Advertisement

ಕ್ರೀಡಾಂಗಣಕೆ ಪುನೀತ್‌ ಹೆಸರಿಡಲು ನಿರ್ಣಯ : ನಗರಸಭೆ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ

12:32 PM Feb 10, 2022 | Team Udayavani |

ಹೊಸಪೇಟೆ:  ನಗರದ ಮುನ್ಸಿಪಲ್‌ ಮೈದಾನ ಹಾಗೂ ಪ್ರಮುಖ ವೃತ್ತಕ್ಕೆ ಪುನೀತ್‌ ರಾಜಕುಮಾರ್‌ ಅವರ ಹೆಸರಿಡಲು ನಗರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೊರಲಿನ ನಿರ್ಣಯ ಕೈಗೊಂಡರು.

Advertisement

ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ನಗರದ ತಹಶೀಲ್ದಾರ್‌ ಕಚೇರಿ ಹತ್ತಿರದ ವೃತ್ತ ಹಾಗೂ
ಮತ್ತು ಮುನ್ಸಿಪಲ್‌ ಕ್ರೀಡಾಂಗಣಕ್ಕೆ ಪುನೀತ್‌ ರಾಜಕುಮಾರ ಅವರ ಹೆಸರು ನಾಮಕರಣ ಮಾಡಲು ಪ್ರಸ್ತಾಪ ಮಾಡಲಾಯಿತು. ಅಖೀಲ ಕರ್ನಾಟಕ ರಾಜವಂಶ ಯುವಸೇನೆಯವರು
ವೃತ್ತಕ್ಕೆ ಮತ್ತು ಕ್ರೀಡಾಂಗಣಕ್ಕೆ ಪುನೀತ್‌ ರಾಜಕುಮಾರ ಅವರ ಹೆಸರನ್ನಿಡಲು ನಗರಸಭೆಗೆ ಕೋರಿದ್ದಾರೆ ಎಂದು ಪೌರಾಯುಕ್ತ ಮನ್ಸೂರ್‌ ಅಲಿ ಸಭೆ ಗಮನಕ್ಕೆ ತಂದರು. ಸದಸ್ಯರು
ಒಕ್ಕೊರಲಿನಿಂದ ಪುನೀತ್‌ ರಾಜಕುಮಾರ ಹೆಸರನ್ನಿಡಲು ಒಪ್ಪಿಗೆ ಸೂಚಿಸಿದರು.

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಬಾಬಾ ಸಾಹೇಬ್‌ರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಪ್ಲಾಟ್‌ಫಾರಂ ನಿರ್ಮಾಣ ಮಾಡಬೇಕು ಎಂದು ಸಭೆಯ ಗಮನಕ್ಕೆ ತರಲಾಯಿತು. ಈ ಬಗ್ಗೆ ಸದಸ್ಯರು ಒಮ್ಮತದಿಂದ ಅನುಮೋದನೆ ನೀಡಿದರು. ನಗರದ 35 ವಾರ್ಡ್‌ಗಳಲ್ಲೂ ಎಡಿಬಿ ಯೋಜನೆಯಡಿ ಕೈಗೊಳ್ಳಲಾಗಿರುವ ಯುಜಿಡಿ ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ಈ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

8ನೇ ವಾರ್ಡ್‌ ಸದಸ್ಯ ವಿ. ಹುಲುಗಪ್ಪ ಮಾತನಾಡಿ, ವಾರ್ಡ್‌ಗಳಲ್ಲಿ ಕಾಲಿಟ್ಟರೆ ಸಾಕು, ಜನ ಬಾಯಿಗೆ ಸಿಕ್ಕಂತೇ ಬೈಯುತ್ತಿದ್ದಾರೆ. ಜನಪ್ರತಿನಿಧಿಗಳ ಮಾತನ್ನು ಅಧಿಕಾರಿಗಳು ಕೇಳಿ ಕುಡಿವ
ನೀರು ಮತ್ತು ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಮುನ್ನಿಕಾಸಿಂ, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಫೋನ್‌ ತೆಗೆಯುತ್ತಿಲ್ಲ. 9ನೇ ವಾರ್ಡ್‌ ಸಿದ್ದಲಿಂಗಪ್ಪ ಚೌಕಿ  ಸ್ಲಂ ಪ್ರದೇಶವಾಗಿದೆ. ಇಲ್ಲಿ ಸರಿಯಾಗಿ ಯುಜಿಡಿ ಕಾಮಗಾರಿಗಳು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘ಸಮಗ್ರ ಕೃಷಿ ಪದ್ಧತಿ’: ಸಚಿವರ ಶ್ಲಾಘನೆ

ಸದಸ್ಯ ಕೆ. ಮಹೇಶ್‌ ಮಾತನಾಡಿ, ಕೆಲ ಕಡೆ ಯುಜಿಡಿ ಕಾಮಗಾರಿ ಮುಗಿದಿದೆ ಎಂದು ಬಿಲ್‌ ಕೂಡ ಎತ್ತಲಾಗಿದೆ. ಆದರೆ, ಕಾಮಗಾರಿಗಳೇ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮನ್ಸೂರ್‌ ಅಲಿ ಯುಜಿಡಿ ಬಗ್ಗೆ ಪ್ರತ್ಯೇಕ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸೋಣ. ನಗರದಲ್ಲಿ ಅಭಿವೃದ್ಧಿ
ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳೋಣ ಎಂದರು.

ನಗರದ ಶುದ್ಧ ಕುಡಿವ ನೀರಿನ ಘಟಕಕ್ಕೆ ಫೇರಿಕ್‌ ಆಲಂ, ಪೌಡರ್‌ ಪೂರೈಕೆ ಟೆಂಡರ್‌ನ್ನು ಶ್ರೀರಂಗಾ ಕೆಮಿಕಲ್ಸ್‌ಗೆ ಮುಂದುವರಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ಆಕ್ಷೇಪ
ವ್ಯಕ್ತಪಡಿಸಿದ ಸದಸ್ಯ ಖದೀರ್‌, ನಿಯಮಾನುಸಾರ ಮರು ಟೆಂಡರ್‌ ಕರೆದು, ಯಾರು ಕಡಿಮೆ ದರ ನಮೂದಿಸುತ್ತಾರೆ ಅವರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ರೋಹಿಣಿ ವೆಂಕಟೇಶ್‌ ಮತ್ತು ಸದಸ್ಯ ತಾರಿಹಳ್ಳಿ ಜಂಬುನಾಥ, ಹನುಮಂತಪ್ಪ (ಬುಜ್ಜಿ), ರೂಪೇಶ್‌ಕುಮಾರ, ಕುಡಿವ ನೀರಿನ ವಿಷಯದಲ್ಲಿ ಮತ್ತೆ ಟೆಂಡರ್‌ ಕರೆಯುವುದು ಬೇಡ. ಈಗ ಟೆಂಡರ್‌ ಕರೆದರೆ, ಖಂಡಿತ ಕುಡಿವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಲಿದೆ. ಹಾಗಾಗಿ ಈ ಗುತ್ತಿಗೆದಾರರಿಗೆ ಟೆಂಡರ್‌ ಮುಂದುವರಿಸಬೇಕು ಎಂದರು. ಪೌರಾಯುಕ್ತರು ಕುಡಿವ ನೀರಿನ ವಿಷಯದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದರೆ ಮುಂದುವರಿಸಲು ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದರು. ಇದಕ್ಕೆ ಸದಸ್ಯರಾದ
ಜಿ.ಎಚ್‌. ರಾಘವೇಂದ್ರ, ಕೆ.ಗೌಸ್‌, ಖದೀರ್‌ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಮತಕ್ಕೆ ಹಾಕಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಈ ವಿಷಯದ ಕುರಿತು ಮತಕ್ಕೆ ಹಾಕಲಾಯಿತು. ವಿಷಯದ ಪರವಾಗಿ 23 ಮತಗಳು ಬಂದರೆ, ವಿರುದ್ಧವಾಗಿ 12 ಮತಗಳು ಚಲಾವಣೆಯಾದವು. ಪ.ಜಾತಿ, ಪ.ಪಂಗಡದ ಸಣ್ಣ ಉದ್ದಿಮೆದಾರರಿಗೆ ಸಹಾಯ ಧನ
ನೀಡುವುದಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಬಳಿಕ ಸಭೆಯಲ್ಲಿ ಉಳಿದ ವಿಷಯಗಳನ್ನು ಚರ್ಚಿಸಲಾಯಿತು.

ಕುಡಿವ ನೀರಿಲ್ಲ: ತುಂಗಭದ್ರಾ ಜಲಾಶಯ ಇರುವ 14, 13ನೇ ವಾರ್ಡ್‌ಗೆ ಜಲಾಶಯದ ನೀರು ಸಿಗುತ್ತಿಲ್ಲ. ವಾರ್ಡ್‌ಗಳ ಜನರು ಬೋರ್‌ವೆಲ್‌ ನೀರು ಕುಡಿಯುವಂತಾಗಿದೆ. ಕೂಡಲೇ ಜನರಿಗೆ
ಶುದ್ಧ ಕುಡಿವ ನೀರು ಒದಗಿಸಬೇಕು ಎಂದು ಸದಸ್ಯ ಹನುಮಂತಪ್ಪ (ಬುಜ್ಜಿ) ಆಗ್ರಹಿಸಿದರು. ಪೌರಾಯುಕ್ತ ಮನ್ಸೂರ್‌ ಮತ್ತು ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌ ಅವರು ಫೆ. 21ರಿಂದ
ಕುಡಿವ ನೀರಿನ ಕಾಮಗಾರಿ ಆರಂಭಿಸಲಾಗುವುದು ಎಂದರು.

ಸದಸ್ಯರಾದ ಎಚ್‌.ಎಲ್‌. ಸಂತೋಷ್‌, ನಾರಾಯಣಪ್ಪ, ಗಂಗಮ್ಮ, ಎ.ಲತಾ, ಲತಾ ಸಂತೋಷ್‌, ಕೆ. ಶಾಂತಾ, ಖಾಜಾಬನಿ, ಉಮಾಮಹೇಶ್ವರಿ, ಮುಮ್ತಾಜ್‌ ಬೇಗಂ, ಅಸ್ಲಂ ಮಾಳಗಿ, ರಾಧಾ ಮಲ್ಲಿಕಾರ್ಜುನ, ಪರಗಂಟಿ ಲಕ್ಷ್ಮೀ, ಹನುಮಂತಮ್ಮ, ಕನಕಮ್ಮ, ಶಕುಂತಲಾ, ಸಣ್ಣ ದುರುಗಮ್ಮ, ಶಿಲ್ಪಾ ಮತ್ತಿತರರಿದ್ದರು.

ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ: ಸಭೆಯಲ್ಲಿ ಸ್ಥಾಯಿ ಸಮಿತಿಗೆ ಸದಸ್ಯರಾದ ಬಿ. ಜೀವರತ್ನಂ, ಸರವಣನ್‌, ಕಿರಣ್‌ ಎಸ್‌., ಹನುಮಂತಪ್ಪ (ಬುಜ್ಜಿ), ಶೇಕ್ಷಾವಲಿ, ರಮೇಶ ಗುಪ್ತಾ, ಎಚ್‌. ಕೆ. ಮಂಜುನಾಥ, ವಿ.ಹುಲುಗಪ್ಪ, ತಾರಿಹಳ್ಳಿ ಜಂಬುನಾಥ, ಜಿ.ಎಚ್‌. ರಾಘವೇಂದ್ರ ಮತ್ತು ಕೆ.ಗೌಸ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸದಸ್ಯೆಯರ ಪತಿಯಂದಿರನ್ನು ಹೊರಗೆ ಕಳುಹಿಸಿ
ಹೊಸಪೇಟೆ: ನಗರಸಭೆ ಸಾಮಾನ್ಯಸಭೆಯಲ್ಲಿ ಸದಸ್ಯೆಯರ ಪತಿಯಂದಿರು ನಗರಸಭೆ ಸಭಾಂಗಣದಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಸದಸ್ಯೆಯರ ಪತಿಯಂದಿರನ್ನು ಸಭಾಂಗಣದಿಂದ ಹೊರಗೆ ಕಳಿಸಿ, ಅವರ ವಿಡಿಯೋ ಮಾಡುವಂತೆ 6ನೇ ವಾರ್ಡ್‌ ಸದಸ್ಯ ಅಬ್ದುಲ್‌ ಖದೀರ್‌ ಆಯುಕ್ತರಿಗೆ ತಿಳಿಸಿದರು. ಇದರಿಂದ ಕೋಪಗೊಂಡ ಸದಸ್ಯೆಯರ ಪತಿಯಂದಿರು ನಗರಸಭೆ
ಸಭಾಂಗಣದಿಂದ ಹೊರಗೆ ಬಂದ ಬಳಿಕ ಸದಸ್ಯ ಖದೀರ್‌ ವಿರುದ್ಧ ಬಾಯಿ ಮಾಡಿದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next