Advertisement

‘ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ ಜನವರಿ ಅಂತ್ಯಕ್ಕೆ  ಪೂರ್ಣ’

11:15 AM Nov 19, 2018 | Team Udayavani |

ಪಂಪ್‌ವೆಲ್‌: ಪಂಪ್‌ವೆಲ್‌ ಫ್ಲೈಓವರ್‌ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದ್ದು, ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಅಲ್ಲದೆ ಡಿಸೆಂಬರ್‌ ಅಂತ್ಯದ ವೇಳೆಗೆ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿಯೂ ಸಂಚಾರ ಆರಂಭವಾಗಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿಯನ್ನು ರವಿವಾರ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿಗದಿತ ಸಮಯದಲ್ಲಿ ರಾಜ್ಯ ಸರಕಾರ ಭೂಮಿ ಒತ್ತುವರಿ ಮಾಡಿಕೊಡದಿರುವುದೇ ಫ್ಲೈಓವರ್‌ ಕಾಮಗಾರಿ ತಡವಾಗಲು ಕಾರಣ ಎಂದು ಆಪಾದಿಸಿದರು.

ಮಹಾವೀರ ವೃತ್ತದ ಬೃಹತ್‌ ಕಲಶ ಸ್ಥಳಾಂತರಕ್ಕೆ ವಿಳಂಬ, ಸರ್ವಿಸ್‌ ಬಸ್‌ ನಿಲ್ದಾಣವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿರ್ಮಿಸಲು ಮುಂದಾಗಿರುವುದು ಮೊದಲಾದ ಕಾರಣದಿಂದಾಗಿ 2010ರಲ್ಲಿ ಆರಂಭವಾದ ಕೆಲಸ ಮುಕ್ತಾಯಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ವಿನ್ಯಾಸವನ್ನು 15 ವರ್ಷಗಳ ಹಿಂದೆಯೇ ರಚಿಸಲಾಗಿದ್ದರೂ, ಪಂಪ್‌ವೆಲ್‌ನಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ಹೆದ್ದಾರಿ ವಿನ್ಯಾಸ ಬದಲಾವಣೆ ಮಾಡಬೇಕೆಂಬ ಬೇಡಿಕೆ ವ್ಯಕ್ತವಾಯಿತು. ಈ ನಡುವೆ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಸಂಸ್ಥೆಯೂ ಆರ್ಥಿಕ ನಷ್ಟಕ್ಕೆ ಒಳಗಾದ್ದರಿಂದ ಕಾಮಗಾರಿ ತಡವಾಯಿತು. 2016ರ ಬಳಿಕ ಕೆಲಸಕ್ಕೆ ವೇಗ ದೊರಕಿದ್ದರಿಂದ ಇದೀಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ ಎಂದವರು ತಿಳಿಸಿದರು.

ಆಗಿನ ಜಿಲ್ಲಾಧಿಕಾರಿ, ಶಾಸಕರು ಮತ್ತು ಉಸ್ತುವಾರಿ ಸಚಿವರೇ ಪಂಪ್‌ ವೆಲ್‌ ಕಾಮಗಾರಿ ತಡವಾಗಲು ಕಾರಣ. ಅವರು ತೆರವು ಮಾಡಿ ಕೊಡದೆ ಕಾಮಗಾರಿ ನಡೆದಿಲ್ಲ. ಬಿ.ಸಿ.ರೋಡ್‌ನ‌ಲ್ಲಿ ಪರಿಹಾರ ನೀಡಿ 15 ವರ್ಷವಾದರೂ ಹೆದ್ದಾರಿ ಬದಿಯ 10 ಕಟ್ಟಡಗಳನ್ನು ಇನ್ನೂ ತೆರವುಗೊಳಿಸಿಲ್ಲ. ತೊಕ್ಕೊಟ್ಟಿನಲ್ಲಿ ಸರ್ವಿಸ್‌ ರಸ್ತೆಯ ಮಧ್ಯ ಭಾಗದಲ್ಲಿರುವ ಮೂರು ಮನೆಗಳಿಗೆ ಈಗಾಗಲೇ ಪರಿಹಾರ ನೀಡಿದ್ದರೂ ತೆರವುಗೊಳಿಸಿಕೊಟ್ಟಿಲ್ಲ. ಅಧಿಕಾರಿಗಳು ತೆರವಿಗೆ ಮುಂದಾದರೆ ಅವರಿಗೆ ಬೆದರಿಕೆ ಕರೆಗಳು ಬರುತ್ತವೆ ಎಂದು ಅವರು ಆಪಾದಿಸಿದರು.

ಈ ವಿಳಂಬಗಳಿಗೆ ಉತ್ತರಿಸುವವರಾರು?
ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್‌ ಸರಕಾರವಿದ್ದಾಗ ಬಿ.ಸಿ.ರೋಡ್‌ನಿಂದ ಸುರತ್ಕಲ್‌ ಮುಕ್ಕದವರೆಗಿನ 30 ಕಿ.ಮೀ. ರಸ್ತೆಗೆ 13 ವರ್ಷ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಬೈಕಂಪಾಡಿ ಸೇತುವೆ ಸೇರಿರಲಿಲ್ಲ. ಅದನ್ನು ನನ್ನ ಅವಧಿಯಲ್ಲಿ ನವಯುಗದ ಮೂಲಕ ಮಾಡಲಾಯಿತು. ಪಾಣೆಮಂಗಳೂರು ನೇತ್ರಾವತಿ ಸೇತುವೆ ಕಾಮಗಾರಿ 14 ವರ್ಷ ನಡೆದಿದೆ. ಯಡಿಯೂರಪ್ಪ ಮುಖ್ಯಮಂತಿಯಾಗಿದ್ದಾಗ ಮಹಾನಗರ ಪಾಲಿಕೆಗೆ 300 ಕೋಟಿ ರೂ. ಅನುದಾನ ನೀಡಿದ್ದರು. ಆಗ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗಿತ್ತು. 11 ವರ್ಷವಾದರೂ ಇಲ್ಲಿಯವರೆಗೆ ಫ‌ುಟ್‌ಪಾತ್‌ ನಿರ್ಮಿಸಲು ಪಾಲಿಕೆಯಿಂದ ಸಾಧ್ಯವಾಗಿಲ್ಲ. ಆದರೆ ಈ ವಿಳಂಬಗಳಿಗೆಲ್ಲ ಅವರು ಉತ್ತರ ನೀಡುತ್ತಿಲ್ಲ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು ಎಂಬ ಕಾರಣಕ್ಕಾಗಿಯೇ ಇಲ್ಲಿಯವರೆಗೆ ಮೌನವಾಗಿದ್ದೆ ಎಂದು ನಳಿನ್‌ ಹೇಳಿದರು.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕ ಸ್ಯಾಮ್ಸನ್‌ ವಿಜಯ್‌ ಕುಮಾರ್‌, ಎಂಜಿನಿಯರ್‌ ಅಜಿತ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಟೋಲ್‌ ಸ್ಥಗಿತಕ್ಕೆ ಪತ್ರ
ಮುಕ್ಕ ಹಾಗೂ ಬ್ರಹ್ಮರಕೂಟ್ಲು ಎರಡೂ ಟೋಲ್‌ಗೇಟ್‌ ಗಳನ್ನು ಸ್ಥಗಿತಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕೆ ರಾಜ್ಯ ಸರಕಾರದಿಂದ ಕೇಂದ್ರದ ಹೆದ್ದಾರಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ. ರಾಜ್ಯ ಸರಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next