Advertisement

ಸಿನಿಕಂಗಳಿಗೆ ಫ್ಯಾಮಿಲಿ ಮ್ಯಾನ್‌

01:06 AM Oct 30, 2021 | Team Udayavani |

ನಾಯಕ ನಟರಾಗಿ ನಟಿಸಿದ ಮೊದಲ ಸಿನಿಮಾ “ಅಪ್ಪು’ವಿನಿಂದ ಹಿಡಿದು ಕೊನೆಯದಾಗಿ ತೆರೆಕಂಡ ಅವರ “ಯುವರತ್ನ’ ಚಿತ್ರಗಳವರೆಗೆ ಪುನೀತ್‌ ಅವರು ಫ್ಯಾಮಿಲಿ ಆಡಿಯನ್ಸ್‌ಗಳನ್ನೇ ಹೆಚ್ಚು ಗುರಿಯಾಗಿಸಿಕೊಂಡಿದ್ದರು. ಕೌಟುಂಬಿಕ ಕಥೆಗಳಿಗೆ ಆದ್ಯತೆ ನೀಡುತ್ತಿದ್ದರು…

Advertisement

ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಫ್ಯಾಮಿಲಿ ಆಡಿಯನ್ಸ್‌ ಹೊಂದಿದ ನಟ ಯಾರೆಂದು ಕೇಳಿದರೆ ಸಿಗುತ್ತಿದ್ದ ಉತ್ತರ, “ಪುನೀತ್‌ ರಾಜ್‌ಕುಮಾರ್‌’!. ಸಾಮಾನ್ಯವಾಗಿ ಸ್ಟಾರ್‌ ನಟರಾದವರಿಗೆ ಅದರಲ್ಲೂ, ಪಕ್ಕಾ ಮಾಸ್‌ ಹೀರೋ ಎನಿಸಿಕೊಂಡವರಿಗೆ ಫ್ಯಾಮಿಲಿ ಆಡಿಯನ್ಸ್‌ ಕಡಿಮೆ ಇರುತ್ತಾರೆ. ಏನಿದ್ದರೂ ಮಾಸ್‌ ಆಡಿಯನ್ಸ್‌ ಅಷ್ಟೇ ಎಂಬ ಮಾತಿದೆ. ಆದರೆ, ಪುನೀತ್‌ ರಾಜ್‌ಕುಮಾರ್‌ ಮಾತ್ರ ಆ ವಿಷಯವನ್ನು ಸುಳ್ಳು ಮಾಡಿಸಿದ ನಟ.

ನಾಯಕ ನಟರಾಗಿ ನಟಿಸಿದ ಮೊದಲ ಸಿನಿಮಾ “ಅಪ್ಪು’ವಿನಿಂದ ಹಿಡಿದು ಕೊನೆಯದಾಗಿ ತೆರೆಕಂಡ ಅವರ “ಯುವರತ್ನ’ ಚಿತ್ರಗಳವರೆಗೆ ನೀವು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಪುನೀತ್‌ ಅವರು ಫ್ಯಾಮಿಲಿ ಆಡಿಯನ್ಸ್‌ ಟಾರ್ಗೆಟ್‌ ಮಾಡಿರೋದು ಗೊತ್ತೇ ಇದೆ. ಎಲ್ಲಾ ಓಕೆ, ಪುನೀತ್‌ ಮಾಸ್‌ ಕಂ ಫ್ಯಾಮಿಲಿ ಆಡಿಯನ್ಸ್‌ ನಟ ಆಗಿದ್ದು ಹೇಗೆ ಎಂದರೆ ಅದಕ್ಕೆ ಉತ್ತರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆ.

ಪುನೀತ್‌ ಹೀರೋ ಆಗಿ ಸ್ಟಾರ್‌ಪಟ್ಟ ಸಿಕ್ಕ ಬೆನ್ನಿಗೆ ಅವರು, ಆ ಸ್ಟಾರ್‌ಡಮ್‌ನ ತಲೆಗೇರಿಸಿಕೊಳ್ಳದೇ, ತುಂಬಾ ಚೂಸಿಯಾಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದರು. ಒಂದು ಕಥೆಗೆ ಗ್ರೀನ್‌ಸಿಗ್ನಲ್‌ ಕೊಡುವ ಮುನ್ನ ಪುನೀತ್‌ ರಾಜ್‌ಕುಮಾರ್‌ ಅಳೆದು-ತೂಗಿ, ಅದರ ಕಥಾಹಂದರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಒಂದು ಸಿನಿಮಾವನ್ನು ಒಪ್ಪುವ ಮುನ್ನ ಸಾಕಷ್ಟು ಚರ್ಚೆ ಮಾಡುತ್ತಿದ್ದ ಪುನೀತ್‌, ಒಮ್ಮೆ ಸ್ಕ್ರಿಪ್ಟ್ ಲಾಕ್‌ ಆದರೆ, ಯಾವುದೇ ಕಿರಿಕ್‌ ಇಲ್ಲದೇ, ಖುಷಿಯಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು.  ಅವರ ಈ ಗುಣದಿಂದಲೇ ಪುನೀತ್‌ ಏಕಕಾಲಕ್ಕೆ ಕ್ಲಾಸ್‌ ಹಾಗೂ ಮಾಸ್‌ ಹೀರೋ ಆಗಿ ಹೊರಹೊಮ್ಮಿದ್ದು ಸುಳ್ಳಲ್ಲ.

“ಅಜಯ್‌’, “ವಂಶಿ’, “ಮೌರ್ಯ’, “ವೀರ ಕನ್ನಡಿಗ’, “ಪೃಥ್ವಿ’, “ನಿನ್ನಿಂದಲೇ’, “ದೊಡ್ಮನೆ ಹುಡುಗ’, “ರಾಜ್‌ಕುಮಾರ’, “ನಟ ಸಾರ್ವಭೌಮ’, “ಯುವರತ್ನ’… ಹೀಗೆ ಅವರ ಪ್ರತಿ ಸಿನಿಮಾಗಳು ಕೌಟುಂಬಿಕ ಮೌಲ್ಯಗಳೊಂದಿಗೆ ಸಾಗುವ ಮೂಲಕ ಫ್ಯಾಮಿಲಿ ಆಡಿಯನ್ಸ್‌ ಅನ್ನು ಸೆಳೆಯುತ್ತಿತ್ತು. ಅದೇ ಕಾರಣದಿಂದಲೇ ಇತ್ತೀಚೆಗೆ ತೆರೆಕಂಡಿದ್ದ “ಯುವರತ್ನ’ ಚಿತ್ರದಲ್ಲಿ “ನಮಗೆ ಸ್ವಲ್ಪ ಫ್ಯಾಮಿಲಿ ಆಡಿಯನ್ಸ್‌ ಜಾಸ್ತಿ’ ಎಂಬ ಡೈಲಾಗ್‌ ಸ್ವತಃ ಪುನೀತ್‌ ಅವರೇ ಹೇಳಿದ್ದರು.

Advertisement

ಸ್ಟಾರ್‌ ನಟರಾದರೂ ಪುನೀತ್‌ ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದ ರೀತಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಅದೇ ಕಾರಣದಿಂದ ಪುನೀತ್‌ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಪುಟಾಣಿ ಅಭಿಮಾನಿಗಳು ಕೂಡಾ ಇದ್ದಾರೆ. ಅವರ ಮುಂಬರುವ “ಜೇಮ್ಸ್‌’, “ದ್ವಿತ್ವ’ ಚಿತ್ರಗಳಲ್ಲೂ ಫ್ಯಾಮಿಲಿ ಆಡಿಯನ್ಸ್‌ ಸೆಳೆಯುವಂಥ ಅಂಶಗಳನ್ನು ಹೊಂದಿದ್ದವು. ಯಾರೇ ಸಿಕ್ಕಿ, “ಸರ್‌ ಒಂದು ಫೋಟೋ’ ಎಂದರೆ, “ಓ ಅದಕ್ಕೇನಂತೆ ಬನ್ನಿ’ ಎಂದು ಪ್ರೀತಿಯಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದ ಪುನೀತ್‌ ರಾಜ್‌ಕುಮಾರ್‌ ಈಗ ನೆನಪು ಮಾತ್ರ.

ಇದನ್ನೂ ಓದಿ:ಶ್ರೀಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ನಮನ

ತಾನೇ ಉರಿದು ಬೆಳಕು ಕೊಟ್ಟ ದೀಪ
ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಕಾರ್ಯದಲ್ಲೂ ಪುನೀತ್‌ ರಾಜಕುಮಾರ್‌ ಸದಾ ಮುಂದಿರುತ್ತಿದ್ದರು. ರಾಜ್ಯದ ಪ್ರತಿಷ್ಠಿತ “ಹಾಲು ಉತ್ಪಾದಕರ ಮಹಾಮಂಡಲ’ (ಕೆಎಂಎಫ್) ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್‌ “ನಂದಿನಿ’ಗೆ ಪುನೀತ್‌ ರಾಜಕುಮಾರ್‌ ಯಾವುದೇ ಸಂಭಾವನೆ ಪಡೆಯದೆ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿದ್ದರು. “ನಂದಿನಿ’ ಬ್ರ್ಯಾಂಡ್‌ನ‌ ಉತ್ಪನ್ನಗಳನ್ನು ರಾಜ್ಯದ ಮೂಲೆಮೂಲೆಗಳಿಗೂ ತಲುಪಿಸುವಲ್ಲಿ ಪುನೀತ್‌ ರಾಜಕುಮಾರ್‌ ಪ್ರಚಾರ ಕಾರ್ಯ ಕೂಡ ಮಹತ್ವದ ಪಾತ್ರವಹಿಸಿತ್ತು.

ಇದಲ್ಲದೆ “ಸರ್ವ ಶಿಕ್ಷಣ ಅಭಿಯಾನ’ “ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ’, “ಪಲ್ಸ್‌ ಪೊಲಿಯೊ ಜಾಗೃತಿ’, ಚುನಾವಣೆಯ ಸಂದರ್ಭದಲ್ಲಿ “ಮತದಾರ ಜಾಗೃತಿ ಅಭಿಯಾನ’, ಬೆಂಗಳೂರು ಸಂಚಾರ ಪೊಲೀಸ್‌ರ ಸಹಯೋಗದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ, “ರಕ್ತದಾನ ಮಾಡಿ ಜೀವ ಉಳಿಸಿ’, “ಫಿಟ್‌ ಇಂಡಿಯಾ ಚಾಲೆಂಜ್‌’, ಅಂತಾರಾಷ್ಟ್ರೀಯ ಯೋಗ ದಿನ,. “ಸ್ವತ್ಛ ಭಾರತ್‌ ಅಭಿಯಾನ’- ಹೀಗೆ ಸರ್ಕಾರ ಮತ್ತು ಅನೇಕ ಸಂಘ-ಸಂಸ್ಥೆಗಳು (ಎನ್‌ಜಿಒ) ಆಗಾಗ್ಗೆ ನಡೆಸುತ್ತಿದ್ದ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಪುನೀತ್‌ ರಾಜಕುಮಾರ್‌ ಯಾವುದೇ ಸಂಭಾವನೆ ಪಡೆಯದೇ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಈ ಮೂಲಕ ಒಬ್ಬ ಸ್ಟಾರ್‌ ನಟನಾಗಿ ತಮ್ಮ ಸಾಮಾಜಿಕ ಬದ್ಧತೆಯನ್ನು ಪುನೀತ್‌ ಪ್ರದರ್ಶಿಸುವ ಮೂಲಕ ಇತರ ಅನೇಕ ನಟರಿಗೂ ಮಾದರಿಯಾಗಿದ್ದರು.

ಕೊರೊನಾ ಜಾಗೃತಿಗೆ ಕೈಜೋಡಿಸಿದ್ರು!
ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಿನಿಮಾ ಚಟುವಟಿಕೆಗಳಿಂದ ಬ್ರೇಕ್‌ ಪಡೆದುಕೊಂಡಿದ್ದ ಪುನೀತ್‌ ರಾಜಕುಮಾರ್‌, ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಸರ್ಕಾರ, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕೊರೊನಾ ಜನಜಾಗೃತಿ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದರು. “ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ’, “ಕೋವಿಡ್‌ ಭಯಬೇಡ, ಮುನ್ನೆಚ್ಚರಿಕೆ ಇರಲಿ’, “ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆದುಕೊಳ್ಳಿ’ ಹೀಗೆ ಕೊರೊನಾ ವಿರುದ್ದ ಜನಜಾಗೃತಿ ಮೂಡಿಸುವಲ್ಲಿ ಪುನೀತ್‌ ಮುಂದಿದ್ದರು.

ಸರಳತನಕ್ಕೆ ಮತ್ತೊಂದು ಹೆಸರು ಪುನೀತ್‌
ನಾನು ಕಾಲೇಜಿನಲ್ಲಿರುವಾಗಲೇ ಪುನೀತ್‌ ಹೀರೋ ಆಗಿದ್ದವರು. ಅವರ ಡ್ಯಾನ್ಸ್‌, ಫೈಟ್‌ ನೋಡಿ ನಾನು ಫಿದಾ ಆಗಿದ್ದೆ. ನಮ್ಮಂಥವರು ಚಿತ್ರರಂಗಕ್ಕೆ ಬರಲು ಪುನೀತ್‌ ಕೂಡ ಪ್ರೇರಣೆ ಎಂದರೆ ತಪ್ಪಲ್ಲ. ಇವತ್ತು ಚಿತ್ರರಂಗದಲ್ಲಿರುವ ಯಂಗ್‌ಸ್ಟಾರ್‌ಗಳಿಗೆ ರಾಜ್‌ ಕುಟುಂಬ ಮಾದರಿ. ಏನೇ ಸ್ಟಾರ್‌ಡಮ್‌ ಬರಲಿ, ಎಷ್ಟೇ ಹಿಟ್‌ ಕೊಡಲಿ ಅದನ್ನು ತಲೆಗೇರಿಸಿಕೊಳ್ಳದೇ ಹೇಗೆ ಬದುಕಬೇಕೆಂಬುದನ್ನು ಪುನೀತ್‌ ಅವರನ್ನು ನೋಡಿ ಕಲಿಯಬೇಕು. ನಾನು ಪುನೀತ್‌ ಅವರಿಂದ ಸಾಕಷ್ಟು ವಿಚಾರ ಕಲಿತಿದ್ದೇನೆ. ಇವತ್ತು ಯಾರು, ಯಾರೇ ಸ್ಟಾರ್‌ಡಮ್‌ ಮೆರೆಯಲಿ. ಆದರೆ, ಪುನೀತ್‌ ಆ ಎಲ್ಲ ಸ್ಟಾರ್‌ಡಮ್‌ಗಳನ್ನು ನೋಡಿದ್ದಾರೆ. ಸ್ಟಾರ್‌ಡಮ್‌ ಬಂದಾಗ ನಮ್ಮ ಸುತ್ತ ಎಲ್ಲರೂ ಇರುತ್ತಾರೆ. ಆದರೆ ಏನು ಇಲ್ಲದಾಗಲೂ ಯಾರು ನಮ್ಮೊಂದಿಗೆ ಇರುತ್ತಾರೆ ಅದು ಮುಖ್ಯ. ಆ ವಿಷಯದಲ್ಲಿ ಪುನೀತ್‌ ಎಲ್ಲರನ್ನು ಪ್ರೀತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಪ್ರೀತಿ ನನಗೂ ಸಿಕ್ಕಿದೆ. ಚಿತ್ರೀಕರಣ ಸಮಯದಲ್ಲಿ ನಾನು ಅಷ್ಟು ದೂರ ನಡೆದೆ, ಇಷ್ಟು ದೂರ ನಡೆದೆ ಎಂದಾಗ ನಮ್ಮ ಅಮ್ಮ, “ಇದೇನು, ಅಣ್ಣಾವ್ರ ಆ ಕಾಲದಲ್ಲೇ ಇದನ್ನು ಮಾಡಿದ್ದಾರೆ’ ಎನ್ನುತ್ತಿದ್ದರು. ಅಣ್ಣಾವ್ರ ಆ ಸರಳತನ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next