ಮಂಗಳೂರು: ತೊಕ್ಕೊಟ್ಟು ಫ್ಲೈಓವರ್ ಕೊನೆಯ ಹಂತದಲ್ಲಿದ್ದು, ಜೂ.10 ರಿಂದ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಪಂಪ್‌ವೆಲ್‌ಫ್ಲೈಓವರ್ ಕಾಮಗಾರಿ ವೇಗ ಪಡೆದಿದ್ದು, ಜುಲೈ ಅಂತ್ಯಕ್ಕೆ ಪೂರ್ಣಗೊಂಡು ಆಗಸ್ಟ್ ಮೊದಲ ವಾರ ಸಂಚಾರಕ್ಕೆ ಮುಕ್ತವಾಗಲಿದೆ. ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ತೊಕ್ಕೊಟ್ಟು ಹಾಗೂ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕಳೆದ 6 ತಿಂಗಳಿನಿಂದ ಈ ಎರಡು ಫ್ಲೈಓವರ್ ಕಾಮಗಾರಿ ವೇಗ ಪಡೆದುಕೊಂಡಿದೆ. ಸಂಸ್ಥೆಯು ತಾಂತ್ರಿಕ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸೂಚನೆಯ ಮೇರೆಗೆ 55 ಕೋ.ರೂ. ಸಾಲ ಕೂಡ ಸಂಸ್ಥೆಗೆ ನೀಡಲಾಯಿತು. ಚುನಾವಣೆ ಕಾರಣ ಕಾಮಗಾರಿ ಮತ್ತೆ ವಿಳಂಬ ಹಾಗೂ ನೀತಿಸಂಹಿತೆ ಹಿನ್ನೆಲೆಯಲ್ಲಿ ನಮಗೆ ಮಧ್ಯಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಈಗ ಯೋಜನೆಗೆ ವೇಗ ದೊರಕಿದೆ. 1 ತಿಂಗಳೊಳಗೆ ಉಜೊಡಿ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ರಾಜ್ಯ ಸರಕಾರ ರಾಜಕಾರಣದ ಬೆನ್ನು ಬಿದ್ದಿದೆಯೇ ವಿನಾ ಕೆಲಸ ಮಾಡುವ ಇಚ್ಛಾಶಕ್ತಿ ತೋರಿಲ್ಲ. ಹೀಗಾಗಿಯೇ ಶಿರಾಡಿ, ಚಾರ್ಮಾಡಿ, ಆಗುಂಬೆ ಘಾಟ್ ರಸ್ತೆಗಳು ಈ ಮಳೆಗಾಲಕ್ಕೂ ಮೊದಲೇ ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿನ ಮಳೆ ಪರಿಸ್ಥಿತಿ ಗೊತ್ತಿದ್ದೂ ಕೂಡ ಈ ರಸ್ತೆಗಳ ದುರಸ್ತಿಗೆ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ನಳಿನ್ ಅವರು ಪ್ರಶ್ನಿಸಿದರು.
ನೇತ್ರಾವತಿಯಲ್ಲೇ ನೀರಿಲ್ಲ ; ಎತ್ತಿನಹೊಳೆಗೆ ನೀರೆಲ್ಲಿ?
ಸದ್ಯ ನೇತ್ರಾವತಿ ಬರಿದಾಗಿದೆ. ಮಂಗಳೂರಿನ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ನೀರಿಲ್ಲದ ನದಿಯ ಮೂಲದಿಂದ ಎತ್ತಿನಹೊಳೆ ಯೋಜನೆ ಮಾಡಿ ಬಯಲುಸೀಮೆಗೆ ನೀರು ತೆಗೆದುಕೊಂಡು ಹೋಗಲು ವ್ಯರ್ಥ ಹಣ ಸುರಿಯುತ್ತಿದ್ದಾರೆ. ಈ ಹಿಂದಿನ ರಾಜ್ಯ ಸರಕಾರ ಬರುವ ಮುನ್ನವೇ ಇದಕ್ಕೆ ಶಿಲಾನ್ಯಾಸ ಮಾಡಿದ್ದರೂ ಇನ್ನೂ ಪೈಪ್ ಹಾಕಲು ಇವರಿಗೆ ಸಾಧ್ಯವಾಗಿಲ್ಲ. ಈಗಲೇ ಸಾವಿರಾರು ಕೋ.ರೂ. ಮುಗಿಸಿದ ಹಣ ಖಾಲಿಯಾಗಿದೆ ಹೊರತು ಏನೂ ಆಗಿಲ್ಲ. ಆಗುವುದೂ ಇಲ್ಲ. ಇದು ನೀರಿಗಾಗಿ ಮಾಡುವ ಯೋಜನೆಯಲ್ಲ; ಬದಲಾಗಿ ಹಣಕ್ಕಾಗಿ ಮಾಡುವ ಯೋಜನೆ. ಬಯಲು ಸೀಮೆಗೆ ನೀರು ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಮ್ಮ ನೇತ್ರಾವತಿ ಹಾಗೂ ಪಶ್ಚಿಮ ಘಟ್ಟವನ್ನು ಹಾಳುಗೆಡಹುವ ಯೋಜನೆಗಳಿಗೆ ನನ್ನ ವಿರೋಧವಿದೆ ಎಂದರು.