ಮಾಗಡಿ: ಕರ್ನಾಟಕ ರತ್ನ ನಟ ದಿ.ಪುನೀತ್ ರಾಜ್‌ಕುಮಾರ್ ಅವರ ಸುಂದರ ಪ್ರತಿಮೆಯನ್ನು ಪಟ್ಟಣದಲ್ಲಿ ನಿರ್ಮಿಸಲಾಗುವುದು ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ. ಎಚ್.ಬಸವರಾಜು ತಿಳಿಸಿದರು.
ಪಟ್ಟಣದ ತಿರುಮಲೆ ಐಡಿಎಸ್‌ಎಂಟಿ ಬಡಾವಣೆ ಯಲ್ಲಿ ತಿರುಮಲೆ ಶ್ರೀ ರಂಗನಾಥಸ್ವಾಲ್ಲಿಗೆ ಮೊಗ್ಗಿನ ಪಲ್ಲಕಿ ಉತ್ಸವ ಪ್ರಯುಕ್ತ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾರದೊಳಗೆ ದಿ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ಒಂದೆಡೆ ಸೇರಿಸಿ ಸಭೆ ಕರೆದು ಚರ್ಚಿಸಿ ಪಟ್ಟಣದಲ್ಲಿ ಪ್ರತಿಮೆಯನ್ನು ಎಲ್ಲಿ ನಿರ್ಮಿಸಬೇಕೆಂದು ತೀರ್ಮಾನಿಸಲಾಗುವುದು ಎಂದರು.
ಪಟ್ಟಣದಲ್ಲಿ ಡಾ. ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ತಗ್ಗಿಕುಪ್ಪೆ ಟಿ.ಕೆ.ರಾಮು ನೇತೃತ್ವದಲ್ಲಿ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ದಿ. ಅಂಬರೀಶ್ ಪ್ರತಿಮೆ ಸ್ಥಾಪಿಸಲಾಗಿದೆ. ಸಮಯ ನಿಗದಿಪಡಿಸಿಕೊಂಡು ಎಲ್ಲರ ಸಹಕಾರದಿಂದ ಉದ್ಘಾಟನೆ ನೆರವೇರಿಸುವ ಮೂಲಕ ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಬಾರಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆದಿದ್ದು, ಜನರಿಗೆ ಮನೋರಂಜನೆ ಸಿಗಬೇಕೆಂದು ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಮೂಲಕ ಕನ್ನಡದ ನಾಡು, ನುಡಿ, ಸಂಸ್ಕೃತಿ, ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದರು.
ಪುಣ್ಯಸ್ಥಳಗಳಿಗೆ ಯಾತ್ರೆ: ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ ಮಾತನಾಡಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ತಿರುಪತಿ ಸೇರಿದಂತೆ ಯಾತ್ರಾ ಸ್ಥಳಗಳಿಗೆ ಆಸಕ್ತ ಭಕ್ತರನ್ನು ದರ್ಶನ ಭಾಗ್ಯ ಕಲ್ಪಿಸಲಾ ಗುತ್ತಿದ್ದು ಆಸಕ್ತ ಭಕ್ತರಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕಳಿಸಿಕೊಡಲಾಗುವುದು ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ.ಧನಂಜಯ, ಪುರಸಭೆ ಸದಸ್ಯೆ ಭಾಗ್ಯಮ್ಮ, ನಾಮಿನಿ .ಎಂ. ಆರ್. ರಾಘವೇಂದ್ರ, ಎಂ.ಟಿ.ಶಿವಣ್ಣ, ಸಿದ್ದಪ್ಪ, ದೀಪಾ ಪ್ರಸಾದ್, ಸಾತನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗರಾಜು, ಬಿಡದಿ ನಾಗರಾಜು, ಪ್ರಸನ್ನ, ಶಿವಣ್ಣ, ಆನಂದ್, ದಯಾನಂದ್, ಬಜ್ಜ, ಮಂಜನಾಥ್, ಹರೀಶ್, ಕಿರಣ್, ಭಾಸ್ಕರ್, ಕುಮಾರ್, ರಮೇಶ್ ಇತರರು ಇದ್ದರು