ಪುಣೆ: ಮನುಷ್ಯ ಮನುಷ್ಯರ ನಡುವಿನ ಸುಮಧುರ ಸಂಬಂಧಗಳಿಗೆ ಇರುವ ಮಹತ್ವವನ್ನು ನಾವೆಲ್ಲರೂ ತಿಳಿದಿದ್ದೇವೆ. ಬೇರೆ ಬೇರೆ ಘಟ್ಟಗಳಲ್ಲಿ ಇತರರೊಂದಿಗೆ ಬೆರೆತಾಗ ನಮ್ಮ ಜೀವನ ಶೈಲಿ ಸುಧಾರಣೆಯಾಗಿ ಸ್ನೇಹ ಗಟ್ಟಿಯಾಗುತ್ತದೆ. ಯಾವುದೇ ಭಾಷೆ, ಧರ್ಮ, ಜಾತಿ, ಸಂಘಟನೆಗಳು ಇರಲಿ ಕೆಲವೊಮ್ಮೆ ಇಂತಹ ಸ್ನೇಹ ಬೆಸೆಯುವ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇದರಲ್ಲಿ ಕ್ರೀಡಾಕೂಟವು ಒಂದಾಗಿದೆ. ಪ್ರತಿಭೆಗಳು ಬೆಳಕಿಗೆ ಬರಲು ಅದಕ್ಕೆ ಸೂಕ್ತವಾದ ವೇದಿಕೆ ಕೂಡ ಸಿಗಬೇಕು. ಇಂತಹ ಕಾರ್ಯವನ್ನು ಸಂಘವು ಮಾಡುತ್ತಿದ್ದು, ಪ್ರತಿಭಾವಂತರಿಗೆ ನಮ್ಮವರ ಮುಂದೆ ಅಭಿಮಾನವು ದೊರೆಯುತ್ತದೆ. ಇದರಲ್ಲಿ ಕ್ರೀಡಾ ಕ್ಷೇತ್ರದಲ್ಲಿಯ ಸಾಧನೆ ವಿಶ್ವ ಮಟ್ಟದಲ್ಲೂ ಎತ್ತಿ ತೋರಬಹುದು. ಅಂತಹ ಛಲ ಸಾಧನೆಯನ್ನು ನಮ್ಮವರು ಮಾಡಿ ಸಮಾಜದಲ್ಲಿ ಅಭಿಮಾನ ಗೌರವದೊಂದಿಗೆ ಬದುಕಬೇಕು ಎಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ ಹೇಳಿದರು.
ಫೆ. 17 ರಂದು ನಗರದ ಸ್ವಾರ್ ಗೇಟ್ ಹತ್ತಿರದ ಮುಕುಂದ್ ನಗರದ ಚಂದ್ರ ಶೇಖರ್ ಅಗಸ್ಯೆ ಕಟಾರಿಯ ಕಾಲೇಜು ಮೈದಾನದಲ್ಲಿ ನಡೆದ ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ವಾರ್ಷಿಕ ಬೈದಶ್ರೀ ಕ್ರೀಡಾಕೂಟವನ್ನು ಸಂಘದ ಬಾವುಟ ಹಾರಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರವೆಂಬುದು ಒಂದು ಸ್ಪರ್ಧಾತ್ಮಕ ಕಣ. ಈ ಸ್ಪರ್ಧೆಯನ್ನು ಗೆಲ್ಲುವ ಪಣವನ್ನು ತೊಟ್ಟು ಯುವಕ ಯುವತಿಯರು ಭಾಗವಹಿಸಬೇಕು. ಇದಕ್ಕಾಗಿ ನಮ್ಮ ಸಮಾಜವು ಇಂತಹ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಇಂದು ಇಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಸಮಾಜ ಬಾಂಧವರು ಸೇರಿ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಶಿಸ್ತು ಬದ್ಧವಾಗಿ, ಯಾವುದೇ ಲೋಪ ಬಾರದಂತೆ ನಡೆಸಿಕೊಡುವಂತೆ ವಿನಂತಿಸಿದರು.
ಪುಣೆ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾದ ಸುಂದರ್ ಪೂಜಾರಿ ಅವರ ಸಭಾಧ್ಯಕ್ಷತೆಯಲ್ಲಿ ಜರಗಿದ ಈ ವೇದಿಕೆಯಲ್ಲಿ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಉಪಾಧ್ಯಕ್ಷ ಸಂದೇಶ್ ಪೂಜಾರಿ, ರವಿಜಾ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಶೇಖರ್ ಪೂಜಾರಿ, ಸದಾಶಿವ ಎಸ್. ಸಾಲ್ಯಾನ್, ಸದಾನಂದ ಪೂಜಾರಿ, ಕಾರ್ಯದರ್ಶಿ ಸದಾನಂದ ಬಂಗೇರ, ಕೋಶಾಧಿಕಾರಿ ಹರೀಶ್ ಪೂಜಾರಿ, ಕ್ರೀಡಾ ಕಾರ್ಯಾಧ್ಯಕ್ಷ ರಾಜೇಶ್ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಪೂಜಾರಿ ಉಪಸ್ಥಿತರಿದ್ದರು.
ಅಧ್ಯಕ್ಷ ವಿಶ್ವನಾಥ್ ಪೂಜಾರಿ ಮತ್ತು ಗಣ್ಯರು ಕೋಟಿ-ಚೆನ್ನಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಫೋಟೋಗೆ ದೀಪ ಬೆಳಗಿಸಿ ಪ್ರಾರ್ಥಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಸದಾನಂದ ಬಂಗೇರ ಸ್ವಾಗತಿಸಿದರು .ಕೋಶಾಧಿಕಾರಿ ಹರೀಶ್ ಪೂಜಾರಿ ಅವರು ಬೈದಶ್ರೀ ಕ್ರೀಡಾಕೂಟ ನಡೆದು ಬಂದ ಬಗ್ಗೆಯನ್ನು ಪ್ರಾಸ್ತಾವಿಕವಾಗಿ ವರದಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರಗಾಮಿಗಳ ಕುತಂತ್ರಕ್ಕೆ ಬಲಿಯಾದ ಭಾರತೀಯ ಸೇನೆಯ ಸೈನಿಕರಿಗೆ ವಿಶ್ವನಾಥ್ ಪೂಜಾರಿ ಅವರ ನುಡಿ ನಮನದೊಂದಿಗೆ ಎಲ್ಲರು ಸೇರಿ ಶ್ರ¨ªಾಂಜಲಿ ಸಲ್ಲಿಸಿದರು.
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ರಾಜೇಶ್ ಪೂಜಾರಿ, ವಾಲಿಬಾಲ್ ಪ್ರತಿಭೆ ಪ್ರಕಾಶ್ ಪೂಜಾರಿ ವಾಲಿಬಾಲ್, ಅಥ್ಲೆಟಿಕ್‌ಪಟು ದೀಪಿಕಾ ಪೂಜಾರಿ, ಕರಾಟೆಪಟು ಸುಜಿತ್ ಪೂಜಾರಿ, ವೇಟ್‌ಲಿಫ್ಟರ್ ನಿಶ್ಮಿತಾ ಪೂಜಾರಿ, ವೇದಿಕಾ ಪೂಜಾರಿ ಟೇಕ್ವಾಂಡೋ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಂಗಣಕ್ಕೆ ಪ್ರದಕ್ಷಿಣೆಗೈದು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಸಭಾ ವೇದಿಕೆಯಲ್ಲಿದ ಗಣ್ಯರನ್ನು ವಿಶ್ವನಾಥ್ ಪೂಜಾರಿ ಗೌರವಿಸಿದರು. ನಂತರ ಸಮಾಜ ಬಾಂಧವರ ವಯೋಮಿತಿಗೆ ಅನುಗುಣವಾಗಿ ಕ್ರೀಡಾ ಸ್ಪರ್ಧೆಗಳು ನಡೆದವು. ಸದಾನಂದ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸುದೀಪ್ ಪೂಜಾರಿ ಮುನಿಯಾಲ್ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ