ಗೌತಮ್ ಮೆನನ್ ನಿರ್ದೇಶನದ ಚಿತ್ರವೊಂದರಲ್ಲಿ ಪುನೀತ್ ರಾಜಕುಮಾರ್ ನಟಿಸುತ್ತಿದ್ದಾರೆ ಎಂಬ ಸುದ್ದಿಗೆ ಎರಡೂ¾ರು ವರ್ಷಗಳ ಇತಿಹಾಸವಿದೆ. ಗೌತಮ್ ಮೆನನ್ ಅವರು ನಾಲ್ಕು ಭಾಷೆಗಳಲ್ಲಿ ಚಿತ್ರವೊಂದನ್ನು ಮಾಡುವ ಉದ್ದೇಶ ಹೊಂದಿದ್ದು, ದಕ್ಷಿಣ ಭಾರತದ ನಾಲ್ಕೂ ಚಿತ್ರರಂಗದ, ನಾಲ್ವರು ಸೂಪರ್‌ಸ್ಟಾರ್‌ಗಳು ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ವರ್ಷಗಳ ಹಿಂದೆ ಬಂದಿತ್ತು. ಆ ಪೈಕಿ ಕನ್ನಡದಿಂದ ಪುನೀತ್ ರಾಜಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು.
ಆದರೆ, ಕಾರಣಾಂತರದಿಂದ ಚಿತ್ರ ಇದುವರೆಗೂ ಸೆಟ್ಟೇರಿಲ್ಲ. ಈಗ ಆ ಚಿತ್ರಕ್ಕೆ ಪುನಃ ಜೀವ ಕೊಡಲಾಗುತ್ತಿದ್ದು, ಸದ್ಯದಲ್ಲೇ ಶುರುವಾಗಲಿದೆ ಎಂಬ ಸುದ್ದಿ ಇದೆ. ಹಾಗಂತ ಈ ವಿಷಯವನ್ನು ಪುನೀತ್ ಹೇಳಿಲ್ಲ, ಮಲಯಾಳಂ ನಟ ಪೃಥ್ವಿರಾಜ್ ಹೇಳಿಕೊಂಡಿದ್ದಾರೆ. ಪೃಥ್ವಿಗೂ ಈ ಚಿತ್ರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಇದ್ದರೆ ಇಲ್ಲಿ ಕೇಳಿ. ಇತ್ತೀಚೆಗೆ, ಮಲಯಾಳಂ ನಟ ಪೃಥ್ವಿರಾಜ್ ಮುಂಬೈಗೆ “ನಾಮ್ ಶಬಾನಾ’ ಚಿತ್ರದ ಪತ್ರಿಕಾಗೋಷ್ಠಿಗೆ ಹೋಗಿದ್ದರಂತೆ.
ಈ ಸಂದರ್ಭದಲ್ಲಿ ಪತ್ರಕರ್ತರು, ಪೃಥ್ವಿಯನ್ನು ಹಿಡಿದು ಮಾತಾಡಿಸಿದ್ದಾರೆ. ನಿಮ್ಮ ಮುಂದಿನ ಚಿತ್ರ ಯಾವುದು ಸಾರ್ ಎಂಬ ಪ್ರಶ್ನೆ ಕೇಳಿದಾಗ, ಆಗ ಗೌತಮ್ ಮೆನನ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಾಲ್ವರು ಹೀರೋಗಳಿರುವ ಆ ಚಿತ್ರದಲ್ಲಿ ಪುನೀತ್ ಸಹ ನಟಿಸುತ್ತಿರುವ ಬಗ್ಗೆ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ನಾಯಕಿಯರಾಗಿ ಸದ್ಯಕ್ಕೆ ಅನೂಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಅವರುಗಳೂ ಇರುತ್ತಾರಂತೆ. ಇನ್ನು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರಂತೆ.
ಚಿತ್ರ ಯಾವಾಗ ಶುರುವಾಗಬಹುದು, ಯಾರೆಲ್ಲಾ ಇರಬಹುದು ಎಂಬ ವಿಷಯಗಳನ್ನು ಮಾತ್ರ ಪೃಥ್ವಿರಾಜ್ ಹೇಳಿಕೊಂಡಿಲ್ಲ. ಅಲ್ಲಿಗೆ ಪುನೀತ್ ಮತ್ತು ಗೌತಮ್ ಮೆನನ್ ಅವರ ಚಿತ್ರಕ್ಕೆ ಮತ್ತೆ ಜೀವ ಬಂದಂತೆ ಕಾಣುತ್ತಿದೆ. ಶುಕ್ರವಾರವಷ್ಟೇ ಪುನೀತ್ ರಾಜಕುಮಾರ್ ಅವರು “ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು. ಈಗ ಗೌತಮ ಮೆನನ್ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ. ಇದರಲ್ಲಿ ಯಾವುದು ಮೊದಲು, ಯಾವುದು ನಂತರ ಎಂಬುದೆಲ್ಲಾ ಇನ್ನಷ್ಟೇ ಗೊತ್ತಾಗಬೇಕಿದೆ.