ಮಹಾನಗರ: ಪ್ರಸ್ತುತ ಬಹು ಚರ್ಚಿತ ವಿಷಯಗಳಲ್ಲಿ ಒಂದಾದ ಪಂಪ್‌ವೆಲ್ ಫ್ಲೈ ಓವರ್‌ನ ಕಾಮಗಾರಿ ಅಂತಿಮ ಹಂತದಲಿದ್ದು, ಈ ತಿಂಗಳ ಅಂತ್ಯಕ್ಕೆ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಪಂಪ್‌ವೆಲ್ ಫ್ಲೈಓವರ್ ಕಾಮಗಾರಿಯು ಕೆಲ ದಿನಗಳಿಂದ ವೇಗದಲ್ಲಿ ನಡೆಯುತ್ತಿದ್ದು, ಹಗಲು-ರಾತ್ರಿ ಕಾರ್ಮಿಕರು ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದಾರೆ. ಪಂಪ್‌ವೆಲ್ ಮೇಲ್ಸೇತುವೆಯ ಗರ್ಡರ್‌ನ ಮೇಲ್ಭಾಗದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಫ್ಲೈಓವರ್‌ನ ಎಕ್ಕೂರು ಕಡೆಯಿಂದ ಕರ್ಣಾಟಕ ಬ್ಯಾಂಕ್‌ವರೆಗಿನ ಸಂಪರ್ಕ ರಸ್ತೆ ಬಹುತೇಕ ಪೂರ್ಣಗೊಂಡಿದೆ.
ಎಕ್ಕೂರು ಕಡೆಯಿಂದ ಪಂಪ್‌ವೆಲ್‌ವರೆಗಿನ ಆರ್‌ಇ ವಾಲ್ ಜೋಡಣೆ ಕಾರ್ಯ ಬಹುತೇಕ ಪೂರ್ಣವಾಗಿದೆ. ಮೇಲ್ಸೇತುವೆ ಸಂಪರ್ಕಿಸುವ ರಸ್ತೆಗಳಿಗೆ ಡಾಮರು ಹಾಕುವ ಕೆಲಸ ಪ್ರಗತಿಯಲ್ಲಿದೆ. ಮೇಲ್ಸೇತುವೆಯ ಅಲ್ಲಲ್ಲಿ ಕಾಂಕ್ರೀಟ್ ಕಾಮಗಾರಿ ಕೆಲಸ ಬಾಕಿ ಇದ್ದು, ಬೀದಿ ದೀಪಗಳನ್ನು ಈಗಾಗಲೇ ಅಳ ವಡಿ ಸಲಾಗುತ್ತಿದೆ. ಇನ್ನು, ಡಿವೈಡರ್‌ಗಳ ಎರಡೂ ಕಡೆಗಳಿಗೆ ಬಣ್ಣ ಬಳಿಯುವ ಕಾರ್ಯ ಪ್ರಗತಿಯಲ್ಲಿದೆ. ಪಂಪ್‌ವೆಲ್ ಮೇಲ್ಸೇ ತುವೆಯು ಒಟ್ಟು 600 ಮೀ.ಉದ್ದ ಹಾಗೂ, 20 ಮೀ. ಅಗಲ ಹೊಂದಿರಲಿದ್ದು, ಕಾಮ ಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು.
ಮೊದಲ ಆರು ವರ್ಷದಲ್ಲಿ ಕುಂಠುತ್ತಾ ಸಾಗಿದ ಕಾಮಗಾರಿ ಮೂರು ವರ್ಷಗಳ ಹಿಂದೆ ವೇಗ ದೊರೆಯಿತು. ಫೆಬ್ರವರಿ, ಮೇ ಸಹಿತ ಗಡುವುಗಳು ವಿಸ್ತರಣೆಗೊಂಡವು. ಡಿ. 31ರ ಒಳಗೆ ಕಾಮಗಾರಿ ಪೂರ್ಣಗೊಂಡು ಜನವರಿ ಮೊದಲ ವಾರ ಉದ್ಘಾಟನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮತ್ತೂಂದು ಡೆಡ್‌ಲೈನ್ ನೀಡಿದ್ದರು. ಗುತ್ತಿಗೆ ವಹಿಸಿಕೊಂಡ ನವಯುಗ್ ಸಂಸ್ಥೆಯು ಗಡುವಿನೊಳಗೆ ಕಾಮ ಗಾರಿ ಪೂರ್ಣಗೊಳಿಸಲಿಲ್ಲ.
ಡಿ. 31ರಂದು ಹೆದ್ದಾರಿ ಅಧಿ ಕಾರಿಗಳ ಜತೆ ಸಭೆ ನಡೆಸಿ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯ ಸಂಪೂರ್ಣ ಮೇಲುಸ್ತುವಾರಿ ಯನ್ನು ಜಿಲ್ಲಾ ಡಳಿತಕ್ಕೆ ವಹಿಸಲಾಗಿತ್ತು. ಜ. ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ನವಯುಗ ಸಂಸ್ಥೆ ಹೇಳಿತ್ತು. ಅದರಂತೆ ಕಾಮಗಾರಿ ಈಗ ವೇಗ ಪಡೆದಿದ್ದು, ಕೊನೆಯ ಡೆಡ್‌ಲೈನ್‌ನಲ್ಲಾದರೂ, ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂದು ಕಾಯಲು ಇನ್ನು ಕೇವಲ ಒಂದು ವಾರ ಬಾಕಿ ಇದೆ.
ಮಾಸಾಂತ್ಯಕ್ಕೆ
ಕಾಮಗಾರಿ ಪೂರ್ಣವಾಗುವ ಭರವಸೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಜನವರಿ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈಗಾಗಲೇ ಭರವಸೆ ನೀಡಿದ್ದಾರೆ. ಅದರಂತೆ ಪ್ರತೀ ದಿನ ವರದಿ ಒಪ್ಪಿಸುತ್ತಿದ್ದಾರೆ. ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ಭರವಸೆ ಇದೆ.
- ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ
ಚಿತ್ರ: ಸತೀಶ್ ಇರಾ