Advertisement
ಹಲವು ಬಗೆಯಲ್ಲಿ ಕಾಡುವ ಜೀವ : ತಿಂಗಳಿಗೆಎರಡು ಮೂರು ಬಾರಿಯಾದರೂ ಯಾವುದೋ ಚಾನೆಲ್ಲೊಂದರಲ್ಲಿ ಪ್ರತ್ಯಕ್ಷವಾಗಿಯೇ ಆಗುತ್ತಾರೆ ಪುನೀತ್. ಅಪ್ಪು ಆಗಿ, ಅಭಿಯಾಗಿ, ಆಕಾಶ್ ಆಗಿ, ಜಾಕಿಯಾಗಿ, ಪರಮಾತ್ಮನಾಗಿ ನಟಿಸಿದ ಯಾವ ಸಿನಿಮಾದಲ್ಲೂ ಅವರನ್ನು ಪುನೀತ್ ಎಂದು ನೋಡಿದ್ದೇ ಕಡಿಮೆ. ಪೃಥ್ವಿ ಎಂಬ ನಿಷ್ಠಾವಂತ ಅಧಿಕಾರಿಯಾಗಿ, ಆಕಾಶ್ ಎಂಬ ಸಹೃದಯೀ ಗೆಳೆಯನಾಗಿ, ಅಭಿಯೆಂಬ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿ, ಜಾನಕೀರಾಮನೆಂಬ ಸಕಲ ಕಲಾ ವಲ್ಲಭನಾಗಿ ಅವರು ನಮ್ಮೆದೆಗೆ ಇಳಿದಿದ್ದೇ ಜಾಸ್ತಿ.
Related Articles
Advertisement
ತನ್ನೆಲ್ಲ ಗರ್ವಗಳ ಮೀರಿ ಆ ಪಾತ್ರಕ್ಕೆ, ಆ ಸಿನಿಮಾಗೆ ಏನು ಬೇಕು ಎಂದು ಯೋಚಿಸುವ ತನ್ಮಯತೆ ಅವರಲ್ಲಿತ್ತು. ಪೂರ್ವಾಗ್ರಹಗಳನ್ನಿಟ್ಟುಕೊಂಡು, ಸಿನಿಮಾದಾಚೆಯ ಯಾವುದೋ ಹಳೆಯ ಕಥೆಗಳ ನೆನೆದು, ಪುನೀತ್ ನಮಗೆ ಕಾಲ್‌ಶೀಟ್ ಕೊಡಲಾರರು ಎಂದು ಒಳಗೊಳಗೆ ಅಂಜುತ್ತಲೇ ಬಳಿ ಬಂದ ನಿರ್ಮಾಪಕರ ಎದೆಯ ಭಯವನ್ನು “ಒಳ್ಳೆಯ ಕಥೆ ತನ್ನಿ. ಸಿನಿಮಾ ಮಾಡೋಣ’ ಎಂದು ಮುಗುಳ್ನಕ್ಕು ತಿಳಿಗೊಳಿಸಿದ್ದರು ಪುನೀತ್. ಅವರಾ ಡಿದ ಆ ಎರಡು ನುಡಿಯಲ್ಲಿ ಆಡದ ಎಷ್ಟೊಂದು ಮಾತು ಗಳಿದ್ದವಲ್ಲ! ಕೇವಲ ನಟನೆಯಷ್ಟೇ ನನ್ನದೆಂದು ಶೂಟಿಂಗ್ ಮುಗಿಸಿ ಎದ್ದು ಹೋದವರೂ ಅವರಲ್ಲ. ಸಿನಿಮಾಗಳ ಹಂಚಿಕೆ ಹಾಗೂ ಮತ್ತಿತರ ಮಾತುಕತೆಗೂ ನೆರವಾಗಿದ್ದನ್ನು ಅದೆಷ್ಟೋ ನಿರ್ಮಾಪಕರು ಇಂದಿಗೂ ನೆನೆಯುತ್ತಾರೆ. ಇವೆಲ್ಲ ಲೆಕ್ಕಕ್ಕೆ, ಮಾತಿಗೆ, ದಾಖಲೆಗೆ ಸಿಗುವ ಅವರ ಕೆಲಸಗಳು.
ಇದೆಲ್ಲದರಾಚೆಗೆ ಯಾರಿಗೂ ತಿಳಿಯದಂತೆ, ಸದ್ದೇ ಆಗದಂತೆ ಅದೆಷ್ಟು ಕೆಲಸಗಳನ್ನು ಮಾಡಿ ಮೌನವಾಗಿ ಎದ್ದು ಬಂದಿದ್ದರೋ ಬಲ್ಲವರ್ಯಾರು? ಎಂದೂ ಯಾವ ರಾಜಕೀಯಕ್ಕೂ ಇಳಿಯದೇ ವಿವಾದಗಳಿಂದ, ಕೆಸರೆರಚಾಟಗಳಿಂದ ದೂರವೇ ಇದ್ದರು. ಬಾಯಿಗಿಂತ ಹೆಚ್ಚಿಗೆ ಕೆಲಸ ಸದ್ದು ಮಾಡಬೇಕೆಂದು ನಂಬಿದ್ದರು. ಈ ಎಲ್ಲವೂ ನಿಶ್ಯಬ್ಧವಾಗಿಯೇ ನಡೆದುಕೊಂಡು ಬಂತು.
ಪರಮಾತ್ಮ ಮಾಯವಾದ! ಹೀಗಿದ್ದಾಗಲೇ ಆ ದಿನ ಬಂತು. ಅಕ್ಟೋಬರ್ 29, 2021. ಆ ದಿನದ ಮಧ್ಯಾಹ್ನ ಕರಾಳ ಬಿಸಿಲಾಗಿ ಕರುನಾಡಿಗೆ ಬಡಿಯಿತು. ಚೆನ್ನಾಗಿಯೇ ಇದ್ದ ಪುನೀತ್ ಹಠಾತ್ತನೆ ಕುಸಿದರು. ಕೆಲವು ನಿಮಿಷಗಳಷ್ಟೇ… ಅವರು ಮತ್ತೆ ಮೇಲೇಳಲೇ ಇಲ್ಲ. ಬೆಟ್ಟದ ಹೂವು ಬಾಡಿತ್ತು. ಬಾನ ದಾರಿಯಲ್ಲಿ ಸೂರ್ಯ ಶಾಶ್ವತವಾಗಿ ಜಾರಿಹೋಗಿದ್ದ. ಪರಮಾತ್ಮ ಕಾಣದಂತೆ ಮಾಯವಾಗಿದ್ದ. ಈ ಅನಿರೀಕ್ಷಿತ ಸುದ್ದಿ ಕೇಳಿ ಇಡೀ ಕರುನಾಡೇ ತತ್ತರಿಸಿ ಹೋಯಿತು. ಕಣ್ಣೀರಿಟ್ಟಿತು. ‘ಇದೆಲ್ಲವೂ ಸುಳ್ಳು’ ಎಂಬ ಸುದ್ದಿಯೊಂದು ಬರುತ್ತದೆ, ಖುದ್ದು ಪುನೀತ್ ಅವರೇ ಎದ್ದು ಬಂದು- “ನಾನಿಲ್ಲೇ ಇದ್ದೇನಲ್ಲ’ ಎಂದು ಮತ್ತದೇ ನಿಶ್ಕಲ್ಮಷ ಮುಗುಳ್ನಗು ಬೀರುತ್ತಾರೆ ಎಂದು ಕಾದರು. ಆದರೆ, ಅಂಥಾ ಯಾವ ಸುದ್ದಿಯೂ ಸಾವಿರಾರು ಜನ ನೆರೆದಿದ್ದ ಬೆಂಗಳೂರಿನ ವಸಂತನಗರದ ಆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಿಂದ ಬರಲೇ ಇಲ್ಲ. ಲೋಹಿತ್ ಎಂಬ ಸಮಾಜಮುಖೀ ನಟನೊಬ್ಬನನ್ನು ಚಿಕ್ಕ ವಯಸ್ಸಿಗೇ ಬರಮಾಡಿಕೊಂಡ ಸ್ವರ್ಗ “ಪುನೀತ’ವಾಗಿತ್ತು. ಇಲ್ಲಿ, ಕನ್ನಡ ನಾಡು ನಿಂತನಿಂತಲ್ಲೇ ಕಣ್ಣೀರಾಗಿ ಕರಗಿತ್ತು.
ಎಲ್ಲೋ ಕೇಳಿದ ಮಾತು: ಕಲಾವಿದ ಸತ್ತರೂ ಕಲೆಗೆ ಸಾವಿಲ್ಲವಂತೆ. ಅಬ್ಬರ, ಆಡಂಬರ, ದ್ವೇಷಗಳಿಲ್ಲದ ಹಾದಿಯೊಂದರಲ್ಲಿ ನಿರುಮ್ಮಳರಾಗಿ ನಡೆದು ಹೋಗಿದ್ದಾರೆ ಪುನೀತ್. 46 ವರ್ಷಗಳ ಚಿಕ್ಕ ಬದುಕಿನಲ್ಲೇ ದೊಡ್ಡ ಹೆಸರನ್ನು, ಪ್ರೀತಿಯನ್ನು ಉಳಿಸಿ ಹೋಗಿದ್ದಾರೆ. ದುಡ್ಡು, ಶ್ರೀಮಂತಿಕೆ, ದೊಡ್ಡಸ್ತಿಕೆಗಳೆಲ್ಲದರಾಚೆಗೂ ಉಳಿಯುವುದು ಪ್ರೀತಿ, ಮನುಷ್ಯತ್ವ ಹಾಗೂ ಹೃದಯವಂತಿಕೆ ಎಂದು ಸಾರಿ ಹೋಗಿದ್ದಾರೆ. ಹಾಗಾಗಿಯೇ ಅಗಲಿದ ಮೂರು ವರ್ಷಗಳ ಬಳಿಕವೂ ಕನ್ನಡಿಗರ ಹೃದಯದ ಬೆಳ್ಳಿತೆರೆಯಲ್ಲಿ ಅವರ ಚಿತ್ರವೇ ಇನ್ನೂ ಓಡುತ್ತಿರುವುದು. ಸೋಲು, ಮಧ್ಯಂತರ, ಕ್ಲೈಮ್ಯಾಕ್ಸುಗಳೇ ಇಲ್ಲದ ಆ ಸಿನಿಮಾ ನಿಲ್ಲುವುದಿಲ್ಲ. ಆ ಚಿತ್ರವನ್ನು ಎದೆಯಲ್ಲಿಟ್ಟುಕೊಂಡೇ ಅವರು ನಡೆದ ಪ್ರೀತಿಯ, ಸ್ನೇಹದ, ಸೌಹಾರ್ದತೆ-ಸಹಾಯಗಳ ದಾರಿಯನ್ನು ಅನುಸರಿಸೋಣ. ಆಗ, ದೇವಲೋಕದಲ್ಲೆಲ್ಲೋ ಕುಳಿತ ಪರಮಾತ್ಮನ ಮುಖದಲ್ಲಿ ಮತ್ತದೇ ನಿಶ್ಕಲ್ಮಷ ಮುಗುಳ್ನಗೆ ಮೂಡಬಹುದು.
ಆ ನಿಷ್ಕಲ್ಮಷ ನಗು… ಅಪ್ಪುವಿನ ನಗುವಿನಲ್ಲಿ ಎಂಥದೋ ಮೋಡಿಯಿದೆ. ಆಕರ್ಷಣೆಯಿದೆ. ನಿಷ್ಕಲ್ಮಶ ಭಾವವಿದೆ. ಆ ನಗುವಿನಲ್ಲಿ ಕಪಟವಿಲ್ಲ, ನಾಟಕವಿಲ್ಲ, ಯಾರನ್ನೋ ಓಲೈಸುವ ಸ್ವಾರ್ಥವಿಲ್ಲ. ಮಗುವಿನ ನಗೆಯನ್ನು ಹೋಲುವಂಥ ಅಪ್ಪುವಿನ ನಗು ನಮ್ಮೆಲ್ಲರಲ್ಲೂ ಒಂದು ಆತ್ಮೀಯತೆ ಬೆಳೆಸಿದ್ದು ಸುಳ್ಳಲ್ಲ. ಹಿರಿಯರು, ಕಿರಿಯರು ಎನ್ನದೆ ಎಲ್ಲರನ್ನೂ ಸಮಾನ ಪ್ರೀತಿಯಿಂದ ಚೆನ್ನಾಗಿ ಮಾತನಾಡಿಸುವ, ತಬ್ಬಿಕೊಂಡು ಬೀಳ್ಕೊಡುವ, ಗೌರವಿಸುವ, ಯಾರ ಬಗ್ಗೆಯೂ ಕೆಟ್ಟ ಮಾತು ಆಡದೆ, ಯಾರ ಮನ ನೋಯಿಸದೆ, ಯಾವ ಅಪವಾದಗಳಿಗೂ ಸಿಲುಕಿಕೊಳ್ಳದೆ ಬದುಕಿದ ಅಪ್ಪು, ಎಲ್ಲ ಅರ್ಥದಲ್ಲೂ ಚಿನ್ನದಂಥ ಮನುಷ್ಯ.
-ವಿನಾಯಕ ಅರಳಸುರಳಿ