ಗದಗ: ಹೆಚ್ಚು ಕಡಿಮೆ ಒಂದು ವಾರದಿಂದ ಜಿಲ್ಲೆಯಲ್ಲಿ ಮಾಯವಾಗಿದ್ದ ಮಳೆ ರವಿವಾರ ಇಡೀ ದಿನ ಮಳೆ ಸುರಿಯುತು.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹದವಾದ ಮಳೆಯಾಗಿದ್ದು, ರೈತಾಪಿ ಜನರಲ್ಲಿ ಹರ್ಷ ಮೂಡಿಸಿದೆ.
ಈ ಬಾರಿ ಮುಂಗಾರು ಆರಂಭವಾಗಿ ರವಿವಾರಕ್ಕೆ ಬರೋಬ್ಬರಿ ಒಂದು ತಿಂಗಳು ಕಳೆದಿದ್ದು, ಈ ನಡುವೆ ಎರಡೇ ಎರಡು ದೊಡ್ಡ ಮಳೆಯಾಗಿವೆ. ಇನ್ನುಳಿದಂತೆ ಆಗೊಮ್ಮೆ- ಈಗೊಮ್ಮೆ ಅಲ್ಪಸ್ವಲ್ಪ ತುಂತುರು ಮಳೆಯಾಗಿದೆ. ಆರಿದ್ರ ಮುಗಿದು ಪುನರ್ವಸು(ಜು.6) ಪ್ರವೇಶಿಸಿದ ಮರುದಿನವೇ ಜಿಲ್ಲೆಯ ವಿವಿಧೆಡೆ ಹದವಾದ ಮಳೆಯಾಗಿದ್ದು, ಈ ಬಾರಿ ಮುಂಗಾರು ಕೈಹಿಡಿಯುವ ನಿರೀಕ್ಷೆಗಳು ಹೆಚ್ಚಿಸಿದೆ ಎನ್ನುತ್ತಾರೆ ರೈತಾಪಿ ಜನರು.
ಅವಳಿ ನಗರದಲ್ಲಿ ಉತ್ತಮ ಮಳೆ: ಗದಗ-ಬೆಟಗೇರಿ ಸೇರಿದಂತೆ ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿಯಿತು. ನಗರದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವಣ ಆವರಿಸಿತ್ತು. ಬೆಳಗ್ಗೆ 11:00ರ ವೇಳೆಗೆ ಅಲ್ಲಲ್ಲಿ ತುಂತುರು ಮಳೆ ಆರಂಭಗೊಂಡು ಮಧ್ಯಾಹ್ನದ ಬಳಿಕ ಬಿರುಸಿನ ಮಳೆ ಸುರಿಯಿತು. ಈ ನಡುವೆ ಆಗಾಗ ಬಿಡುವು ನೀಡಿದರೂ ಬಳಿಕ ಮಳೆ ಬಿರುಸುಗೊಳ್ಳುತ್ತಿತ್ತು. ಇದರಿಂದಾಗಿ ನಗರದ ಹಳೇ ಡಿಸಿ ಕಚೇರಿ ಸರ್ಕಲ್, ಪ್ರಮುಖ ಸ್ಲಂ ಬಡಾವಣೆಗಳಲ್ಲಿ ಚರಂಡಿ ಹಾಗೂ ರಸ್ತೆಗಳಲ್ಲಿ ಮಳೆ ನೀರು ಹರಿಯಿತು.
ರೈತರಿಗೆ ಹರ್ಷ: ಮುಂಗಾರು ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಹೆಸರು ಬಿತ್ತನೆ ಮಾಡದ ರೈತರು, ಉಳ್ಳಾಗಡ್ಡಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಇನ್ನಿತರೆ ಬೀಜ ಬಿತ್ತನೆ ಮಾಡಿದ್ದು, ಮಳೆ ನಿರೀಕ್ಷೆಯಲ್ಲಿದ್ದರು. ಪುನರ್ವಸು ಮಳೆ ನಕ್ಷತ್ರದ ಹವಾಗುಣ ಆಧರಿಸಿ ಬಿತ್ತನೆ ಮಾಡಲು ಉದ್ದೇಶಿಸಿದ್ದಾರೆ. ಇದೀಗ ಪುನರ್ವಸು ಆರಂಭವಾದ 24 ಗಂಟೆಗಳಲ್ಲಿ ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.