Advertisement

ಪುನರ್ವಸು ಮಳೆ ತಂದಿಟ್ಟ ಅವಾಂತರ

08:14 PM Jul 19, 2021 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಎಲ್ಲೆಡೆಯೂ ಅವಾಂತರವನ್ನೇ ಸೃಷ್ಟಿ ಮಾಡಿದೆ. ಅದರಲ್ಲೂ ಪುನರ್ವಸು ಮಳೆಯ ಆರ್ಭಟದಿಂದಾಗಿ ತಾಲೂಕಿನ ಡೊಂಬರಹಳ್ಳಿ ಸೇತುವೆ ರಭಸದ ನೀರಿಗೆ ಕೊಚ್ಚಿ ಹೋಗಿದೆ.

Advertisement

ಮುದ್ದಾಬಳ್ಳಿಯಲ್ಲಿ ಕಾರ್ಮಿಕರ ಕಿಟ್‌ಗಳು ನೀರಲ್ಲಿ ನೆನೆದಿವೆ. ಹೊಲ,ಗದ್ದೆ ಸೇರಿ ಮನೆಗಳಿಗೂ ನೀರು ನುಗ್ಗಿ ಸಂಕಷ್ಟ ತಂದಿಟ್ಟಿದೆ. ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಲೆನಾಡಿನಂತ ಸ್ಥಿತಿ ನಿರ್ಮಾಣವಾಗಿದ್ದು ತಂಪಾದ ಶೀತಗಾಳಿ ಜನರಲ್ಲಿ ನಡುಕ ತರಿಸಿದೆ. ಪ್ರತಿ ನಿತ್ಯವೂ ಮಳೆಯು ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಮನೆ ಸೇರಿ ಇತರೆ ಪ್ರದೇಶಗಳಿಗೆ ಹಾನಿಯನ್ನುಂಟು ಮಾಡಿದೆ. ಅದರಲ್ಲೂ ಶನಿವಾರದಿಂದ ನಿರಂತರ ಸುರಿಯುತ್ತಿರುವ ಪುನರ್ವಸು ಮಳೆಯ ಆರ್ಭಟವು ಅಷ್ಟಿಸ್ಟಲ್ಲ. ಮಳೆ ಸುರಿಯುತ್ತಿರುವುದರಿಂದ ಹಿರೇಹಳ್ಳಕ್ಕೆ ವಿವಿಧ ಭಾಗದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಆ ನೀರು ನೇರ ಹಿರೇ ಸಿಂಧೋಗಿ ಮಾರ್ಗವಾಗಿ ತುಂಗಭದ್ರಾ ಜಲಾಶಯ ಸೇರುತ್ತಿದೆ.

ಈ ಹಿಂದೆ ಈ ಹಿರೇಹಳ್ಳಕ್ಕೆ ವಿವಿಧ ಭಾಗದಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ತಾಲೂಕಿನ ಡೊಂಬರಳ್ಳಿ-ಗೊಂಡಬಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆಯು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕಳೆದ ವರ್ಷವೂ ಸೇತುವೆ ಎರಡೂ ಭಾಗದಲ್ಲಿ ನೀರಿನ ಕೊರಕಲು ಕಾಣಿಸಿಕೊಂಡು ಸೇತುವೆಗೆ ಹಾನಿವುಂಟು ಮಾಡಿತ್ತು. ಆದರೂ ಸಣ್ಣ ನೀರಾವರಿ ಇಲಾಖೆ ಅ ಧಿಕಾರಿಗಳು ಇತ್ತ ಗಮನಿಸಿರಲಿಲ್ಲ. ನಿರಂತರ ಮಳೆ ಆರ್ಭಟದಿಂದ ಸೇತುವೆ ಕೊಚ್ಚಿ ಹೋಗಿದ್ದು, ಈ ಸೇತುವೆಯನ್ನು ಗುಣಮಟ್ಟವಾಗಿ ಮಾಡಿಲ್ಲ. ಕಳಪೆ ಮಾಡಿದ್ದರಿಂದಲೇ ಅದು ವರ್ಷದಲ್ಲಿಯೇ ಕಿತ್ತು ಹೋಗಿದೆ ಎಂದು ಆರೋಪಿಸಿರುವ ಸ್ಥಳೀಯರು ಕೂಡಲೇ ಈ ಸೇತುವೆ ಪುನರ್‌ ನಿರ್ಮಾಣ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಧಾನ್ಯದ ಕಿಟ್‌ಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಆದರೆ ಮಳೆಯ ನೀರು ಶಾಲೆಗಳ ಕೊಠಡಿಗಳಿಗೆ ನುಗ್ಗಿದ ಪರಿಣಾಮ ಕಿಟ್‌ ಗಳೆಲ್ಲವೂ ನೀರಿನಲ್ಲಿ ನೆನೆದು ಎಲ್ಲ ಹಾಳಾಗಿವೆ. ಇತ್ತ ಕಾರ್ಮಿಕರಿಗೂ ತಲುಪಿಲ್ಲ. ಸರ್ಕಾರದ ಸೌಲಭ್ಯವು ನೀರಲ್ಲಿ ಹೋಮ ಮಾಡಿದಂತಾಗಿದೆ. ಇದಲ್ಲದೇ ತಾಲೂಕಿನ ಹಿರೇ ಸಿಂಧೋಗಿಯ ರಸ್ತೆಯು ಮಳೆಯ ನೀರಿನಿಂದಾಗಿ ಹಾನಿಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ಕಿತ್ತು ಬೀಳುವ ಸಾಧ್ಯತೆಯಿದೆ.

ಈ ಭಯದಲ್ಲಿಯೇ ಜನರು ಸಂಚಾರ ಮಾಡುವಂತಹ ಸ್ಥಿತಿ ಎದುರಾಗಿದೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚಾರ ಮಾಡಬೇಕಾದ ಸ್ಥಿತಿ ಬಂದಿದೆ. ಇನ್ನು ಮಳೆಯು ಹೊಲ ಗದ್ದೆಗಳಲ್ಲೂ ದೊಡ್ಡ ಅವಾಂತರ ತಂದಿದೆ. ಬಿತ್ತನೆ ಮಾಡಿದ ಬೆಳೆಯು ನೀರಿನಲ್ಲಿ ನೆನೆದು ಹಳದಿ ಬಣ್ಣಕ್ಕೆ ತಿರುತ್ತಿದೆ. ಇದರಿಂದ ರೈತರು ಚಿಂತೆಗೀಡಾಗುವಂತೆ ಮಾಡಿದೆ. ಒಟ್ಟಿನಲ್ಲಿ ಪುನರ್ವಸು ಮಳೆಯು ಕೊನೆಯ ಪಾದವು ಆರ್ಭಟಿಸಿ ಹೋಗುವ ಮುನ್ನ ದೊಡ್ಡ ಅವಾಂತರವನ್ನೆ ಸೃಷ್ಟಿ ಮಾಡಿದೆ. ಮಳೆಯಾರ್ಭಟದ ಬಗ್ಗೆ ಹಾನಿಯಾದ ಸ್ಥಳಕ್ಕೆ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಜೊತೆಗೆ ಹಾನಿ ಸ್ಥಳ ಪುನಃ ನಿರ್ಮಾಣ ಮಾಡಿಕೊಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next