Advertisement

ಅಪ್ಪುಗೆ ಅಭಿಮಾನಿಗಳ ಅಶ್ರುತರ್ಪಣ

11:12 AM Oct 31, 2021 | Shwetha M |

ಮುದ್ದೇಬಿಹಾಳ: ಪಟ್ಟಣದ ಗಿರಿಜಾ ಶಂಕರ ಚಿತ್ರ ಮಂದಿರದಲ್ಲಿ ಅಗಲಿದ ಚಲನಚಿತ್ರ ನಾಯಕ ನಟ, ಮಾನವೀಯತೆಯ ಪ್ರತಿರೂಪದಂತಿದ್ದ ಪುನೀತ್‌ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

Advertisement

ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ವೀರಶೈವ ಲಿಂಗಾಯತ ಸಮಾಜದ ಮುಖಂಡ ವಿಜಯಮಹಾಂತೇಶ ಸಾಲೀಮಠ ವಕೀಲರು, ಬಸವ ಫ್ಲೆಕ್ಸ್‌ ಮಾಲಿಕ ಬಸವರಾಜ ಬಿರಾದಾರ, ರಕ್ಕಸಗಿ ಗ್ರಾಪಂ ಉಪಾಧ್ಯಕ್ಷ ಅಕ್ಷಯ ನಾಡಗೌಡ, ಚಿತ್ರಮಂದಿರದ ಮಾಲಿಕ ಶಿವಾನಂದ ಸಾಲೀಮಠ, ಜಿಲ್ಲಾ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಅಬ್ದುಲ್‌ ರಹೆಮಾನ್‌ ಬಿದರಕುಂದಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಎಪಿಎಂಸಿ ನಿರ್ದೇಶಕ ವೈ.ಎಚ್‌. ವಿಜಯಕರ್‌, ಕಸಾಪ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ, ಯುವ ಸಂಘಟನೆಗಳ ಒಕ್ಕೂಟದ ಪುಂಡಲೀಕ ಮುರಾಳ, ಕಿರು ತೆರೆಯ ಹಾಸ್ಯ ಕಲಾವಿದರಾದ ಗೋಪಾಲ ಹೂಗಾರ, ಶ್ರೀಶೈಲ ಹೂಗಾರ, ನ್ಯೂ ಸನ್‌ಟೆಕ್‌ ಕಂಪ್ಯೂಟರ್ಸ್‌ನ ಶಿವಲೀಲಾ ಬಿರಾದಾರ ಮತ್ತಿತರರು ಪುನೀತ್‌ ಅಗಲಿಕೆ ಕುರಿತು ಭಾವುಕರಾಗಿ ಮಾತನಾಡಿದರು.

ಅಪ್ಪು ಹೆಸರಿನಿಂದಲೇ ಗುರುತಿಸಿಕೊಂಡಿದ್ದ ಪುನೀತ್‌ ನಟನೆ ಜೊತೆಗೆ ಸಮಾಜ ಸೇವೆಯನ್ನೂ ಮೈಗೂಡಿಸಿಕೊಂಡಿದ್ದರು. ಅವರಂಥ ನಟ, ಮಾನವೀಯತೆಯ ಹೃದಯವಂತ ಇನ್ನೊಬ್ಬರನ್ನು ಕಂಡಿಲ್ಲ. ಪುನೀತ್‌ ಯುವ ಜನತೆಗೆ ಆದರ್ಶಪ್ರಾಯರಾಗುವಂಥ ಸಾತ್ವಿಕ ಜೀವನ ನಡೆಸುತ್ತಿದ್ದರು. ಅವರು ಹೆಸರನ್ನೇ ಬಯಸದೆ ಮಾನವೀಯ ತುಡಿತದ ಸಮಾಜ ಮುಖೀ ಕಾರ್ಯ ಮಾಡುತ್ತಲೇ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಅವರದ್ದು ದುರಂತ ಜೀವನ. ಅನಾಥಾಶ್ರಮ, ಗೋಶಾಲೆಗಳಿಗೆ ನೆರವು, ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಹೊಣೆ ಹೀಗೆ ಸಣ್ಣ ವಯಸ್ಸಿನಲ್ಲೇ ಹತ್ತು ಹಲವು ದೊಡ್ಡ ಕೆಲಸಗಳನ್ನು ಮಾಡಿರುವ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.

ಇದನ್ನೂ ಓದಿ:ಅಪ್ಪು ಅಂತಿಮಯಾತ್ರೆ ಶಾಂತಿಯುತ

ಈ ಸಂದರ್ಭ ಗಾಯಕರಾದ ಯಶು ಬಸಪ್ಪ, ದೀಪರತ್ನಶ್ರೀ ಸೇರಿದಂತೆ ಪಾಲ್ಗೊಂಡಿದ್ದ ಎಲ್ಲ ಕಲಾವಿದರೂ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ, ಬೊಂಬೆಯ ಮುರಿದ ಮಣ್ಣಾಗಿಸಿದ ಎನ್ನುವ ಗೀತೆಯ ಸಾಲುಗಳನ್ನು ಭಾವ ಪರವಶರಾಗಿ ಕೋರಸ್‌ನಲ್ಲಿ ಹಾಡಿ ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗುವಂತೆ ಮಾಡಿದರು. ಅಭಿನಂದನ್‌ ಕಡೆಹಳ್ಳಿ, ಮಹಿಬೂಬ ಗೊಳಸಂಗಿ, ಹುಲಗಪ್ಪ ನಾಯಕಮಕ್ಕಳ, ಗಂಗಾಧರ ಸಾಲಿಮಠ, ಶಂಕರ ಸಾಲಿಮಠ, ಸಂಗಮೇಶ ಶಿವಣಗಿ, ಸಂಗನಗೌಡ ಬಿರಾದಾರ, ಮುನೀರ್‌ ಅವಟಿಗೇರ, ಶಂಕರ ಡಮನಾಳ, ಮಹಾಂತೇಶ ಬೂದಿಹಾಳಮಠ, ಹುಸೇನ್‌ ಮುಲ್ಲಾ, ನಾಗರಾಜಗೌಡ ಬಿರಾದಾರ, ಸ್ಥಳೀಯ ಕಲಾವಿದರು, ಅಭಿಮಾನಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಪುನೀತ್‌ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ, ಪುಷ್ಪ ವೃಷ್ಟಿಗರೆದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಹೆಣ್ಣು ಮಗುವಿನ ಶಿಕ್ಷಣ ಜವಾಬ್ದಾರಿ

ಕಾರ್ಯಕ್ರಮದಲ್ಲಿ ಕಣ್ಣೀರು ಸುರಿಸುತ್ತಲೇ ಭಾವುಕರಾಗಿ ಮಾತನಾಡಿದ ಪುನೀತ್‌ ಕಟ್ಟಾ ಅಭಿಮಾನಿ, ಬಸವ ಫ್ಲೆಕ್ಸ್‌ನ ಮಾಲಿಕ ಬಸವರಾಜ ಬಿರಾದಾರ, ಪುನೀತ್‌ ಅವರು 1800 ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು. ನಾನೂ ಅವರ ದಾರಿಯಲ್ಲೇ ಸಾಗಿ ಒಬ್ಬ ಬಡ ಅಥವಾ ಅನಾಥ ಹೆಣ್ಣು ಮಗುವಿಗೆ ಎಸ್ಸೆಸ್ಸೆಲ್ಸಿವರೆಗೂ ಶಿಕ್ಷಣ ಕೊಡಿಸುವ ಜವಾಬ್ದಾರಿ ಹೊರುತ್ತೇನೆ. ಈ ಬಗ್ಗೆ ಯಾರಾದರೂ ನನ್ನ ಗಮನಕ್ಕೆ ತಂದಲ್ಲಿ 2-3 ದಿನಗಳಲ್ಲಿ ಆ ಮಗುವನ್ನು ಭೇಟಿ ಮಾಡಿ ಎಲ್ಲ ವ್ಯವಸ್ಥೆ ಮಾಡುತ್ತೇನೆ. ಇದು ಪುನೀತ್‌ಗೆ ನಾನು ಕೊಡುವ ಅಭಿಮಾನದ ಕಾಣಿಕೆ ಎಂದು ಕಣ್ಣೀರಾದರು. ಈ ಮಾತುಗಳು ಅಲ್ಲಿದ್ದ ಎಲ್ಲರ ಕಣ್ಣಲ್ಲಿ ನೀರು ಜಿನುಗಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next