ಇಂದೋರ್: ಗ್ಲೆನ್ ಮ್ಯಾಕ್ಸ್‌ಬೆಲ್ ನಾಯಕತ್ವದಲ್ಲಿ “ನ್ಯೂ ಲುಕ್’ ಪಡೆದು ಕಣಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಆರಂಭಿಕ ಪಂದ್ಯದಲ್ಲೇ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ಗೆ ಸೋಲಿನ ಪಂಚ್ ಕೊಟ್ಟಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ.
ಇಲ್ಲಿನ “ಹೋಳ್ಕರ್ ಸ್ಟೇಡಿಯಂ’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ 6 ವಿಕೆಟಿಗೆ 163 ರನ್ ಗಳಿಸಿದರೆ, ಪಂಜಾಬ್ 19 ಓವರ್‌ಗಳಲ್ಲಿ 4 ವಿಕೆಟಿಗೆ 164 ರನ್ ಬಾರಿಸಿ ಗೆದ್ದು ಬಂದಿತು. ಇದರೊಂದಿಗೆ ಪುಣೆ ಮೊದಲು ಬ್ಯಾಟಿಂಗ್ ಮಾಡಿದಾಗಲೆಲ್ಲ ಸೋಲನ್ನೇ ಅನುಭವಿಸಿದಂತಾಯಿತು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ಗಳ ಸೋಲುಣಿಸಿದ ಖುಷಿಯಲ್ಲಿ ಸ್ಮಿತ್ ಪಡೆ ಆಡಲಿಳಿದಿತ್ತು.
ಪಂಜಾಬ್ 12ನೇ ಓವರಿನಲ್ಲಿ 85 ರನ್ನಿಗೆ 4 ವಿಕೆಟ್ ಉರುಳಿಸಿಕೊಂಡಾಗ ಆತಂಕಕ್ಕೆ ಸಿಲುಕಿತ್ತು. ಆಗ ಹಾಶಿಮ್ ಆಮ್ಲ (28) ಮತ್ತು ಅಕ್ಷರ್ ಪಟೇಲ್ (24) ಎರಡೇ ರನ್ ಅಂತರದಲ್ಲಿ ಪೆವಿಲಿಯನ್ ಸೇರಿದ್ದರು. ಆದರೆ 5ನೇ ವಿಕೆಟಿಗೆ ಜತೆಗೂಡಿದ ಹಾರ್ಡ್ ಹಿಟ್ಟರ್‌ಗಳಾದ ಮ್ಯಾಕ್ಸ್‌ವೆಲ್-ಮಿಲ್ಲರ್ 7.5 ಓವರ್‌ಗಳಿಂದ 79 ರನ್ ಸೂರೆಗೈದು ತಂಡದ ಗೆಲುವನ್ನು ಸಾರಿದರು.
ಮ್ಯಾಕ್ಸ್‌ವೆಲ್ ಕೇವಲ 20 ಎಸೆತಗಳಿಂದ 44 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ 4 ಪ್ರಚಂಡ ಸಿಕ್ಸರ್, 2 ಬೌಂಡರಿಗಳಿಂದ ಸಿಂಗಾರಗೊಂಡಿತ್ತು. ಮಿಲ್ಲರ್ 27 ಎಸೆತಗಳಿಂದ 30 ರನ್ ಬಾರಿಸಿದರು (2 ಸಿಕ್ಸರ್, 1 ಬೌಂಡರಿ). ವೋಹ್ರಾ 14, ಸಾಹಾ 13 ರನ್ ಮಾಡಿ ನಿರ್ಗಮಿಸಿದರು.
ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಪುಣೆಯ ಯಶಸ್ವಿ ಬೌಲರ್. ಅವರು 29 ರನ್ನಿಗೆ 2 ವಿಕೆಟ್ ಕಿತ್ತರು.