ಪುಂಜಾಲಕಟ್ಟೆ : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಕರಿಯ ಮೂಲ್ಯ ಅವರ ಮನೆಯಿಂದ ಸುಮಾರು 2.5 ಲಕ್ಷ ರೂ. ಮೌಲ್ಯದ 9 ಪವನ್ ಚಿನ್ನವನ್ನು ಕಳವು ಮಾಡಲಾಗಿದೆ. ಕರಿಯ ಮೂಲ್ಯ ಅವರ ಮಗಳು ಶ್ವೇತಾ ಅವರ ಮದುವೆ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಕಾರಣ ಕಿವಿಯೋಲೆ, ಸರ ಸೇರಿದಂತೆ ಇನ್ನೂ ಕೆಲವು ಚಿನ್ನಾಭರಣಗಳನ್ನು ಮನೆಯ ಕಪಾಟಿನಲ್ಲಿ ಇರಿಸಿದ್ದರು.
ಮೇ 22ರಂದು ಬೆಳಗ್ಗೆ 9 ಗಂಟೆ ವೇಳೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಮರುದಿನ ಸಂಜೆ ಬಂದಾಗ ಮುಂಬಾಗಿಲು ಮುರಿದ ಸ್ಥಿತಿಯಲ್ಲಿದ್ದು, ಮನೆಯೊಳಗೆ ಕಪಾಟಿನ ಬೀಗ ಮುರಿದು ಚಿನ್ನ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಘಟನ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಟಿ. ಡಿ. ನಾಗರಾಜ್, ಎಸ್‌ಐ ಹರೀಶ್ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದಾರೆ.
ಈ ಪರಿಸರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳ್ಳರ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬಜಪೆ : ಮಸ್ಕತ್‌ಗೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ, ದರೋಡೆ ; ಆರೋಪಿಗಳ ಬಂಧನ