Advertisement

ಪುಣೆ ಕನ್ನಡ ಸಂಘ ಸಂಸ್ಥಾಪಕ ಡಾ|ಶಾಮರಾವ್‌ ಜನ್ಮ ಶತಾಬ್ದ: ಸಂಗೀತ ಸಂಜೆ

11:49 AM Apr 04, 2018 | Team Udayavani |

ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ ಸಂಘದ  ಸಂಸ್ಥಾಪಕ ದಿವಂಗತ ಡಾ|  ಶಾಮರಾವ್‌ ಕಲ್ಮಾಡಿ ಅವರ ಜನ್ಮಶತಾಬ್ದ ನಿಮಿತ್ತವಾಗಿ ಅವಿಸ್ಮರಣೀಯ ಸಂಗೀತ ಕಾರ್ಯಕ್ರಮ ವನ್ನು ಮಾ. 31ರಂದು ಶಕುಂತಲಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ  ಆಯೋಜಿಸಲಾಯಿತು.

Advertisement

ಪುಣೆಯ ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ ಆರತಿ ಅಂಕಲಿಕರ್‌ ಮತ್ತು ಚೆನ್ನೈಯ ಹೆಸರಾಂತ ಕರ್ನಾಟಕ ಸಂಗೀತ ವಿದುಷಿ ಗಾಯತ್ರಿ ವೆಂಕಟರಾಮನ್‌ ಇವರ ಜುಗಲ್‌ಬಂದಿ ಮೋಡಿ ಮಾಡಿತು.  ಈ ವಿಶಿಷ್ಟ ಕಾರ್ಯಕ್ರಮದಲ್ಲಿ  ಪುಣೆಯ ಸಂಗೀತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ  ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪುಣೆಯಲ್ಲಿ ನೆಲೆಸಿರುವ ಕನ್ನಡಿಗ ಪ್ರಸಿದ್ಧ ಸಂತೂರ್‌ ವಾದಕ ಉಸ್ತಾದ್‌ ಉಸ್ಮಾನ್‌ ಖಾನ್‌, ಹಿಂದುಸ್ಥಾನಿ ಸಂಗೀತಜ್ಞೆ  ಆರತಿ ಅಂಕಲಿಕರ್‌ ಮತ್ತು ಪುಣೆಯ ಸಂಗೀತ ಶಿಕ್ಷಕಿ  ರಜನಿ ಪಾಚ್ಚಾಪುರ್‌ ಇವರನ್ನು ಸಂಘದ ವತಿಯಿಂದ  “ಸಂಗೀತ ಗುರು’ ಪ್ರಶಸ್ತಿಯನ್ನು ನೀಡಿ  ಪುಣೆಯ ಮಾಜಿ ಸಂಸದ ಸುರೇಶ ಕಲ್ಮಾಡಿ, ಮೀರಾ ಕಲ್ಮಾಡಿ ಹಾಗೂ   ಕುಶಲ್‌ ಹೆಗ್ಡೆ ಅವರು ಸಮ್ಮಾನಿಸಿದರು. 

ಅನಂತರ ನಿರಂತರ 2 ಗಂಟೆಗಳ ಕಾಲ ನಡೆದ ಜುಗಲ್ಬಂದಿ ತುಂಬಿದ ಸಭಾಗೃಹದಲ್ಲಿ ರಸಿಕರ ಮನತಣಿಸಿ ಮೆಚ್ಚುಗೆಗೆ ಪಾತ್ರವಾಯಿತು. 

ಗಾಯತ್ರಿ ಅವರ ಕನ್ನಡ ಹಾಡು ಕಲ್ಲುಸಕ್ಕರೆ ಕೊಳ್ಳಿರೋ ಮತ್ತು ಕೃಷ್ಣಾ ನೀ ಬೇಗನೆ ಬಾರೋ ಆರತಿ ಅವರ ಹೋಳಿ ಗೀತೆ, ಭೈರವಿ ಮತ್ತು ತಬಲಾ ಮೃದಂಗದ ಜೋಡಿ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

Advertisement

ದಿವಂಗತ ಶಾಮರಾವ್‌ ಅವರು ವೈದ್ಯಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದು ಪುಣೆಯ ಜನರ ಮೆಚ್ಚಿನ ವ್ಯಕ್ತಿಯಾಗಿದ್ದರು. ಅವರ ಜನ್ಮ ಶತಾಬ್ದಿ ವರ್ಷದಲ್ಲಿ ಕನ್ನಡ ಸಂಘ ಹಲವಾರು ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ವಿಶ್ವಸ್ತರು, ಪದಾಧಿಕಾರಿಗಳು, ಕಲ್ಮಾಡಿ ಪರಿವಾರದ ಸದಸ್ಯರು ಕನ್ನಡಿಗರು ಮತ್ತು ಸ್ಥಳೀಯ ಸಂಗೀತಾಭಿಮಾನಿಗಳು ಕಿಕ್ಕಿರಿದು ನೆರೆದು ಈ ಅಪೂರ್ವ ಸಂಗೀತ ಸಂಜೆಯಯನ್ನು ಯಶಸ್ವಿಗೊಳಿಸಿದರು.
ಸಂಘದ  ಕಾರ್ಯದರ್ಶಿ  ಮಾಲತಿ ಕಲ್ಮಾಡಿ ಯವರು ವಂದಿಸಿದರು. 

ಚಿತ್ರ -ವರದಿ :ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next