ಪುಣೆ: ಭಾಷೆ ಎಂಬುದು ನಮ್ಮ ದೇಹದಲ್ಲಿ ಹರಿಯುವ ರಕ್ತದಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಭಾಷೆಯ ಸಂವಹನ ಪರಸ್ಪರ ಸಂಬಂಧವನ್ನು ಜೋಡಿಸುವ ಪ್ರಕ್ರಿಯೆಯಾಗಿದೆ. ಒಂದು ಪ್ರಾದೇಶಿಕವಾದ ಭಾಷೆಗೂ ಅಲ್ಲಿನ ಪರಿಸರದ ಸಂಸ್ಕೃತಿಗೂ ಅನ್ಯೋನ್ಯವಾದ ಸಂಬಂಧವನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಭಾಷೆಯನ್ನು ಪ್ರೀತಿಸಿ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಲೋಕಸತ್ತಾ ಪತ್ರಿಕೆಯ ಸಂಪಾದಕರಾದ ಮುಕುಂದ್ ಸಂಗೋರಾಮ್ ಅಭಿಪ್ರಾಯಪಟ್ಟರು.
ಫೆ. 21 ರಂದು ಪುಣೆಯ ಕನ್ನಡ ಸಂಘದ ಡಾ| ಶ್ಯಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರ ಪುಣೆ ವತಿಯಿಂದ ವಿಶ್ವ ಮಾತೃಭಾಷಾ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ಯ ಭಾಷೆಯನ್ನೂ ಕಲಿಯುವುದರಿಂದ ಸಿಗುವ ಆನಂದವೇ ಬೇರೆಯಾಗಿದೆ. ಪುಣೆಯಲ್ಲಿ ಕೃ. ಶಿ. ಹೆಗಡೆಯವರ ನೇತೃತ್ವದಲ್ಲಿ ಮರಾಠಿ ಕನ್ನಡ-ಸ್ನೇಹವರ್ಧನ ಕೇಂದ್ರ ಮಾಡುತ್ತಿರುವ ಭಾಷಾ ಸೇವೆ ಅನನ್ಯವಾಗಿದೆ. ನಮ್ಮ ಮಾತೃಭಾಷೆಯನ್ನು ಪ್ರೀತಿಸಿಕೊಂಡು ಅದರೊಂದಿಗೆ ಅನ್ಯ ಭಾಷೆಯನ್ನೂ ಕಲಿಯುವ ಹೃದಯವಂತಿಕೆ ನಮ್ಮೊಳಗಿನ ಬಾಂಧವ್ಯವನ್ನು ಬೆಸೆಯುತ್ತದೆ ಎಂದರು.
ಮೊದಲಿಗೆ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃ. ಶಿ. ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ವತಿಯಿಂದ ಸಾನೇ ಗುರೂಜಿಯವರ ಅಂತರ್ ಭಾರತಿಯ ಕಲ್ಪನೆಯನ್ನು ಸಾರ್ಥಕಗೊಳಿಸುವ ಕಾರ್ಯ ನಡೆಯುತ್ತಿದೆ. ಪ್ರತೀ ವರ್ಷ ನಾಲ್ಕರಿಂದ ಐದು ಜ್ಞಾನಸತ್ರ ಕಾರ್ಯಕ್ರಮಗಳನ್ನು ಕೇಂದ್ರದ ವತಿಯಿಂದ ಸ್ನೇಹಸೇತುವಾಗಿ ಆಯೋಜಿಸಿ ಭಾಷೆಯ ಪ್ರವರ್ಧನೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ಮರಾಠಿ ಹಾಗೂ ಕನ್ನಡಿಗರ ನಡುವೆ ಭಾಷಾ ಕೊಡುಕೊಳ್ಳುವ ಸಂಬಂಧ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಎರಡು ಭಾಷೆಗಳನ್ನು ಜೋಡಿಸುವ ಕಾರ್ಯದಲ್ಲಿ ಪಂಡಿತ್ ಭೀಮ್ ಸೇನ್ ಜೋಶಿ, ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್, ಯೋಗಾಚಾರ್ಯ ಬಿ. ಕೆ. ಎಸ್. ಅಯ್ಯಂಗಾರ್ ಅರಂತಹ ಮಹಾನ್ ಗಣ್ಯರ ಕೊಡುಗೆ ಅಪಾರವಾಗಿದೆ. ಎರಡು ಭಾಷಿಕರ ನಡುವಿನ ಈ ಸಂಬಂಧವನ್ನು ಉಳಿಸಿಕೊಂಡು ಎರಡು ಭಾಷೆಯನ್ನೂ ಗಟ್ಟಿಗೊಳಿಸುವ ಪ್ರಯತ್ನ ಕೇಂದ್ರ¨ªಾಗಿದೆ. ಭವಿಷ್ಯದಲ್ಲಿ ಮರಾಠಿ ಕನ್ನಡ ಭಾಷೆಯೊಂದಿಗೆ ತೆಲುಗು ಹಾಗೂ ತಮಿಳು ಭಾಷೆಗಳನ್ನೂ ಜೋಡಿಸುವ ಯೋಜನೆ ಭವಿಷ್ಯದಲ್ಲಿ ಸಂಸ್ಥೆಯಿಂದ ನಡೆಯಲಿದೆ ಎಂದರು.
ಬೆಂಗಳೂರಿನ ಖ್ಯಾತ ಸಾಹಿತಿ, ಅನುವಾದಕ ಎಸ್. ಎಂ. ಕೃಷ್ಣರಾವ್ ಮಾತನಾಡಿ, ಕೇವಲ ಒಂದು ದಿನ ಮಾತೃಭಾಷಾ ದಿನವನ್ನು ಆಚರಿಸುವ ಮತ್ತು ಭಾಷಣ ಬಿಗಿಯುವುದರ ಮೂಲಕವೊ ಭಾಷೆಯ ಬೆಳವಣಿಗೆ ಆಗುವುದಿಲ್ಲ. ಮಾತೃಭಾಷೆಯನ್ನು ಪ್ರೀತಿಸುವ ಜನರಿರುವುದರಿಂದ ಭಾಷೆ ಎಂದೊ ಅಳಿಯಲು ಸಾಧ್ಯವಿಲ್ಲ. ನಮ್ಮ ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಪ್ರೀತಿಸಿ ಉಳಿಸಿ ಬೆಳೆಸುವ ಗುಣ ನಮ್ಮಲ್ಲಿರಬೇಕು. ಪುಣೆಯ ಭಾಷಾ ಬಾಂಧವ್ಯದ ಈ ಕೇಂದ್ರ ಭಾಷೆಗಳನ್ನು ಜೋಡಿಸುವ ಕಾರ್ಯ ಮಾಡುತ್ತಿರುವುದು ಅಭಿಮಾನದ ವಿಚಾರವಾಗಿದೆ ಎಂದರು.
ಮರಾಠಿ ಸಾಹಿತಿ ಪ್ರಕಾಶ ಭಾತಂಬ್ರೇಕರ್ ಮಾತನಾಡಿ, ಮಹಾರಾಷ್ಟ್ರ ಹಾಗೂ ಕನ್ನಡಿಗರ ಸಂಬಂಧಗಳು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಾನೇ ಗುರೂಜಿಯವರ ಅಂತರ್ ಭಾರತಿಯ ಪರಿಕಲ್ಪನೆಯಂತೆ ಸರ್ವ ಭಾಷೆಯನ್ನು ಪ್ರೀತಿಸುವ ಬಗ್ಗೆ ತಿಳಿಸಲಾಗಿದೆ. ಈ ಚಿಂತನೆ ಪುಣೆಯ ಈ ಕೇಂದ್ರದಿಂದ ಕೃ. ಶಿ. ಹೆಗಡೆಯವರ ಮೂಲಕ ಸಾಧ್ಯವಾಗುತ್ತಿರುವುದು ಅಭಿನಂದನೀಯವಾಗಿದೆ. ಸರಕಾರಕ್ಕೆ ಭಾಷೆ, ಸಾಹಿತ್ಯಗಳ ಏಳ್ಗೆ ಕೇವಲ ಮಾತಿಗಷ್ಟೇ ಸೀಮಿತವಾಗಿದ್ದು ನಿಜವಾಗಿ ಈ ಬಗ್ಗೆ ಗಂಭೀರವಾಗಿ ಪ್ರಯತ್ನವಾಗದಿರುವುದು ದುರದೃಷ್ಟವಾಗಿದೆ. ನಾವು ನಮ್ಮ ಭಾಷೆಯನ್ನೂ ಪ್ರೀತಿಸಿ ಬೆಳೆಸುವುದರಿಂದ, ಸಾಹಿತಿಗಳು, ಅನುವಾದಕರುಗಳಿಂದಲೇ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.
ವೇದಿಕೆಯಲ್ಲಿ ಪಂಡಿತ್ ಉಪೇಂದ್ರ ಭಟ್, ಕೇಂದ್ರದ ವಿಶ್ವಸ್ಥರಾದ ಪಾಂಗಾಳ ವಿಶ್ವನಾಥ ಶೆಟ್ಟಿ, ರಾಘವೇಂದ್ರ ಕಟ್ಟಿ, ಅರುಣ್ ಕುಲಕರ್ಣಿ ಉಪಸ್ಥಿತರಿದ್ದರು. ಮೊದಲಿಗೆ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಅತಿಥಿ ಗಣ್ಯರನ್ನು ಶಾಲು ಹೊದೆಸಿ, ಶ್ರೀಫಲ, ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಕೃ. ಶಿ. ಹೆಗಡೆಯವರು ಪಂಡಿತ್ ಭೀಮ್ ಸೇನ್ ಜೋಶಿಯವರ ಬಗ್ಗೆ ಬರೆದ ಸ್ವರಭಾಸ್ಕರ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು. ಪಂಡಿತ್ ಭೀಮ್ ಸೇನ್ ಜೋಶಿಯವರ ಶಿಷ್ಯರಾದ ಪಂಡಿತ್ ಉಪೇಂದ್ರ ಭಟ್ ಪುಸ್ತಕದ ಬಗ್ಗೆ ವಿವರಿಸಿ, ಅವರು ಎಂದೂ ಅಳಿಯದ ಚಿರಂಜೀವಿಯಾಗಿ ಕಂಡು ಬರುತ್ತಾರೆ. ಅವರ ಬಗೆಗಿನ ಪುಸ್ತಕವನ್ನು ಕೃ. ಶಿ. ಹೆಗಡೆ ಉತ್ತಮವಾಗಿ ಬರೆದಿ¨ªಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುಣೆ ಕನ್ನಡ ಸಂಘದ ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ, ಪುಣೆ ತುಳುಕೂಟದ ಸಾಂಸ್ಕೃತಿಯ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕÇÉಾಡಿ, ಎನ್. ಆರ್. ಕುಲಕರ್ಣಿ, ವೈಶಾಲಿ ಲೇಲೆ, ಸಂಪದಾ ಕಾಳೆ ಮುಂತಾದ ಗಣ್ಯರನ್ನು ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಅರುಣ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಹೈಸ್ಕೂಲ್ ಪ್ರಾಂಶುಪಾಲರಾದ ಚಂದ್ರಕಾಂತ ಹಾರಕೂಡೆ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು