ನವದೆಹಲಿ: ವನ್ಯಜೀವಿಗಳ ಕಾದಾಟ, ಪಕ್ಷಿಗಳ ಹಾರಾಟ…ಅವುಗಳ ಸೂಕ್ಷ್ಮ ಚಲನ-ವಲನದ ಚಿತ್ರವನ್ನು ಅಥವಾ ವಿಡಿಯೋವನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಅದಕ್ಕೊಂದು ಅಪವಾದ ಎಂಬಂತೆ ಪುಣೆ ಮೂಲದ ವನ್ಯಜೀವಿ ಛಾಯಾಗ್ರಾಹಕ ವೇದಾಂತ್ ಹಾಗೂ ಎಡಿತ್ ಬಾರ್ಸ್ಚಿ ಎಂಬವರು ಲಡಾಖ್ ನಲ್ಲಿ ಹಿಮ ಚಿರತೆ “ಬೇಟೆಯಾಡುವ” ರೋಚಕ ಕ್ಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಇದನ್ನೂ ಓದಿ:ನಕಲಿ ವೈದ್ಯನಿಂದ ಸರ್ಜರಿ…ಕೊನೆಯುಸಿರೆಳೆದ ಎರಡೂವರೆ ವರ್ಷದ ಮಗು; FIR ದಾಖಲು
ಹಿಮಚಿರತೆ ಕಾಣಸಿಗುವುದು ಕೂಡಾ ಅತ್ಯಪರೂಪ, ಅದರಲ್ಲೂ ಪ್ರಾಣಿಯನ್ನು ಬೆನ್ನಟ್ಟಿಕೊಂಡು ಹೋಗಿ ಕೊಲ್ಲುವ ದೃಶ್ಯವನ್ನು ಸೆರೆಹಿಡಿಯುವುದು ತುಂಬಾ ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಹಿಮಚಿರತೆ ಕಾಡು ಕುರಿಯನ್ನು ಬೆನ್ನಟ್ಟಿ ಅಟ್ಟಾಡಿಸಿಕೊಂಡು ಓಡುತ್ತಿರುವ ದೃಶ್ಯವನ್ನು ಸೆರೆಹಿಡಿದಿರುವ ಅವರ ಶ್ರಮ ಮತ್ತು ಕೌಶಲ್ಯ ಈ ವಿಡಿಯೋದಲ್ಲಿ ದಾಖಲಾಗಿದೆ.
ವೇದಾಂತ್ ಅವರು ವಿಡಿಯೋವನ್ನು ಇನ್ಸ್ ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಹಿಮಚಿರತೆ ಕಾಡು ಕುರಿಯನ್ನು ಅಟ್ಟಾಡಿಸಿ ಹಿಡಿಯುತ್ತಿರುವ ದೃಶ್ಯದ ಕೊನೆಯ ಭಾಗವನ್ನು ನಮ್ಮ ಅತಿಥಿ ಎಡಿತ್ ಬಾರ್ಸ್ಚಿ ಅವರು ತಮ್ಮ ಫೋನ್ ನಲ್ಲಿ ಅದ್ಭುತವಾಗಿ ಸೆರೆ ಹಿಡಿದಿರುವುದಾಗಿ ಉಲ್ಲೇಖಿಸಿದ್ದಾರೆ.
ವೇದಾಂತ್ ಥೈಟೆ ಅವರು ಪುಣೆಯ ಮೂಲದವರಾಗಿದ್ದು, ಪುಣೆ ಹೊರವಲಯ ಮತ್ತು ಬೆಟ್ಟಗಳಲ್ಲಿ ಇರುವ ಪ್ರಾಣಿಗಳ ಛಾಯಾಚಿತ್ರ ತೆಗೆಯುವಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಬಹುಮುಖಿ ನಿಸರ್ಗವಾದಿಯಾಗಿದ್ದಾರೆ. ಪರಿಸರ ಸಂರಕ್ಷಣೆ, ಸಂಶೋಧನೆ, ವನ್ಯಜೀವಿ ಪುನರ್ವಸತಿ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ 14 ವರ್ಷಗಳ ವೃತ್ತಿ ಜೀವನದ ವಿಶಿಷ್ಟ ಅನುಭವ ಇವರದ್ದಾಗಿದೆ.