Advertisement

ಲಾಕ್‌ಡೌನ್‌ ಸಮಯದಲ್ಲಿ ನೆರವಿನ ಹಸ್ತ ಚಾಚಿದ ಪುಣೆ ಬಂಟರ ಸಂಘ

05:16 PM Oct 05, 2020 | Suhan S |

ಪುಣೆ, ಅ. 4: ಕಳೆದ ನಾಲ್ಕು ದಶಕಗಳ ಹಿಂದೆ  ಪುಣೆಯಲ್ಲಿರುವ ಸಮಾಜ ಬಾಂಧವರನ್ನು ಒಗ್ಗೂಡಿಸಲು ಸಮುದಾಯದ ಹಿರಿಯರು ಸಂಘವೊಂದನ್ನು ಸ್ಥಾಪಿಸಿದರು. ಸಮುದಾಯ ಬಾಂಧವರ ಪರಸ್ಪರ ಕಷ್ಟ-ಸುಖಗಳಲ್ಲಿ ಸ್ಪಂದಿಸಲು, ನಾಡಿನ ಸಂಸ್ಕೃತಿಯನ್ನು  ಉಳಿಸಿ-ಬೆಳೆಸುವ ದೂರದೃಷ್ಟಿಯ  ಚಿಂತನೆಯೊಂದಿಗೆ ಈ ಸಂಘ ಅಸ್ತಿತ್ವಕ್ಕೆ ಬಂದಿತು. ಸಮುದಾಯದ ಹಿರಿಯರ ಈ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಯಾವತ್ತೂ ಹಿಂದುಳಿಯದೆ ಸಕಾರಾತ್ಮಕವಾಗಿ ಮತ್ತು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಸೇವಾ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವುದು ಸಂಘದ ಹೆಗ್ಗಳಿಕೆಯಾಗಿದೆ.

Advertisement

ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಸಮಾಜ ಬಾಂಧವರೆಲ್ಲ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಸಂಘವು ಹಿಂದೆ ಮುಂದೆ ಯೋಚಿಸದೆ  ತತ್‌ಕ್ಷಣ  ಕಾರ್ಯೋನ್ಮುಖವಾಗಿ ಸಮಾಜ ಬಾಂಧವರಿಗೆ ನೀಡಿದ ಸಹಕಾರ, ನೆರವು ಅತ್ಯಮೂಲ್ಯವಾಗಿದೆ.

ಕಾರ್ಯಕಾರಿ ಸಮಿತಿಯ ಸಕಾರಾತ್ಮಕ ನಿರ್ಧಾರಗಳು  :

ಸಮಾಜ ಬಾಂಧವರ ಕ್ಷೇಮಾಭಿವೃದ್ಧಿಯ ಮಹತ್ತರ ಉದ್ದೇಶದೊಂದಿಗೆ ಪುಣೆ ಬಂಟರ ಸಂಘವು ಪ್ರತಿಯೊಂದು ಕಾರ್ಯ ಯೋಜನೆಯನ್ನು ಜಾರಿಗೊಳಿಸುತ್ತ ಬಂದಿದೆ. ಲಾಕ್‌ಡೌನ್‌ ಜಾರಿಯಾದ ಸಂದರ್ಭ ಸಂಘವು ತುರ್ತು ಸಭೆಯನ್ನು ಹಮ್ಮಿಕೊಂಡು ಸಂಘದ ಪದಾಧಿಕಾರಿಗಳೆಲ್ಲರ ಸಹಮತದಂತೆ  ಸಮಾಜ ಬಾಂಧವರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾರ್ಯಯೋಜನೆಯನ್ನು ರೂಪಿಸಿತು. ಮೊದಲ ಹಂತದಲ್ಲಿ ಸಂಘದ ವತಿಯಿಂದ ಸಮಾಜ ಬಾಂಧವರೆಲ್ಲರಿಗೂ ಕೋವಿಡ್ ಮಹಾಮಾರಿಯಿಂದ ಯಾವ ರೀತಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂಬ ಜಾಗೃತಿಯನ್ನು ಮೂಡಿಸುವ ಸಂದೇಶಗಳನ್ನು ಕಳುಹಿಸಲಾಯಿತು. ಬಳಿಕ ಹಂತಹಂತವಾಗಿ ಸಮಾಜ ಬಾಂಧವರಿಗೆ ನೆರವು ನೀಡಲಾಯಿತು. ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಸುಮಾರು 1,000ಕ್ಕೂ ಅಧಿಕ ಆಹಾರದ ಕಿಟ್‌ಗಳನ್ನು ಸಂಘವು ವಿತರಿಸಿದೆ.

ವಿವಿಧ ಯೋಜನೆಗಳಡಿ ನೆರವು  :

Advertisement

ಸಂಘವು ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ತನ್ನದೇ ಸಾಂಸ್ಕೃತಿಕ ಭವನವನ್ನು ನಿರ್ಮಿಸಿ ಸಮಾಜ ಸೇವೆಯ ಆಯಾಮದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಶಿಕ್ಷಣ, ಸಮಾಜ ಕಲ್ಯಾಣ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಸಮಾಜ ಬಾಂಧವರಿಗೆ ಸಹಕರಿಸಲು ಸಂಘವು ಹಲವಾರು ಯೋಜನೆಗಳನ್ನು ಆರಂಭಿಸಿದೆ. ಲಾಕ್‌ಡೌನ್‌ ಸಮಯದಲ್ಲಿ ಪುಣೆಯಲ್ಲಿರುವ ಬಂಟ ಸಮಾಜ ಮಾತ್ರವಲ್ಲದೆ ಅನ್ಯ ಸಮುದಾಯದವರಿಗೂ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿ ಮಾದರಿ  ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸಂಘದ ಅಧ್ಯಕ್ಷರ ಮಹತ್ವಾಕಾಂಕ್ಷೆಯ “ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಯೋಜನೆ’, “ದಯಾಶಂಕರ್‌ ಶೆಟ್ಟಿ ಅನ್ನದಾತ ಯೋಜನೆ’ಗಳಡಿಯಲ್ಲಿ ಲಾಕ್‌ಡೌನ್‌ ಸಂದರ್ಭ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲಾಯಿತು.

ಪ್ರಾದೇಶಿಕ ಸಮಿತಿಗಳ ಸಹಕಾರ  : ಪುಣೆ ಬಂಟರ ಸಂಘವು ತನ್ನ ವಿವಿಧ ಶೈಕ್ಷಣಿಕ ಮತ್ತು ಸಮಾಜಪರ ಯೋಜನೆಗಳನ್ನು ಪುಣೆಯ ಮೂಲೆ ಮೂಲೆಯಲ್ಲಿ ನೆಲೆಸಿರುವ ಸಮಾಜ ಬಾಂಧವರ ಮನೆ ಬಾಗಿಲಿಗೆ ತಲುಪುವಂತಾಗಲು ಪ್ರಾದೇಶಿಕ ಸಮಿತಿಗಳನ್ನು ರಚಿಸಿದೆ. ಅದರ ಮುಖಾಂತರ  ಗ್ರಾಮೀಣ ಪ್ರದೇಶಗಳ ಬಂಟ ಬಾಂಧವರು ಸಂಘದ ನೆರವನ್ನು ಪಡೆಯುತ್ತಿದ್ದಾರೆ. ಸಂಘದ ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳು, ಸಂಘದ ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರೆಲ್ಲ ಈ ಕಾರ್ಯದಲ್ಲಿ  ಕೈಜೋಡಿಸಿರುವುದಲ್ಲದೆ ಕೋವಿಡ್ ಮಹಾಮಾರಿಯನ್ನು ಲೆಕ್ಕಿಸದೆ ಸಂಕಷ್ಟಕ್ಕೀಡಾದ ಸಮಾಜ ಬಾಂಧವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ.

16 ಲಕ್ಷ ರೂ. ಗಳಿಗೂ ಹೆಚ್ಚು ಮೊತ್ತದ ನೆರವು ಹಸ್ತಾಂತರ  : ಒಂದೆಡೆ ಪುಣೆಯಲ್ಲಿ ಕಠಿನ ಲಾಕ್‌ಡೌನ್‌ ಘೋಷಿಸಲಾಗಿದ್ದರೆ ಇನ್ನೊಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿತ್ತು.  ಇಂತಹ ಆತಂಕದ ಸಂದರ್ಭದಲ್ಲಿ  ಪುಣೆ ಬಂಟರ ಸಂಘದ ವತಿಯಿಂದ  ಸುಮಾರು 16 ಲಕ್ಷದ 50 ಸಾವಿರ ರೂ. ಗಳಿಗೂ ಅಧಿಕ ವೆಚ್ಚದ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಪುಣೆಯಾದ್ಯಂತ  ಇರುವ ಕೆಲವೊಂದು ಸಮಾಜ ಬಾಂಧವರ  ಮನೆ ಮನೆಗಳಿಗೂ ಭೇಟಿ ನೀಡಿ ಸಮಿತಿಯ ಕಾರ್ಯಕರ್ತರು ನೆರವನ್ನು ನೀಡಿದ ನಿದರ್ಶನಗಳು ಬಹಳಷ್ಟಿವೆ.

ವೈದ್ಯಕೀಯ ನೆರವು :

ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಅನಾರೋಗ್ಯಕ್ಕೊಳಗಾದ ಸಮಾಜ ಬಾಂಧವರ ಕಷ್ಟಕ್ಕೂ ಸ್ಪಂದಿಸಿದ ಸಂಘವು ಅಗತ್ಯ ಪರಿಸ್ಥಿತಿಗಳಲ್ಲಿ ಆಸ್ಪತ್ರೆಗಳಲ್ಲಿ  ಜನರಿಗೆ ಚಿಕಿತ್ಸೆ ನೀಡುವಲ್ಲಿಯೂ  ನೆರವಾಗಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಂಬಂಧಪಟ್ಟ ವೈದ್ಯಾಧಿಕಾರಿ ಗಳೊಂದಿಗೆ ಸಂಘದ ಪದಾಧಿಕಾರಿಗಳು ಮಾತುಕತೆ ನಡೆಸಿ  ಅನಾರೋಗ್ಯಪೀಡಿತರು ಮತ್ತವರ ಕುಟುಂಬದ ಸದಸ್ಯರಲ್ಲಿ  ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಅಗತ್ಯ ವೈದ್ಯಕೀಯ ನೆರವುಗಳಿಗೆ ತಲಾ 2,000ರೂ. ಗಳಂತೆ ಆರ್ಥಿಕ ನೆರವನ್ನು ವಿತರಿಸಲಾಗಿದೆ. ಅದೇ ರೀತಿ  ಅನಾರೋಗ್ಯ ಪೀಡಿತರಿಗೆ ತುರ್ತು  ನೆರವಿಗಾಗಿ 2,000 ರೂ. ಗಳಂತೆ ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ  ಮಾಡಲಾಗಿದೆ.

ದಾನಿಗಳೇ ಸಂಘದ ಬೆನ್ನೆಲುಬು  :

ಪುಣೆ ಬಂಟರ ಸಂಘವು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಭವನವನ್ನು ಪುಣೆಯ ಹೃದಯ ಭಾಗದಲ್ಲಿ ಹೊಂದಿದ್ದು, ಅದೇ ರೀತಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ವೈದ್ಯಕೀಯ.. ಹೀಗೆ ನಾನಾ ಕ್ಷೇತ್ರಗಳಲ್ಲಿ ಸಂಘವು ಸಲ್ಲಿಸುತ್ತಿರುವ ಸೇವೆ ಅಪಾರವಾಗಿದೆ. ಸಂಘಕ್ಕೆ ಮುಖ್ಯವಾಗಿ ಬೆನ್ನೆಲುಬಾಗಿರುವವರು ದಾನಿಗಳು. ಪುಣೆಯ ಮಹಾದಾನಿ, ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ ಅವರಂತಹ ನೂರಾರು ಮಂದಿ ದಾನಿಗಳು ಸಂಘವನ್ನು ಪೋಷಿಸುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ಸಂಘದ ಪದಾ ಧಿಕಾರಿಗಳು, ಸಮಿತಿ   ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿ ಸದಸ್ಯರ ಸಹಕಾರವೂ ಮುಖ್ಯವಾಗಿದ್ದು,  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಕಷ್ಟದ ಸಮಯದಲ್ಲಿ ನೆರವಾಗುವುದು ಸಂಘದ ಆದ್ಯ  ಕರ್ತವ್ಯವಾಗಿದೆ.

ಊರಿನಲ್ಲೂ  ಪುಣೆ ಬಂಟರ ಸಂಘದ  ಅಳಿಲ ಸೇವೆ :

ತುಳುವರು, ಕನ್ನಡಿಗರು ಉದರ ಪೋಷಣೆಗಾಗಿ ದೂರದ ಮರಾಠಿ ಮಣ್ಣಿನಲ್ಲಿ ನೆಲೆ ಕಂಡರೂ ಕೂಡ ತಾಯ್ನಾಡಿನ ಸೆಳೆತದಿಂದ ದೂರ ಉಳಿದಿಲ್ಲ. ಅದು ಲಾಕ್‌ಡೌನ್‌ ಸಂದರ್ಭದಲ್ಲಿ  ಇಲ್ಲಿನ ದಾನಿಗಳ ದೇಣಿಗೆಯನ್ನು  ಊರಿನಲ್ಲಿರುವ ಸಮಾಜ ಬಾಂಧವರಿಗೂ ನೆರವು ನೀಡಲು ಬಳಸಿಕೊಂಡಿತು. ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ಅವರು ಸೇರಿದಂತೆ ಸಂಘದ ಹಲವಾರು ಮಂದಿ ಊರಿನಲ್ಲಿಯೂ ಸಂಕಷ್ಟದಲ್ಲಿರುವ ಜನರ ಕಣ್ಣೀರೊರೆಸುವ  ಕಾರ್ಯವನ್ನು ಮಾಡಿದ್ದಾರೆ.

ದೂರವಾಣಿಯಲ್ಲಿ ಯೋಗಕ್ಷೇಮ ವಿಚಾರಣೆ   : ಸಮಾಜ ಬಾಂಧವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ ಬೆಟ್ಟು ಅವರು ಸ್ವತಃ ಸಂಘದ 3,000ಕ್ಕೂ ಹೆಚ್ಚು ಸದಸ್ಯರನ್ನು ಫೋನ್‌ ಮುಖಾಂತರ ನೇರವಾಗಿ ಸಂಪರ್ಕಿಸಿ ಅವರ ಯೋಗಕ್ಷೇಮವನ್ನು ವಿಚಾರಿಸುವುದರೊಂದಿಗೆ ಆರ್ಥಿಕ ಸಂಕಷ್ಟಕ್ಕೀಡಾದವರಿಗೆ ತ್ವರಿತ ನೆರವನ್ನು ನೀಡುವಲ್ಲೂ ಯಶಸ್ವಿಯಾಗಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ  ಜಾರಿಗೊಳಿಸಲಾದ ಲಾಕ್‌ಡೌನ್‌ನ ಪ್ರಾರಂಭದ ದಿನಗಳಲ್ಲಿ ನಾವು ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದೆವು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಜತೆಯಲ್ಲಿ  ವೈಯಕ್ತಿಕವಾಗಿ ಮಾಹಿತಿಯನ್ನು ನೀಡುತ್ತಿದ್ದೆವು. ಅನಂತರದ ಹಂತಗಳಲ್ಲಿ ನಗರದ ವಿವಿಧೆಡೆಗಳಲ್ಲಿ ನೆಲೆಸಿರುವ ಅಗತ್ಯವಿದ್ದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.  ಸುಮಾರು 1,000ಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ಕೇವಲ ನಮ್ಮವರಿಗೆ ಮಾತ್ರವಲ್ಲ ಅನ್ಯ ಸಮಾಜ ಬಾಂಧವರಿಗೂ ವಿತರಿಸುವ ಕಾರ್ಯವನ್ನು ಮಾಡಿದೆವು. ಆದ್ಯತೆಯ ಮೇರೆಗೆ ಎರಡನೆಯ ಹಂತದಲ್ಲಿಯೂ ಆಹಾರ ಕಿಟ್‌ಗಳನ್ನು ಹಂಚಿದ್ದೇವೆ. ಸಂಕಷ್ಟದ ಸಮಯದಲ್ಲಿ ಯಾರೂ ಆಹಾರವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಬಾರದು ಎನ್ನುವುದೇ ಸಂಘದ ಮುಖ್ಯ ಕಳಕಳಿಯಾಗಿತ್ತು. ಮುಖ್ಯವಾಗಿ “ಶಕುಂತಲಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಯೋಜನೆ’ಯ “ದಯಾಶಂಕರ್‌ ಶೆಟ್ಟಿ ಅನ್ನದಾತ ಯೋಜನೆ’ ಇಲ್ಲಿ ನಮಗೆ ಫಲ ನೀಡಿತು ಎನ್ನಬಹುದಾಗಿದೆ. ಅದೇ ರೀತಿ ಹೊಟೇಲ್‌ ಉದ್ಯಮದ ಬವಣೆಯ ಬಗ್ಗೆಯೂ ಹೊಟೇಲಿಗರೊಂದಿಗೆ ಸಂಘವು ಚರ್ಚಿಸಿದೆ. ಭವಿಷ್ಯದಲ್ಲಿಯೂ ಸಮಾಜ ಬಾಂಧವರೆಲ್ಲರ ಆಶೋತ್ತರದಂತೆ ಸಂಘವು ಕಾರ್ಯನಿರ್ವಹಿಸಲಿದೆ. ಕೊರೊನಾದಿಂದ ನಮ್ಮನ್ನು ನಾವೇ ರಕ್ಷಿಕೊಳ್ಳಲು ಅಗತ್ಯ ಎಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕಾಗಿದೆ. ಸಹಕರಿಸಿದ ದಾನಿಗಳಿಗೆ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರಿಗೆ ಕೃತಜ್ಞನಾಗಿದ್ದೇನೆ.. -ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ಅಧ್ಯಕ್ಷರು, ಬಂಟರ ಸಂಘ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next