Advertisement

ಪಂಪ್‌ವೆಲ್‌ ಫ್ಲೈಓವರ್: ಗಡುವು ಸಮೀಪಿಸುತ್ತಿದ್ದರೂ ಮುಗಿಯದ ಕಾಮಗಾರಿ!

09:55 AM Dec 17, 2019 | Sriram |

ಮಹಾನಗರ: ಪಂಪ್‌ವೆಲ್‌ ಫ್ಲೈಓವರ್ ಪ್ರಸ್ತುತ ಬಹು ಚರ್ಚೆಯ ವಿಚಾರ. ಮೇಲ್ಸೇತುವೆ ಕಾಮಗಾರಿ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಂಡು ಜನವರಿ ಮೊದಲ ವಾರದಲ್ಲಿ ಉದ್ಘಾಟನೆ ಎಂದು ಸಂಸದರು ಈಗಾಗಲೇ ಹೊಸ ಗಡುವು ನೀಡಿದ್ದಾರೆ. ಇದು ಈ ಹಿಂದೆ ನೀಡಿರುವ ಗಡುವುಗಳಂತೆ ಕೇವಲ ಜನರನ್ನು ಸಮಾಧಾನಿಸುವ ತಂತ್ರವೇ ಅಥವಾ ನಿಜವಾಗಿಯೂ ಅನುಷ್ಠಾನವಾಗಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.

Advertisement

ನವೆಂಬರ್‌ 16ರಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, ಜನವರಿ ಮೊದಲ ವಾರ ಮೇಲ್ಸೇತುವೆ ಉದ್ಘಾಟನೆ ನೆರವೇರಿಸುವುದಾಗಿ ಹೇಳಿದ್ದರು. ಕಾಮಗಾರಿಯ ಈಗಿನ ಪ್ರಗತಿ ಮತ್ತು ಸ್ವರೂಪವನ್ನು ನೋಡಿದರೆ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳುವುದು ಕಷ್ಟ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಯಾವ ಹಂತದಲ್ಲಿ ಎಂದು ತಿಳಿಯಲು “ಸುದಿನ’ ತಂಡ ರವಿವಾರದಂದು ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿತ್ತು. ಸುಮಾರು 20 ಮಂದಿ ಕಾರ್ಮಿಕರು, 4 ಜೆಸಿಬಿ, 4 ಟಿಪ್ಪರ್‌ 2 ರೋಲರ್‌ ಕಾರ್ಯನಿರ್ವಹಿಸುತ್ತಿವೆ.

ಇಂಡಿಯಾನ ಆಸ್ಪತ್ರೆ ಬಳಿ ಕಾಮಗಾರಿ ಪ್ರದೇಶದಲ್ಲಿ ಟಿಪ್ಪರ್‌ ಮತ್ತು ಜೇಸಿಬಿ ನಿಲ್ಲಿಸಿತ್ತೇ ವಿನಾ ಯಾವುದೇ ಕಾಮಗಾರಿ ನಡೆಯುತ್ತಿಲ್ಲ.

Advertisement

ಮೇಲ್ಸೇತುವೆಯ ಗರ್ಡರ್‌ನ ಮೇಲ್ಭಾಗದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಫ್ಲೈಓವರ್  ನ ಎಕ್ಕೂರು ಕಡೆಯಿಂದ ಪಂಪ್‌ವೆಲ್‌ವರೆಗಿನ ಆರ್‌ಇ ವಾಲ್‌ ಜೋಡಣೆ ಕಾರ್ಯ ಒಂದು ಕಡೆ ಪೂರ್ಣಗೊಂಡರೂ ಮತ್ತೂಂದು ಬದಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಜತೆಗೆ ಕಬ್ಬಿಣದ ಸರಳು ಅಳವಡಿಸುವ ಕಾರ್ಯದಲ್ಲಿ ಸ್ಥಳದಲ್ಲಿ ಸದ್ಯ ಸುಮಾರು 15 ಮಂದಿ ಕಾರ್ಮಿಕರು ನಿರತರಾಗಿದ್ದಾರೆ.

ಉಜೊjàಡಿ ಕಡೆಯಿಂದ ಫ್ಲೈಓವರ್ ಗೆ ಸಮಾನಾಂತರವಾಗಿ ಮಣ್ಣು ಹಾಕುವ ಕೆಲಸ ಇನ್ನೂ ಬಾಕಿ ಇದೆ. ಅದೇ ರೀತಿ ಫ್ಲೈಓವರ್ ಸಮಾನಾಂತರಕ್ಕೆ ಒಂದೆಡೆ ಮಣ್ಣು ರಾಶಿ ಹಾಕಲಾಗಿದ್ದು, ಕೆಲಸ ನಿರ್ವಹಿಸಲು ಕೇವಲ ಒಂದು ಟಿಪ್ಪರ್‌-ಜೇಸಿಬಿ ಇದೆ. ಕರ್ಣಾಟಕ ಬ್ಯಾಂಕ್‌ ಮುಂಭಾಗದಿಂದ ಫ್ಲೈಓವರ್ ಜೋಡಣೆ ರಸ್ತೆಗೆ ಎರಡು ಟಿಪ್ಪರ್‌ ಮತ್ತು ಜೇಸಿಬಿಯಲ್ಲಿ ಮಣ್ಣು ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಇವಿಷ್ಟೂ ಕಾಮಗಾರಿ ಪೂರ್ಣಗೊಂಡ ಬಳಿಕ ಮೇಲ್ಸೇತುವೆ ಸಂಪರ್ಕ ರಸ್ತೆಗೆ ಡಾಮರು ಹಾಕಬೇಕು.

ಇನ್ನೂ ಆರು ತಿಂಗಳುಗಳು ತಗುಲಬಹುದು
ಕಾಮಗಾರಿಯಲ್ಲಿ ನಿರತರಾಗಿದ್ದ ಉತ್ತರ ಪ್ರದೇಶದ ಕಾರ್ಮಿಕನೊಬ್ಬ “ಸುದಿನ’ ಬಳಿ ಮಾತನಾಡಿ, “ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮೇಲ್ಸೇತುವೆಗೆ ರಸ್ತೆ ಸಂಪರ್ಕಕ್ಕೆ ಮಣ್ಣು ಹಾಕುವ ಕೆಲಸ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ಬಳಿಕವಷ್ಟೇ ಡಾಮರು ಹಾಕಬೇಕು. ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಮೇಲಧಿಕಾರಿಗಳು ಹೇಳಿದ್ದಾರೆ. ಆದರೂ ಇನ್ನೂ ಆರು ತಿಂಗಳುಗಳು ತಗುಲಬಹುದು’ ಎನ್ನುತ್ತಾರೆ.

ಬರೋಬ್ಬರಿ ಒಂಬತ್ತು ವರ್ಷದ ಕಾಮಗಾರಿ
ಪಂಪ್‌ವೆಲ್‌ ಮೇಲ್ಸೇತುವೆಯು ಒಟ್ಟು 600 ಮೀಟರ್‌ ಉದ್ದ ಹಾಗೂ 20 ಮೀಟರ್‌ ಅಗಲ ಹೊಂದಿರಲಿದ್ದು, ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೊದಲ ಆರು ವರ್ಷಗಳಲ್ಲಿ ಕುಂಠುತ್ತಾ ಸಾಗಿದ ಕಾಮಗಾರಿಯು ಮೂರು ವರ್ಷಗಳ ಹಿಂದೆ ವೇಗ ದೊರೆಯಿತಾದರೂ ಬಳಿಕ ಮತ್ತೆ ನಿಧಾನಗತಿಯಲ್ಲಿ ಸಾಗಿತ್ತು. ಇನ್ನು, ಈ ಬಾರಿಯ ಮಳೆಗಾಲದಲ್ಲಿ ಕಾಮಗಾರಿ ಮತ್ತೆ ಆಮೆಗತಿಗೆ ತಿರುಗಿತು.

2019ರ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಸಂಸದರು ನವಯುಗ್‌ ಸಂಸ್ಥೆಯ ಮೇಲೆ ಒತ್ತಡ ತಂದರೂ, ಇದು ಸಾಧ್ಯವಾಗಲಿಲ್ಲ. ಬಳಿಕ, ಫೆಬ್ರವರಿ, ಮೇ ಸಹಿತ ಗಡುವುಗಳು ವಿಸ್ತರಣೆಗೊಂಡವು. ಇದೀಗ ಡಿಸೆಂಬರ್‌ 31ರೊಳಗೆ ಕಾಮಗಾರಿ ಪೂರ್ಣಗೊಂಡು ಜನವರಿ ಮೊದಲ ವಾರ ಉದ್ಘಾಟನೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ ಮತ್ತೂಂದು ಡೆಡ್‌ಲೈನ್‌ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌
ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ನಿಧಾನವಾಗುತ್ತಿರುವ ಕಾರಣದಿಂದಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗುತ್ತಿದೆ. ಸುಮಾರು ಮೂರು ಕೋಟಿಗೂ ಹೆಚ್ಚು ಫಾಲೋವರ್ ಹೊಂದಿರುವ “ಸರ್ಕಸಂ’ ಎಂಬ ಪೇಜ್‌ನಲ್ಲಿ ತನ್ನ ಮೀಮ್‌ ಒಂದಕ್ಕೆ ಪಂಪ್‌ವೆಲ್‌ ಮೇಲ್ಸೇತುವೆ ಫೋಟೋ ಬಳಸಲಾಗಿತ್ತು. ಇದಕ್ಕೆ 700ಕ್ಕೂ ಹೆಚ್ಚು ಶೇರ್‌, 20 ಸಾವಿರಕ್ಕೂ ಹೆಚ್ಚು ಲೈಕ್‌ ಬಂದಿದ್ದವು.

ಇನ್ನು, ಸಂಸದ ನಳಿನ್‌ ಅವರು ಮೇಲ್ಸೇತುವೆ ಉದ್ಘಾಟನೆ ಜನವರಿ ಮೊದಲ ವಾರ ಎಂದು ಹೇಳಿದ್ದಾರೆ. ಇದೇ ಮಾತಿನ ತುಣುಕನ್ನು ಬೇರೆ ಬೇರೆ ರೀತಿಯಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಜ. 1ರಂದು ಪಂಪ್‌ವೆಲ್‌ ಮೇಲ್ಸೇತುವೆ ಉದ್ಘಾಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನಟಿ ಸನ್ನಿಲಿಯೋನ್‌, ಉದ್ಯಮಿ ವಿಜಯ್‌ ಮಲ್ಯ ಬರುತ್ತಾರೆ ಎಂದು ಬರೆದ ಅಣಕು ಆಮಂತ್ರಣ ಪತ್ರಿಕೆ ವೈರಲ್‌ ಆಗುತ್ತಿದ್ದು, ಅದರ ಜತೆ “ಪಂಪ್‌ವೆಲ್‌ಗ… ಬಲೆ’ ಎಂಬ ಹಾಡು ಕೂಡ ಪ್ರಸಿದ್ಧಿ ಪಡೆದಿದೆ.

ತ್ವರಿತಗತಿಯಲ್ಲಿ ಕಾಮಗಾರಿ
ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ನಿಗದಿತ ಡೆಡ್‌ಲೈನ್‌ನಲ್ಲಿ ಪೂರ್ಣಗೊಳ್ಳಲಿದೆ. ಪ್ರತೀ ಹತ್ತು ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಪ್ರತ್ಯೇಕ ಎಂಜಿನಿಯರ್‌ ನೇಮಕ ಮಾಡಲಾಗಿದೆ. ನಿಗದಿತ ದಿನದಂದು ಕಾಮಗಾರಿ ಪೂರ್ಣಗೊಳಿಸದಿದ್ದರೆ ಅವರ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು.
 - ನಳಿನ್‌ ಕುಮಾರ್‌ ಕಟೀಲು, ಸಂಸದ

ಹಗಲಿರುಳು ಕಾಮಗಾರಿ
ಡಿಸೆಂಬರ್‌ 31ರೊಳಗೆ ಪಂಪ್‌ವೆಲ್‌ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಗಡುವು ಇದೆ. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಕಾರ್ಮಿಕರು ಹಗಲಿರುಳು ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ.
 - ಶಿಶುಮೋಹನ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನ ನಿರ್ದೇಶಕ

  -ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next