ಬೆಂಗಳೂರು : ಇಂದು ನಟಸಾರ್ವಭೌಮ, ವರನಟ ಡಾ. ರಾಜಕುಮಾರ್ ಅವರ 92ನೇ ಜನ್ಮ ದಿನ. ಕನ್ನಡ ಚಿತ್ರರಂಗದ ಧ್ರುವತಾರೆ ಅಣ್ಣಾವ್ರ ಹುಟ್ಟುಹಬ್ಬದ ದಿನವಾದ ಇಂದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ನಟ ಪುನೀತ್ ರಾಜಕುಮಾರ್ ತಮ್ಮ ತಂದೆಯ ಜನ್ಮದಿನಕ್ಕೆ ಪುಟ್ಟ ಕಾಣಿಕೆ ನೀಡಿದ್ದಾರೆ. ರಾಜಕುಮಾರ್ ಅವರು ಹಾಡಿರುವ ಬಡವರ ಬಂಧು ಸಿನಿಮಾದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿವೆ. ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ. ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲುಹಿದೆ, ಆ ಪ್ರೀತಿಯ ನನ್ನ ಮನ ಮರೆಯುವುದೆ ಹಾಡು’ ಹೇಳಿರುವ ಪುನೀತ್, ಈ ವಿಡಿಯೋವನ್ನು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಇದು ಅಪ್ಪಾಜಿ ಅವರ 92ನೇ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ ಎಂದಿದ್ದಾರೆ.
ಇನ್ನು ರಾಜಕುಮಾರ್ ಇವತ್ತು ನಮ್ಮ ಜೊತೆಗಿಲ್ಲದೇ ಇರಬಹುದು. ಆದರೆ, ಪ್ರತಿ ಅಭಿಮಾನಿಯ ಮನದಲ್ಲಿ ಕನ್ನಡ ನೆಲದ ಕಣಕಣದಲ್ಲೂ ಅವರ ಉಸಿರಿದೆ. ಅದೇ ಕಾರಣದಿಂದ ರಾಜ್ ಕುಮಾರ್ ಅಂದಿನಿಂದ ಇಂದಿನವರೆಗೆ ಎಲ್ಲಾ ತಲೆಮಾರುಗಳಿಗೆ ಪ್ರೇರಣೆಯಾಗುತ್ತಲೇ ಬಂದಿದ್ದಾರೆ.
ಕೋವಿಡ್ ಲಾಕ್‌ಡೌನ್ ಇಲ್ಲದೇ ಇರುತ್ತಿದ್ದರೆ ಇಂದು ಡಾ. ರಾಜ್ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜ್ ಪುಣ್ಯಭೂಮಿಯಲ್ಲಿ ಆಚರಿಸುತ್ತಿದ್ದರು. ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ, ಈ ಕೋವಿಡ್‍ದಿಂದಾಗಿ ಅದು ಸಾಧ್ಯವಾಗಿಲ್ಲ. ಕುಟುಂಬ ವರ್ಗವಷ್ಟೇ ಪೂಜೆ ಸಲ್ಲಿಸಿದೆ.