆದುಕೊಂಡು ಹೋಗಲಾಯಿತು.

ಕನ್ನಡ ಚಿತ್ರರಂಗಕ್ಕೆ ಆಘಾತ
ಪುನೀತ್‌ ರಾಜ್‌ಕುಮಾರ್‌ ಅವರ ಅಗಲುವಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ. ಕೋವಿಡ್‌ನಿಂದ ಕಂಗೆಟ್ಟಿದ್ದ ಚಿತ್ರರಂಗ ಈಗಷ್ಟೇ ಚೇತರಿಕೆ ಕಾಣುತ್ತಿತ್ತು. ಬಿಡುಗಡೆಯಾದ ಸಿನೆಮಾಗಳು ಗೆಲುವು ತಂದುಕೊಡುತ್ತ ಚಿತ್ರರಂಗದ ಮಂದಿಯ ಮೊಗ ಅರಳಿಸಿದ್ದವು. ಸ್ವತಃ ಪುನೀತ್‌ ಕೂಡ ಸಿನೆಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗೆಲುವನ್ನು ಸಂಭ್ರಮಿಸುತ್ತಿದ್ದರು. ಈಗ ಕನ್ನಡದ ಮುಂಚೂಣಿಯ ಸ್ಟಾರ್‌ ನಟ ಎನಿಸಿಕೊಂಡಿದ್ದ ಪುನೀತ್‌ ಅವರು ನಿಧನ ಹೊಂದಿರುವುದು ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಈ ನೋವಿನಿಂದ ಚಿತ್ರರಂಗ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು. ಜತೆಗೆ ಸಿನೆಮಾಗಳ ಬಿಡುಗಡೆ, ಕಾರ್ಯಕ್ರಮಗಳಲ್ಲೂ ವ್ಯತ್ಯಯವಾಗಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ
ಪುನೀತ್‌ ಪಾರ್ಥಿವ ಶರೀರವನ್ನು ಶುಕ್ರವಾರ ಸಂಜೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಶನಿವಾರ ಸಂಜೆ 5ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.

ಕಂಠೀರವ ಸ್ಟುಡಿಯೋದಲ್ಲೇ ಅಂತ್ಯಸಂಸ್ಕಾರ
ತಂದೆ ರಾಜ್‌ಕುಮಾರ್‌ – ತಾಯಿ ಪಾರ್ವತಮ್ಮ ರಾಜಕುಮಾರ್‌ ಅವರ ಸಮಾಧಿ ಪಕ್ಕದಲ್ಲೇ ಪುನೀತ್‌ ರಾಜಕುಮಾರ್‌ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಲಿದೆ. ಪುನೀತ್‌ ಅವರ ಪುತ್ರಿ ಧೃತಿ ಶನಿವಾರ ರಾತ್ರಿ ವಿದೇಶದಿಂದ ಆಗಮಿಸಲಿದ್ದು, ಅಂತ್ಯಸಂಸ್ಕಾರವನ್ನು ರವಿವಾರ ನಡೆಸುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಬ್ಬರು ಅಂಧರ  ಬಾಳಿಗೆ ಬೆಳಕಾದರು!
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪುನೀತ್‌, ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್‌ ನಿಧನದ ಬಳಿಕ ಎರಡೂ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ವಾಗಿ ನೀಡಿದ್ದು, ರವಿವಾರ ಇಬ್ಬರು ಅಂಧರಿಗೆ ಕಣ್ಣುಗಳ ಕಸಿ ಮಾಡಲಾಗುತ್ತದೆ ಎಂದು ನೇತ್ರಾಲಯದ ಮುಖ್ಯಸ್ಥ ಡಾ| ಭುಜಂಗಶೆಟ್ಟಿ  ತಿಳಿಸಿದ್ದಾರೆ.

ಉದಯವಾಣಿ ಸಮೂಹದ ಕಂಬನಿ
ಕನ್ನಡ ಚಿತ್ರರಂಗ, ಡಾ| ರಾಜ್‌ಕುಮಾರ್‌ ಕುಟುಂಬ ಮತ್ತು ಉದಯವಾಣಿ ಸಮೂಹದ ನಡುವಣ ಸಂಬಂಧ ಇಂದು ನಿನ್ನೆಯದ್ದಲ್ಲ.
ಉದಯವಾಣಿ ಆರಂಭವಾದ ಲಾಗಾಯ್ತಿ ನಿಂದಲೂ ರಾಜ್‌ಕುಮಾರ್‌ ಕುಟುಂಬದ ಜತೆ ಉದಯವಾಣಿಯ ಸಂಬಂಧ ಅನ್ಯೋನ್ಯ ವಾದುದು. ಈಗ ರಾಜ್‌ ಕುಟುಂಬದ ಅನರ್ಘ್ಯ ರತ್ನ ಪುನೀತ್‌ ಅವರ ನಿಧನಕ್ಕೆ ಪೈ ಕುಟುಂಬ ತೀವ್ರ ಆಘಾತ ವ್ಯಕ್ತಪಡಿಸಿದೆ. ಪುನೀತ್‌ ಅಗಲಿಕೆ ಕನ್ನಡ

ಚಿತ್ರೋದ್ಯಮದಲ್ಲಿ ಮಾತ್ರವಲ್ಲ; ಇಡೀ ರಾಜ್ಯ ದಲ್ಲಿ ಶೂನ್ಯವೊಂದನ್ನು ಸೃಷ್ಟಿಸಿದೆ. ಬಿಕ್ಕಿಬಿಕ್ಕಿ ಅಳುತ್ತಿರುವ ಸಾವಿರಾರು ಜನರನ್ನು ಕಂಡಾಗ ಇಷ್ಟು ವರ್ಷಗಳಲ್ಲಿ ಪುನೀತ್‌ ಸಂಪಾದಿಸಿದ್ದು ಏನು ಎಂಬುದು ಗೊತ್ತಾಗುತ್ತದೆ. ಚುಂಬಕ ಶಕ್ತಿಯ ವ್ಯಕ್ತಿತ್ವ, ಬೆಳದಿಂಗಳಿನಂಥ ನಗೆ, ಆಪ್ತ ಮಾತುಗಳ ಪುನೀತ್‌ ಇನ್ನು ಮುಂದೆ ಒಂದು ಮಧುರ ನೆನಪಾಗಿಯಷ್ಟೇ ನಮ್ಮೊಂದಿಗೆ ಉಳಿಯಲಿದ್ದಾರೆ.

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಅಧ್ಯಕ್ಷರಾದ ಟಿ. ಮೋಹನ್‌ ದಾಸ್‌ ಪೈ, ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಟಿ. ಸತೀಶ್‌ ಪೈ, ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ, ಮಣಿಪಾಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ನ‌ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಗೌತಮ್‌ ಪೈ ಅವರು ಸಂತಾಪ ವ್ಯಕ್ತಪಡಿಸಿದ್ದು, ರಾಜ್‌ ಕುಟುಂಬದ ಸದಸ್ಯರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ ಎಂಬುದಾಗಿ ಉದಯವಾಣಿ ಸಮೂಹ ಪ್ರಾರ್ಥಿಸುತ್ತದೆ ಎಂದಿದ್ದಾರೆ.

ಪುನೀತ್‌ ನಮ್ಮನ್ನು ಅಗಲಿದ್ದನ್ನು ನಂಬಲು ಸಾಧ್ಯವಿಲ್ಲ. ನಿನ್ನೆ (ಅ. 28) ರಾತ್ರಿ 11 ಗಂಟೆಯ ವರೆಗೆ ನನ್ನ ಜತೆಗೇ ಇದ್ದರು. 2-3 ತಾಸು ಒಟ್ಟಿಗೇ ಕಳೆದಿದ್ದೆವು. ನಿನ್ನೆ ಜತೆಗಿದ್ದ ಸ್ನೇಹಿತ ಈಗ ಇಲ್ಲವೆಂದರೆ ಹೇಗೆ ತಾನೇ ನಂಬಲಿ?”ಅಪ್ಪು’ ಸಿನೆಮಾಕ್ಕಿಂತ ಹಿಂದಿನಿಂದಲೂ ಅವರು ನನ್ನ ಸ್ನೇಹಿತ. ಯಾವಾಗಲೂ “ಡೌನ್‌ ಟು ಅರ್ಥ್’ ಆಗಿರುತ್ತಿದ್ದರು. ಪ್ರಾಕ್ಟಿಕಲ್‌ ಆಗಿ ಯೋಚಿಸುತ್ತಿದ್ದರು. ತಾನು ದೊಡ್ಡ ನಟನ ಮಗ, ಸ್ವತಃ ತಾನೇ ಒಬ್ಬ ಸ್ಟಾರ್‌ ಅನ್ನುವ ಅಹಂ ಅವರಿಗಿರಲಿಲ್ಲ. ನಾನು ಅವರನ್ನು ಜೀವನಪೂರ್ತಿ ಮಿಸ್‌ ಮಾಡಿಕೊಳ್ಳುತ್ತೇನೆ.
– ಗುರುಕಿರಣ್‌, ಸಂಗೀತ ನಿರ್ದೇಶಕ

ದುರದೃಷ್ಟ ಪುನೀತ್‌ ಅವರ ಬಾಳಿನಲ್ಲಿ ಕೆಟ್ಟ  ತಿರುವನ್ನು ತಂದಿದೆ. ಇದು ಸಾಯುವ ವಯ ಸ್ಸಲ್ಲ. ಆದರೂ ಪುನೀತ್‌ ನಮ್ಮನ್ನು ಅಗಲಿದ್ದಾರೆ. ಅವರ ಅದ್ಭುತ ವ್ಯಕ್ತಿತ್ವ ಮತ್ತು ನಟನೆಯನ್ನು ಮುಂದಿನ ತಲೆಮಾರುಗಳು ಖಂಡಿತ ನೆನಪಿನಲ್ಲಿ ಇರಿಸಿ ಕೊಳ್ಳಲಿವೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು.
 -ನರೇಂದ್ರ ಮೋದಿ, ಪ್ರಧಾನಮಂತ್ರಿ

ವರನಟ ಡಾ| ರಾಜಕುಮಾರ್‌ ಸುಪುತ್ರ ಪುನೀತ್‌ ಅಕಾಲಿಕ ನಿಧನ ಹೊಂದಿರುವುದು ಅತೀವ ಆಘಾತ ಉಂಟುಮಾಡಿದೆ. ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮೇರುನಟ, ಯೂತ್‌ ಐಕಾನ್‌ ಆಗಿದ್ದ ಪುನೀತ್‌ ನಿಧನ ಹೊಂದಿರುವುದು ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ. ವಿಧಿಯ ಕ್ರೂರ ಆಟ. ವೈಯಕ್ತಿಕವಾಗಿ ಆತ್ಮೀಯ ಸಹೃದಯ ಬಂಧುವನ್ನು ಕಳೆದುಕೊಂಡಿದ್ದೇನೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಏನೋ ಸ್ವಲ್ಪ ಮಿಸ್‌ ಆಗಿದೆ. ಆಕುcವಲಿ ನಾನೇ ಫ‌ಸ್ಟ್‌ ಹೋಗಬೇಕಿತ್ತು. ತಮ್ಮ ನನಗೆ ಪೇಸ್‌ಮೇಕರ್‌ ಮಾಡಿಸಿದ್ದ, ಎರಡೆರೆಡು ಬಾರಿ ನನ್ನನ್ನು ಆಸ್ಪತ್ರೆಗೆ ಸೇರಿಸಿ, ಉಳಿಸಿದ್ದ. ಆದರೆ, ನನ್ನಿಂದ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿಮಾನಿಗಳು ಸಹಿತವಾಗಿ ಎಲ್ಲರೂ ಶಾಂತರೀತಿಯಿಂದ ಇರಬೇಕು. ಅತ್ಯಂತ ಸುರಕ್ಷಿತ ಹಾಗೂ ಪ್ರೀತಿಯಿಂದಲೇ ಅವನನ್ನು ಕಳುಹಿಸಿಕೊಡಬೇಕು.
– ರಾಘವೇಂದ್ರ ರಾಜಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next