Advertisement

ಪುಂಜಾಲಕಟ್ಟೆ: ಇಸ್ಪೀಟ್‌ ಚಟ ಜೈಲು ಸೇರಿಸಿತು

12:40 AM Apr 24, 2019 | sudhir |

ಪುಂಜಾಲಕಟ್ಟೆ: ತಾನು ಮಾಡಿದ ಸಾಲ ತೀರಿಸಲು ತನ್ನ ಮನೆಯಿಂದಲೇ ಕದ್ದು, ಕಳವು ನಡೆದಿದೆ ಎಂದು ದೂರು ನೀಡಿದ ವ್ಯಕ್ತಿಯೋರ್ವ ಪೊಲೀಸ್‌ ಅತಿಥಿಯಾದ ಅಪರೂಪದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಗಂಪದಡ್ಡದಲ್ಲಿ ನಡೆದಿದೆ.

Advertisement

ಇಲ್ಲಿನ ಯೂಸುಬ್‌ ಬ್ಯಾರಿ ಅವರ ಮನೆಯಲ್ಲಿ ಎ.19ರಂದು ಕಳ್ಳತನ ನಡೆದಿದೆ ಎಂದು ಅವರ ಪುತ್ರ ಸಾದಿಕ್‌ (30) ಪೊಲೀಸರಿಗೆ ದೂರು ನೀಡಿದ್ದ. ಅನುಮಾನದಿಂದ ಪೊಲೀಸರು ಆತನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ತಾನೇ ಕದ್ದಿರುವುದಾಗಿ ಒಪ್ಪಿಕೊಂಡ. ಬಳಿಕ ಆತನನ್ನು ಬಂಧಿಸಲಾಗಿದ್ದು, ಕಳವಾಗಿದ್ದ 62 ಗ್ರಾಂ ತೂಕದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ವಿವರ
ಎ.19ರಂದು ಸಾದಿಕ್‌ನ ಮನೆಯವರು ಹಾಗೂ ಸಂಬಂಧಿಕರಾದ ನೆರೆಮನೆಯವರು ವಿವಾಹ ಕಾರ್ಯ ನಿಮಿತ್ತ ಹೊರಗಡೆ ತೆರಳಿದ್ದರು. ಸಂಜೆ ಹಿಂದಿರುಗಿದಾಗ ಮನೆಯಿಂದ ಕಳವಾಗಿದ್ದುದು ತಿಳಿದು ಬಂತು. ಕಬ್ಬಿಣದ ಬೀರುವನ್ನು ಒಡೆದು ಒಳಗಿದ್ದ ಚಿನ್ನದ ಒಡವೆಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಸಾದಿಕ್‌ ದೂರು ನೀಡಿದ್ದ.

ಪ್ರಕರಣದ ತನಿಖೆ ನಡೆಸಿದ ದ.ಕ. ಎಸ್‌ಪಿ ಲಕ್ಷ್ಮೀ ಪ್ರಸಾದ್‌, ಅಡಿಷನಲ್‌ ಎಸ್‌ಪಿ ವಿಕ್ರಮ್‌ ಅಮಟೆ ಮತ್ತು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಸೈದುಲ್‌ ಅದಾವತ್‌ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ಕುಮಾರ್‌ ಮತ್ತು ಪುಂಜಾಲಕಟ್ಟೆ ಎಸ್‌ಐ ಕೆ.ಆರ್‌. ಸುನೀತಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ಇಸ್ಪೀಟ್‌ ಕಾರಣ
ಆರೋಪಿ ಸಾದಿಕ್‌ ಇಸ್ಪೀಟ್‌ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಮನೆಯಿಂದಲೇ ಕದ್ದು ನಾಟಕವಾಡುವ ಆಲೋಚನೆ ಹೊಳೆದಿತ್ತು. ಆಗ ಅದು ಆತನಿಗೆ ತಿರುಗುಬಾಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next