Advertisement

ಪಂಕ್ಚರ್‌ ಹಾಕಿದ ಮಹಾನುಭಾವ…

06:24 PM Mar 09, 2020 | Sriram |

ಯಾರು ಯಾವ ಸಮಯದಲ್ಲಿ ನೆರವಾಗುತ್ತಾರೆ ಅಂತ ತಿಳಿಯುವುದು ತುಂಬಾ ಕಷ್ಟ. ಬದುಕಲ್ಲಿ ಎಲ್ಲರನ್ನೂ ಪ್ರೀತಿಸುತ್ತಲೇ ಇರಬೇಕು. ಕಷ್ಟದ ಸಂದರ್ಭದಲ್ಲಿ ಯಾರಾದರೂ ನಮ್ಮ ನೆರವಿಗೆ ಬರುತ್ತಾರೆ ಅನ್ನೋದನ್ನು ನನ್ನ ಬದುಕಿನಲ್ಲಿ ನಡೆದ ಈ ಘಟನೆ ತಿಳಿಸಿಕೊಟ್ಟಿತು.

Advertisement

2007ನೇ ಇಸ್ವಿ ಅನಿಸುತ್ತದೆ. ನಮ್ಮೂರು ತರೀಕೆರೆ. ಒಂದು ರಾತ್ರಿ ನಾನು ಮತ್ತು ನನ್ನ ತಂದೆ ಬೈಕ್‌ನಲ್ಲಿ ಹೋಗುತ್ತಿದ್ದೆವು. ಡಿಸೆಂಬರ್‌ ತಿಂಗಳು ಅಂದರೆ ಕೇಳಬೇಕೆ. ಚಳಿಯೋ ಚಳಿ. ನಾವು ರಾತ್ರಿ ಪ್ರಯಾಣಕ್ಕೆ ಹೊಟ್ಟಿದ್ದರ ಕಾರಣ, ಮಾರನೆ ದಿನವೇ ನನ್ನ ಅಕ್ಕನ ಮದುವೆ. ಹೀಗಾಗಿ, ಹಣ ಅವಶ್ಯಕತೆ ಇತ್ತು. ಇದ್ದ ಹಣ ಖರ್ಚಾಗಿತ್ತು. ದುಡ್ಡು ಹೊಂದಿಸಲು ನಮ್ಮ ಊರಾದ ಹಲಸೂರಿನ ಕಡೆ ಹೊರಟೆವು. ಸರಿಸುಮಾರ್‌ ಮಧ್ಯೆ ರಾತ್ರಿ 1 ಗಂಟೆಯಾಗಿತ್ತು. ಇದ್ದಕ್ಕಿದ್ದಂತೆ ನಮ್ಮ ಬೈಕ್‌ ಪಂಕ್ಚರ್‌ ಆಗಿಬಿಡೋದಾ! ನಡು ರಾತ್ರಿಯಲ್ಲಿ ಇಡೀ ಊರೇ ಮಲಗಿದೆ. ಎದ್ದಿದ್ದು ನಾನು ಮತ್ತು ನಮ್ಮ ತಂದೆ ಮಾತ್ರ. ದೂರದಲ್ಲಿ ಎಲ್ಲೋ ನಾಯಿಗಳ ಕೂಗು. ಅದರಿಂದ ಭಯ, ಗಾಬರಿ ಒಟ್ಟೊಟ್ಟಿಗೆ ಶುರುವಾಗತೊಡಗಿತು. ಹದಿನೈದು ನಿಮಿಷ ಕಳೆಯಿತು. ಎದೆಯೊಳಗಿನ ಭಯ ಮತ್ತಷ್ಟು ಹೆಚ್ಚಾಯಿತೇ ವಿನಃ ನಮ್ಮ ಸಮಸ್ಯೆಗೆ ಪರಿಹಾರವೇನು ದೊರಕಲಿಲ್ಲ. ಏನು ಮಾಡೋದಪ್ಪಾ ದೇವರೇ ಅಂತ ನೆನಪಿಸಿಕೊಳ್ಳುವ ಹೊತ್ತಿಗೆ ದೇವರಂತೆಯೇ, ನಮ್ಮ ಬೈಕ್‌ ಕೆಟ್ಟು ನಿಂತಿದ್ದ ಎದರು ಮನೆಯಿಂದ ಬಾಗಿಲ ಸದ್ದಾಯಿತು. ಮೆಲ್ಲಗೆ ವಯಸ್ಸಾದ ತಾತ ಬಂದು ನಿಂತರು. ಅವರಿಗೆ ನಮ್ಮನ್ನು ನೋಡುತ್ತಿದ್ದಂತೆಯೇ ಎಲ್ಲವೂ ಅರ್ಥವಾದಂತೆ ಕಂಡಿತು.

“ಏನು, ಪಂಕ್ಚರಾ ಆಗಿದೆಯಾ? ‘ ಅಂದರು. ಹೌದು ಎನ್ನುವಂತೆ ನಮ್ಮ ತಂದೆ ತಲೆ ಆಡಿಸಿದರು. ತಾತ ನೋಡಲು ಶ್ರೀಮಂತರಂತೆ ಕಾಣುತ್ತಿದ್ದರು. ಮತ್ತೆ ಒಳಗೆ ಹೋಗಿ, ಪಂಕ್ಚರ್‌ ಹಾಕುವ ಪರಿಕರಗಳನ್ನು ತಂದರು. ಆದರೆ, ನಮ್ಮಿಬ್ಬರಿಗೂ ಪಂಕ್ಚರ್‌ ಹಾಕಲು ಬರುತ್ತಿರಲಿಲ್ಲವಾದ್ದರಿಂದ ಅದನ್ನು ಅವರಿಗೆ ಹೇಳಲು ಹಿಂಜರಿಕೆ ಆಯಿತು.

ಕೊನೆಗೆ, ಆ ವ್ಯಕ್ತಿಯೇ ಬಂದು, ಟೈರು, ಟ್ಯೂಬನ್ನು ಬಿಚ್ಚಿ. ತಾವೇ ಪಂಕ್ಚರ್‌ ಹಾಕಿಕೊಟ್ಟರು. ಅಷ್ಟೊತ್ತಿಗೆ ಮಧ್ಯರಾತ್ರಿ 2 ಗಂಟೆ ದಾಟಿತ್ತು. ಆ ಹಿರಿಯ ವ್ಯಕ್ತಿ, ತಮ್ಮ ನಿದ್ದೆಯನ್ನು ಬಿಟ್ಟು, ನಮಗೋಸ್ಕರ ಎದ್ದು ಬಂದು ಸಹಾಯ ಮಾಡದೇ ಇದ್ದಿದ್ದರೆ ಮಾರನೆ ದಿನದ ಮದುವೆಯಲ್ಲಿ ಯಡವಟ್ಟು ಆಗುತ್ತಿತ್ತು.

ಅವರ ಹೆಸರು ನೆನಪಿಲ್ಲ. ಅವರ ಮೂರು ನಿಮಿಷದ ನೆರವು ಮರೆಯುವಂತಿಲ್ಲ. ಅವರು ಎಲ್ಲೇ ಇದ್ದರು, ಹೇಗೆ ಇದ್ದರು ಚೆನ್ನಾಗಿರಲಿ ಅನ್ನೋದೇ ನನ್ನ ಹಾರೈಕೆ.

Advertisement

-ರಸುಮಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next