Advertisement

ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ: 725 ಕೋ.ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಆರಂಭ

11:57 PM Jan 29, 2023 | Team Udayavani |

ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬಿಸಿ ರೋಡಿನಿಂದ ಪೂಂಜಾಲಕಟ್ಟೆವರೆಗೆ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇದೀಗ ಬಹು ನಿರೀಕ್ಷಿತ 725 ಕೋ.ರೂ. ವೆಚ್ಚದ ದ್ವಿತೀಯ ಹಂತದಲ್ಲಿ ಪೂಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಕಾಮಗಾರಿಯು ಆರಂಭಗೊಂಡಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಬೆಂಗಳೂರಿನಲ್ಲಿ ರಾಜ್ಯದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ವೇಳೆ ಚಾರ್ಮಾಡಿ-ಪೂಂಜಾಲಕಟ್ಟೆ ರಸ್ತೆಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಮಡಂತ್ಯಾರು ಹಾಗೂ ಮಾಲಾಡಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ರಾ. ಹೆ. 40ರಿಂದ 75 ಕಿ.ಮೀ. ವರೆಗಿನ ಒಟ್ಟು 35 ಕಿ.ಮೀ. ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಹೊಂದಲಿದೆ.

ನಾಗಪುರದ ಡಿ.ಬಿ.ಜೈನ್‌ ಕಂಪೆನಿಗೆ ಗುತ್ತಿಗೆ
ನಾಗಪುರದ ಡಿ.ಬಿ.ಜೈನ್‌ ಗುತ್ತಿಗೆ ವಹಿಸಿಕೊಂಡಿದ್ದು, ಈಗಾಗಲೆ ನಾಲ್ಕು ಹಂತಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದ್ದರಿಂದ ಆಯ್ದ ಸರಕಾರಿ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. 725 ಕೋ.ರೂ. ಅನುದಾನದಡಿ ರಸ್ತೆ ಅಭಿವೃದ್ಧಿಗೆ 385 ಕೋ.ರೂ. ಹಾಗೂ ಭೂ ಸ್ವಾಧೀನ ಸಹಿತ ಇತರ ಪ್ರಕ್ರಿಯೆಗೆ 340 ಕೋ.ರೂ. ಮೀಸಲಿಡಲಾಗಿದೆ. ಒಟ್ಟು ರಸ್ತೆ ಪೂರ್ಣಗೊಂಡಾಗ 33.1 ಕಿಮೀ.ಗೆ ಸೀಮಿತಗೊಳ್ಳಲಿದೆ.

ರಸ್ತೆ ಸಾಗುವ ವ್ಯಾಪ್ತಿ
ಪೂಂಜಾಲಕಟ್ಟೆಯಿಂದ-ಚಾಮಾಡಿ ಘಾಟಿ ಆರಂಭವಾಗುವ ವರೆಗಿನ 33.1 ಕಿ.ಮೀ. ರಸ್ತೆಯು 10 ಮೀಟರ್‌ ಅಗಲದ ಡಾಮರೀಕರಣಗೊಂಡ ದ್ವಿಪಥ ರಸ್ತೆಯಾಗಿದೆ. ಸೆಂಟ್ರಲ್‌ ಮಾರ್ಕ್‌ನಿಂದ ಎರಡು ಬದಿ ತಲಾ 10 ಮೀಟರ್‌ನಂತೆ ಒಟ್ಟು 20 ಮೀಟರ್‌ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 2 ಬದಿ 1 ಮೀಟರ್‌ನ ಶೋಲ್ಡರ್‌ ಹಾಗೂ ಅಗತ್ಯವಿದ್ದಲ್ಲಿ ಸಿಸಿ ಚರಂಡಿಗಳು ಒಳಗೊಳ್ಳಲಿವೆ.

ಗುರುವಾಯನಕೆರೆ-ಉಜಿರೆ ಸರ್ವೀಸ್‌ ರಸ್ತೆ
ಗುರುವಾಯನಕೆರೆ ಬೆಳ್ತಂಗಡಿ, ಲಾೖಲದಿಂದ ಉಜಿರೆ ಪೇಟೆ ತಲುಪುವರೆಗೆ ಹೆದ್ದಾರಿ ಜತೆಗೆ ವಾಹನ ಸಂಚಾರ ಒತ್ತಡ ಹೆಚ್ಚಿರುವುದರಿಂದ ಹೆದ್ದಾರಿಯ ಎರಡು ಬದಿಗಳಲ್ಲೂ ತಲಾ 7 ಮೀಟರ್‌ಗಳ ಸರ್ವೀಸ್‌ ರಸ್ತೆ ನಿರ್ಮಾಣವಾಗಲಿದೆ. ಸಿಟಿ ಪ್ರದೇಶಗಳಲ್ಲಿ ಸಾಕಷ್ಟು ಒಳರಸ್ತೆಗಳಿರುವುದರಿಂದ ಹೆದ್ದಾರಿ ವಾಹನಗಳು ನೇರವಾಗಿ ಹೆದ್ದಾರಿಗೆ ಸಂಪರ್ಕಿಸಿ ಅಪಘಾತ ಸಂಭವಿಸುವ ದೃಷ್ಟಿಯಿಂದ ಹೆದ್ದಾರಿ ಇಲಾಖೆಯು ಸಿಟಿ ಪ್ರದೇಶದಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಲಿದೆ. ಬೆಳ್ತಂಗಡಿಯಲ್ಲಿ ನೂತನ ಸೇತುವೆ ಸಹಿತ ಒಟ್ಟು 7 ಕಿರು ಸೇತುವೆಗಳು ನಿರ್ಮಾಣವಾಗಲಿವೆ. 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವುದಾಗಿ ಕಾಮಗಾರಿ ನಿರ್ವಹಣೆ ಅಧಿಕಾರಿ ರಾ. ಹೆ. ಕೊಡಗು-ಮಂಗಳೂರು ಜಿಲ್ಲೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಪ್ರಸಾದ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next