ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ ವಾರ್ಷಿಕ ಪುರಂದರದಾಸ ಗೀತೆಗಳ ಗಾಯನ ಸ್ಪರ್ಧೆಯನ್ನು ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ಫೆ. 9ರಂದು ಆಯೋಜಿಸಲಾಯಿತು.
ಹಿರಿಯರ ವಿಭಾಗ, ಯುವ ವಿಭಾಗ ಹಾಗೂ ಚಿಣ್ಣರಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಕನಕದಾಸ, ಪುರಂದರದಾಸ ಮತ್ತು ವಿಜಯದಾಸರ ಹಾಡುಗಳನ್ನು ಹಾಡುವ ಅವಕಾಶ ಕಲ್ಪಿಸಲಾಯಿತು. ಒಟ್ಟು 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದರು.
5 ವರ್ಷದ ಮಕ್ಕಳಿಂದ ಹಿಡಿದು 75 ವರ್ಷದ ಹಿರಿಯ ನಾಗರಿಕರು ಭಾಗವಹಿಸಿ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆದರು. ಪ್ರಾರಂಭದಲ್ಲಿ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಕಾರ್ಯದರ್ಶಿ ಮಾಲತಿ ಕಲ್ಮಾಡಿ ಹಾಗೂ ಜೊತೆ ಕೋಶಾಧಿಕಾರಿ ರಾಧಿಕಾ ಶರ್ಮ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸದಸ್ಯರೂ ಉತ್ತಮವಾದ ಗಾಯನದೊಂದಿಗೆ ಗಮನ ಸೆಳೆದರು.
ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಮಾತನಾಡಿ, ಮನೆ ಮನೆಯಲ್ಲಿ ಎಲ್ಲರ ಮನಗಳಲ್ಲಿ ಭಕ್ತಿಭಾವವನ್ನು ಮೂಡಿಸಲು ದಾಸ ಸಾಹಿತ್ಯ ಸಹಕಾರಿಯಗಿದ್ದು ನಿತ್ಯ ಈ ಹಾಡುಗಳನ್ನು ಹಾಡಿ ಮಾನಸಿಕ ಶಾಂತಿ ಪಡೆಯಬಹುದು. ಪುರಂದರದಾಸರ ಹಾಡುಗಳು ಪುರಂದರ ವಿಠಲನನ್ನು ಸ್ಮರಿಸಿದಾಗ ಕರ್ನಾಟಕ ಮತ್ತು ಮಹಾರಾಷ್ಟ್ರದ ನಿಕಟ ಬಾಂಧವ್ಯವನ್ನು ವ್ಯಕ್ತಪಡಿಸುವುದೆಂದು ತಿಳಿಸಿದರು.
ಸ್ಪರ್ಧೆಗಳಲ್ಲಿ ವಿಜೇತರಾದ ವಿನೀತ ಆಚಾರ್ಯ ಪ್ರಜಕ್ತ ದೇವರ್ದ ದಿವ್ಯ ಶ್ರೀಕಾಂತ, ಹೇಮಾ ಕುಲಕರ್ಣಿ, ಕು| ದರ್ಶನ ಸುರೇಶ, ಕು| ಸಾಕ್ಷಿ ಜಾಧವ್, ಕು| ಸಮೃದ್ಧಿ, ಕು| ಜಾಹ್ನವಿ ಇವರುಗಳನ್ನು ಇಂದಿರಾ ಸಾಲಿಯಾನ್, ಮಾಲತಿ ಕಲ್ಮಾಡಿ ಮತ್ತು ರಾಮದಾಸ್ ಆಚಾರ್ಯ ಬಹುಮಾನಗಳನ್ನು ನೀಡಿ ಗೌರವಿಸಿದರು.
ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕಿ ಜ್ಯೋತಿ ಕಡಕೊಳ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ| ರಾಜಶ್ರೀ ಮಹಾಜನ್ ಹಾಗೂ ಸುಧಾ ಆಚಾರ್ಯ ನಿರ್ಣಾಯಕರಾಗಿ ಸಹಕರಿಸಿದರು.
ಸ್ಪರ್ಧೆಯ ನಂತರ ಸಂಗೀತ ಶಿಕ್ಷಣ ಡಾ| ರಾಜಶ್ರೀ ಮಹಾಜನ್ ಅವರು ತಮ್ಮ ಸುಮಧುರ ಕಂಠದಲ್ಲಿ ಇಂದಿರಾ ಸಾಲಿಯಾನ್ ಸೂಚಿಸಿದ ಮತ್ತು ಕೆಲವು ಪ್ರಮುಖ ಪುರಂದರದಾಸರ ಹಾಡುಗಳನ್ನು ಅಚ್ಚ ಕನ್ನಡದಲ್ಲಿ ಹಾಡಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ವಂದಿಸಿದರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ -ವರದಿ: ಕಿರಣ್ ಬಿ. ರೈ ಕರ್ನೂರು