Advertisement

ಪಂಪ್‌ವೆಲ್‌: ಲಾರಿ ಹರಿದು ಯುವಕ ಸಾವು

09:51 AM Apr 30, 2018 | Harsha Rao |

ಮಂಗಳೂರು: ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಹಾಲ್‌ ರಸ್ತೆಯ ದ್ವಾರದ ಎದುರು ಸರ್ವೀಸ್‌ ರಸ್ತೆಯಲ್ಲಿ  ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಅಳಿಕೆಯ ಅಕ್ಷಯ್‌ (23) ಸಾವನ್ನಪ್ಪಿದ್ದಾರೆ ಹಾಗೂ ಸಹ ಸವಾರ ಪ್ರಿಶನ್‌ (22) ಗಾಯಗೊಂಡಿದ್ದಾರೆ. 

Advertisement

ಅಕ್ಷಯ್‌ ಮಂಗಳೂರಿನಲ್ಲಿ ಮಾರ್ಕೆಟಿಂಗ್‌ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ಕುಂಪಲದಲ್ಲಿ ಇರುವ ದೊಡ್ಡಮ್ಮನ ಮನೆಯಲ್ಲಿ ವಾಸ್ತವ್ಯ ಮಾಡಿ ಕೆಲಸಕ್ಕೆ ಹೋಗುತ್ತಿದ್ದರು. 

ಸ್ಕೂಟರ್‌ನಲ್ಲಿ ಬರುತ್ತಿದ್ದ ಅಕ್ಷಯ್‌ ಮತ್ತು ಸಹ ಸವಾರ ಇನ್ನೇನು ಪಂಪ್‌ವೆಲ್‌ ಜಂಕ್ಷನ್‌ ತಲುಪಬೇಕು ಎನ್ನುವಷ್ಟರಲ್ಲಿ ರಸ್ತೆಯ ಬದಿಯಲ್ಲಿ ಫ್ಲೆಓವರ್‌ ಕಾಮಗಾರಿಗಾಗಿ ತೋಡಿದ್ದ ಕೆಸರು ತುಂಬಿದ್ದ ಹೊಂಡಕ್ಕೆ ಸ್ಕೂಟರ್‌ ಬಿತ್ತು. ಆಗ ಸವಾರ ಅಕ್ಷಯ್‌ ರಸ್ತೆಯ ಬಲ ಬದಿಗೆ ಹಾಗೂ ಸಹಸವಾರ ಪ್ರಿಶನ್‌ ಎಡಬದಿಗೆ ಬಿದ್ದಿದ್ದರು. ಹಿಂಬದಿಯಿಂದ ಬರುತ್ತಿದ್ದ  ಲಾರಿಯ ಹಿಂದಿನ ಚಕ್ರದ ಅಡಿಗೆ ಅಕ್ಷಯ್‌ ಸಿಲುಕಿದ್ದು, ತೀವ್ರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಸಾವನ್ನಪ್ಪಿದ್ದರು. ಪ್ರಿಶನ್‌  ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸ್ನೇಹಿತ ಪ್ರಿಶನ್‌ ಜಪ್ಪಿನಮೊಗರಿನಿಂದ ಸ್ಕೂಟರ್‌ ಹತ್ತಿದ್ದು, ಅಕ್ಷಯ್‌ ಸ್ಕೂಟರ್‌ ಚಲಾಯಿಸುತ್ತಿದ್ದರು. 
ಅಪಘಾತಕ್ಕೆ ಕಾರಣವಾದ ಲಾರಿ ಕೇರಳದಿಂದ ಸರಕು ತುಂಬಿಸಿಕೊಂಡು ಕರ್ನಾಟಕದ ಕಡೆಗೆ ಚಲಿಸುತ್ತಿತ್ತು. ಅಪಘಾತ ಸಂಭವಿಸಿದಾಕ್ಷಣ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ. ಮಂಗಳೂರು ನಗರ ದಕ್ಷಿಣ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. 

ಮಳೆಗಾಲದೊಳಗೆ ಹೊಂಡ ತುಂಬಿಸುವ ಕಾಮಗಾರಿ ಮುಗಿಸದಿದ್ದರೆ ಇಲ್ಲಿ ಇನ್ನೂ ಹಲವು ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.

Advertisement

ವ್ಯಾಪಕ ಟೀಕೆ
ಪಂಪ್‌ವೆಲ್‌ ವೃತ್ತದ ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ತೀರಾ ಟೀಕೆ ವ್ಯಕ್ತವಾಗಿದ್ದು, ರವಿವಾರದ ಅಪಘಾತದ ಬಳಿಕ ಎಲ್ಲೆಡೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದಾರು ವರ್ಷಗಳಿಂದ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಯಾರೂ ಇದರತ್ತ ಹೆಚ್ಚಿನ ಗಮನ ನೀಡಲಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ರವಿವಾರ ಓರ್ವ ದ್ವಿಚಕ್ರ ವಾಹನ ಸವಾರನನ್ನು ಬಲಿ ತೆಗೆದುಕೊಂಡಿದೆ. ಆ ಮೂಲಕ ಈ ಹೆದ್ದಾರಿಯಲ್ಲಿರುವ ಫ್ಲೆಓವರ್‌ ಕಾಮಗಾರಿ ಎಷ್ಟೊಂದು ಅಪಾಯಕಾರಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಯಿತು.

ಹೆದ್ದಾರಿ ಅಧಿಕಾರಿ, ಗುತ್ತಿಗೆದಾರರ ವಿರುದ್ಧವೂ ಪ್ರಕರಣ ದಾಖಲು
ಪೊಲೀಸರು ಲಾರಿ ಚಾಲಕನ ಜತೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಫ್ಲೆಓವರ್‌ ಕಾಮಗಾರಿಯ ಗುತ್ತಿಗೆದಾರರ ವಿರುದ್ಧವೂ ಕೇಸು ದಾಖಲಿಸಿದ್ದಾರೆ. “ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಡದೆ ರಾ.ಹೆ. ಅಧಿಕಾರಿಗಳು ಮತ್ತು ಕಾಮಗಾರಿಯ ಗುತ್ತಿಗೆದಾರರು ನಿರ್ಲಕ್ಷ್ಯ ತಳೆದಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಆಮೆ ಗತಿಯಲ್ಲಿ ಕಾಮಗಾರಿ
ಪಂಪ್‌ವೆಲ್‌-ಎಕ್ಕೂರು ನಡುವಿನ ಉಜೊjàಡಿ ಶ್ರೀ ಮಹಾಂಕಾಳಿ ದೇವಸ್ಥಾನದ ಸಮೀಪ ಬಹುಕಾಲದ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಪೂರಕ ಕಾಮಗಾರಿ ಕಳೆದ ಫೆಬ್ರವರಿಯಲ್ಲಿ ಆರಂಭವಾಗಿದೆ. ಕಾಮಗಾರಿ ಸಮಯದಲ್ಲಿ ರಾ.ಹೆ.ಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಪಂಪ್‌ವೆಲ್‌ನಿಂದ ಉಜೊjàಡಿಯವರೆಗೆ ಎರಡೂ ಬದಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅದೂ ಸಮರ್ಪಕವಾಗಿಲ್ಲ ಎಂಬುದು ಆರೋಪವಾಗಿದೆ. 

ನಾಲ್ಕು ದಿನಗಳಲ್ಲಿ ಒಂದೇ ಊರಿನ ಮೂವರ ಸಾವು!
ಕುಂಪಲ ಬಾರ್ದೆ ನಿವಾಸಿ ರಂಜಿತ್‌ ಪೂಜಾರಿ (33) ಎ. 26ರಂದು ಅಕಾಲ ಸಾವಿಗೀಡಾಗಿದ್ದರೆ, ಆಶ್ರಯ ಕಾಲನಿ ನಿವಾಸಿ ವಿನೀತ್‌ರಾಜ್‌ (26) ಅವರು 27ರಂದು ಮತ್ತು ಅಕ್ಷಯ್‌ ರವಿವಾರ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೂವರ ಮನೆಗಳು ಸರಿ ಸುಮಾರು ಅರ್ಧ ಕಿ.ಮೀ. ಆಸುಪಾಸಿನಲ್ಲಿವೆ.

ನೃತ್ಯ ಪ್ರದರ್ಶನಕ್ಕೆ ತೆರಳುತ್ತಿದ್ದರು
ಅಕ್ಷಯ್‌ ಡಾನ್ಸರ್‌ ಕೂಡಾ ಆಗಿದ್ದು, “ಆರ್ಯನ್‌ ಡಾನ್ಸ್‌ ಟೀಂ’ನ ಸದಸ್ಯರಾಗಿ ದ್ದರು. ರವಿವಾರ ಬೆಳಗ್ಗೆ  ನಗರದ ಪುರ ಭವನದಲ್ಲಿ ನಡೆದ “ಕಟಪಾಡಿ ಕಟ್ಟಪ್ಪ’ ಚಿತ್ರದ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ  ಡಾನ್ಸ್‌ ಪ್ರದರ್ಶನ ನೀಡಲು ಅಕ್ಷಯ್‌ ತನ್ನ ಸ್ಕೂಟರ್‌ನಲ್ಲಿ  ಸ್ನೇಹಿತ ಪ್ರಿಶನ್‌ ಅವರನ್ನು ಹಿಂಬದಿ ಕುಳ್ಳಿರಿಸಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next