ಪುಣೆ : ಪುಣೆಯಲ್ಲಿ ಶನಿವಾರ ರಾತ್ರಿ ನಗರದ ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರ ಮದ್ಯಪಾನ ಮಾಡಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ್ದಾರೆ. ಪೋರ್ಷೆಯಲ್ಲಿದ್ದ ಅಪ್ರಾಪ್ತ ವಯಸ್ಕ ಮತ್ತು ಇತರ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಪುಣೆಯ ಕೋರೆಗಾಂವ್ ಪಾರ್ಕ್ನಲ್ಲಿ ಈ ಘಟನೆ ನಡೆದಿದ್ದು, ಕಲ್ಯಾಣಿನಗರದ ಪಬ್ನಲ್ಲಿ ಪಾರ್ಟಿ ಮುಗಿಸಿ ಸ್ನೇಹಿತರು ಮನೆಗೆ ಮರಳುತ್ತಿದ್ದ ವೇಳೆ ಅವಘಡ ನಡೆದಿದೆ.
ಬಂಧನಕ್ಕೊಳಗಾದ 14 ಗಂಟೆಗಳೊಳಗೆ ಜಿಲ್ಲಾ ನ್ಯಾಯಾಲಯದಿಂದ ಅಪ್ರಾಪ್ತನಿಗೆ ಜಾಮೀನು ನೀಡಿದೆ. ಪೊಲೀಸರ ಪ್ರಕಾರ, ಬಾಲಾಪರಾಧಿ ಮಾಡಿದ ಅಪರಾಧವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸದ ಕಾರಣ ಜಾಮೀನು ನೀಡಲಾಗಿದೆ.
“ಅಪಘಾತ ಪ್ರಕರಣದಲ್ಲಿ, ಆರೋಪಿಯ ತಂದೆ ಮತ್ತು ಆರೋಪಿಗಳಾದ ಬಾಲಾಪರಾಧಿಗಳಿಗೆ ಮದ್ಯ ನೀಡಿದ ಬಾರ್ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 77 ರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಬ್ಬರನ್ನು ಕೆಡವಿದ ನಂತರ, ಕಾರು ರಸ್ತೆ ಬದಿಯ ತಡೆ ಗೋಡೆಗೆ ಢಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ಕಾರಿನಿಂದ ಹೊರ ಬರಲು ಯತ್ನಿಸಿದ ಚಾಲಕನಿಗೆ ಜನರ ಗುಂಪೊಂದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಫ್ಐಆರ್ ಪ್ರಕಾರ ಮೃತ ದಂಪತಿ ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂದು ಗುರುತಿಸಲಾಗಿದೆ.