Advertisement

ರೂ. 400ಕ್ಕೆ ಪಂಪ್‌ಸೆಟ್‌ ರಕ್ಷಣಾ ಸಲಕರಣೆ 

05:34 PM Nov 03, 2018 | |

ಹುಬ್ಬಳ್ಳಿ: ವಿದ್ಯುತ್‌ ವೋಲ್ಟೇಜ್‌ ಏರುಪೇರುನಿಂದಾಗಿ ಕೃಷಿ ಪಂಪ್‌ಸೆಟ್‌ಗಳು ಹಾನಿಗೀಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಂಪ್‌ಸೆಟ್‌ ಸ್ವಯಂ ಆಫ್ ಆಗುವ ಸಲಕರಣೆಯೊಂದನ್ನು ರೈತನ ಮಗನೊಬ್ಬ ರೂಪಿಸಿದ್ದು, ಕೇವಲ 400 ರೂ.ನಲ್ಲೇ ಲಭ್ಯವಾಗಲಿದೆ.

Advertisement

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಅಧಿಕ. ಅದರಲ್ಲಿ ಗುಣಮಟ್ಟದ ವಿದ್ಯುತ್‌ ಎಂಬುದು ಅಪರೂಪ. ವೋಲೈಜ್‌ನಲ್ಲಿ ಏರುಪೇರಾದರೆ ಪಂಪ್‌ಸೆಟ್‌ ಮೋಟಾರ್‌ ಸುಟ್ಟು ಹೋಗುವ ಅಪಾಯ ಅಧಿಕವಾಗಿರುತ್ತದೆ. ಒಮ್ಮೆ ಮೋಟರ್‌ ಸುಟ್ಟರೆ ಅದನ್ನು ಪಟ್ಟಣಕ್ಕೆ ತಂದು ರಿಪೇರಿ ಮಾಡಿಸಿಕೊಳ್ಳಬೇಕು. ಮೋಟಾರ್‌ ಬರುವವರೆಗೂ ಬೆಳೆಗಳಿಗೆ ನೀರಿಲ್ಲದ ಸ್ಥಿತಿ ಇರುತ್ತದೆ. ಇಂತಹ ಸ್ಥಿತಿಯನ್ನು ತಪ್ಪಿಸಿ ರೈತರಿಗೆ ನೆರವಾಗಲು ಬೆಳಗಾವಿ ಜಿಲ್ಲೆಯ ವಿಕಾಸ ಆನಂದ ಜಮಖಂಡಿ ಕೃಷಿ ಪಂಪ್‌ ಸೆಟ್‌ಗಳ ಸಂರಕ್ಷಣೆ ಸೇರಿದಂತೆ ವಿವಿಧ ಸೌಲಭ್ಯಗಳ ಸಲಕರಣೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರನಾಗಿದ್ದು, ಓದಿನ ಜ್ಞಾನ ಬಳಸಿಕೊಂಡು ಇದನ್ನು ರೂಪಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಮೂರು ಫೇಸ್‌ ವಿದ್ಯುತ್‌ ನೀಡುವುದು ರಾತ್ರಿ ವೇಳೆಯಲ್ಲಿ, ಅದು ಕೃಷಿ ಪಂಪ್‌ಸೆಟ್‌ಗಳಿಗೆ ತಡರಾತ್ರಿ ವೇಳೆ ವಿದ್ಯುತ್‌ ಸೌಲಭ್ಯ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ರಾತ್ರಿ ವೇಳೆ ವಿದ್ಯುತ್‌ ಸಿಕ್ಕರೂ ಸಿಂಗಲ್‌ ಫೇಸ್‌ ಆಗುವುದು, ಇದ್ದಕ್ಕಿದ್ದಂತೆ ಅತ್ಯಧಿಕ ವೋಲ್ಟೇಜ್‌ ಬುರುವುದು ಇಲ್ಲವೇ ವೋಲ್ಟೇಜ್‌ ತೀರ ಕಡಿಮೆ ಆಗುವುದು ಇರುತ್ತದೆ. ಇದರಿಂದ ಪಂಪ್‌ಸೆಟ್‌ಗಳು ಹಾನಿಗೀಡಾಗುವ ಸಂಭವ ಅಧಿಕವಾಗಿದೆ.

ವಿಕಾಸ ಜಮಂಡಿ ರೂಪಿಸಿರುವ ಕಂಟ್ರೋಲ್‌ ಪ್ಯಾನಲ್ಸ್‌ ಆಧಾರಿತ ಸಲರಕಣೆ ವಿದ್ಯುತ್‌ ಪೂರೈಕೆಯಲ್ಲಿ ಹೆಚ್ಚು, ಕಡಿಮೆಯಾದರೆ ತಕ್ಷಣವೆ ಕೃಷಿ ಪಂಪ್‌ಸೆಟ್‌ ಬಂದ್‌ ಆಗುವಂತೆ ಮಾಡುತ್ತದೆ. ಇದರಿಂದ ಮೋಟರ್‌ ಹಾನಿಗೀಡಾಗುವುದು ತಪ್ಪಲಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಕೆ ಸಮಸ್ಯೆ ಅಧಿಕವಾಗಿದ್ದು, ಒಮ್ಮೆ ಪಂಪ್‌ಸೆಟ್‌ ಮೋಟಾರ್‌ ಸುಟ್ಟರೆ ಅದನ್ನು ಪಟ್ಟಣ, ನಗರ ಪ್ರದೇಶಕ್ಕೆ ಸಾಗಿಸುವ ತೊಂದರೆ ಒಂದು ಕಡೆಯಾದರೆ, ಅದನ್ನು ದುರಸ್ತಿ ಮಾಡಬೇಕಾದರೆ ಸಮರ್ಪಕ ಸೌಲಭ್ಯಗಳಿಲ್ಲದೆ, ಕೆಲವೊಮ್ಮೆ ಒಂದು ವಾರದವರೆಗೆ ಮೋಟಾರು ದುರಸ್ತಿ ಇಲ್ಲದೆ ರೈತರು ಸಂಕಷ್ಟ ಪಡುವಂತಹ ಸ್ಥಿತಿ ಇಲ್ಲದಿಲ್ಲ.

400 ರೂ.ಗೆ ಬೇಸಿಕ್‌ ಮಾಡೆಲ್‌: ರೈತರ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಲೆಂದು ವಿಕಾಸ ಜಮಖಂಡಿ ರೂಪಿಸಿರುವ ಕೃಷಿ ಪಂಪ್‌ಸೆಟ್‌ ಸಂರಕ್ಷಕ ಸಲಕರಣೆ ಬೇಸಿಕ್‌ ಮಾಡೆಲ್‌ ಕೇವಲ 400 ರೂ.ಗೆ ಸಿಗುತ್ತದೆ. ಕೇವಲ 400 ರೂ.ಗಳನ್ನು ವೆಚ್ಚ ಮಾಡಿ ರೈತರು ಇದನ್ನು ಅಳವಡಿಸಿಕೊಂಡರೆ, ವಿದ್ಯುತ್‌ ಏರಿಳಿತದಿಂದ ತೊಂದರೆಗೀಡಾಗಬಹುದಾದ ಪಂಪ್‌ಸೆಟ್‌ ಮೋಟಾರು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಇಷ್ಟಕ್ಕೆ ಸುಮ್ಮನಾಗದ ವಿಕಾಸ ಜಮಖಂಡಿ, ಪಂಪ್‌ಸೆಟ್‌ ಸಂರಕ್ಷಣೆಯ ಬೇಸಿಕ್‌ ಮಾಡೆಲ್‌ ಜತೆಗೆ ಅದರಲ್ಲಿಯೇ ಇನ್ನಷ್ಟು ಸುಧಾರಣೆ ಹಾಗೂ ಹೆಚ್ಚಿನ ಸೌಲಭ್ಯಗಳ ಸಲಕರಣೆ ರೂಪನೆಯಲ್ಲೂ ಮಹತ್ವದ ಹೆಜ್ಜೆ ಇರಿಸಿದ್ದಾರೆ.

Advertisement

ಆಟೋಮಿಷನ್‌ ಮೂಲಕ ರೈತರು ಮನೆಯಲ್ಲಿ ಇದ್ದರೂ ಪಂಪ್‌ಸೆಟ್‌ನ್ನು ನಿರ್ವಹಿಸುವ ಸೌಲಭ್ಯದ ಸಲಕರಣೆ ರೂಪಿಸಿದ್ದು, ಶೀಘ್ರದಲ್ಲಿಯೇ ಅದನ್ನು ಮಾರುಕಟ್ಟೆಗೆ ಪರಿಚಯಿಸುವ ಚಿಂತನೆಯಲ್ಲಿದ್ದಾರೆ. ಈ ಸಲಕರಣೆಯಲ್ಲಿ ಟೈಮಿಂಗ್‌ ಸೆಟ್‌ ಮಾಡಿದರೆ ಸಾಕು ನೀವು ನಿಗದಿಪಡಿಸಿದ ಸಮಯಕ್ಕೆ ಪಂಪ್‌ಸೆಟ್‌ ತನ್ನಿಂದ ತಾನೇ ಚಾಲನೆ ಪಡೆದುಕೊಳ್ಳುತ್ತದೆ. ನೀವು ನಿಗದಿಪಡಿಸಿದ ಸಮಯಕ್ಕೆ ಸ್ವಯಂ ಸ್ಥಗಿತಗೊಳ್ಳುತ್ತದೆ. ಒಂದು ವೇಳೆ ವಿದ್ಯುತ್‌ ಪೂರೈಕೆ ಕಡಿತವಾಗಿ ಕೆಲ ಸಮಯದ ನಂತರ ಬಂದರೆ ಸ್ವಯಂ ಚಾಲನೆ ಪಡೆದುಕೊಳ್ಳಲಿದೆ.

ಎಸ್‌ಎಂಎಸ್‌ ಮೂಲಕ ಆಗುತ್ತೆ ಆನ್‌, ಆಫ್!
ಇದಲ್ಲದೆ ರೈತರು ಮೊಬೈಲ್‌ ಎಸ್‌ ಎಂಎಸ್‌ ಮೂಲಕವೂ ಪಂಪ್‌ ಸೆಟ್‌ನ್ನು ಚಾಲನೆ ಇಲ್ಲವೇ ಬಂದ್‌ ಮಾಡಬಹುದಾಗಿದೆ. ಆರಂಭದಲ್ಲಿ ಕನ್ನಡ ಮತ್ತು ಮರಾಠಿಯಲ್ಲಿ ಎಸ್‌ ಎಂಎಸ್‌ ಕಳುಹಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ವಿಕಾಸ ಜಮಖಂಡಿ ರೂಪಿಸಿರುವ ಪಂಪ್‌ಸೆಟ್‌ ಸಂರಕ್ಷಣೆ ಸಲಕರಣೆಗಳು ಬೇಸಿಕ್‌ ಮಾಡೆಲ್‌ನಿಂದ ಹಿಡಿದು ಎಲ್ಲ ಮಾದರಿಗಳಿಗೆ 6 ತಿಂಗಳು ವಾರೆಂಟಿ ನೀಡಲಾಗುತ್ತದೆ. ಅದರಲ್ಲಿನ ಪ್ರಮುಖ ಭಾಗ ಮದರ್‌ ಬೋರ್ಡ್‌ಗೂ ಆರು ತಿಂಗಳು ವಾರೆಂಟಿ ನೀಡಲಾಗುತ್ತದೆ. ಈ ಎಲ್ಲ ಸಲಕರಣೆಗಳ ನಿರ್ವಹಣೆ ಸುಲಭವಾಗಿದ್ದು, ಇವೆಲ್ಲವೂ 500 ಗ್ರಾಂನಿಂದ 3 ಕೆಜಿಯಷ್ಟು ಮಾತ್ರ ತೂಕ ಹೊಂದಿವೆ. ಪಂಪ್‌ಸೆಟ್‌ ಸಂರಕ್ಷಣೆಯ ಬೇಸಿಕ್‌ ಮಾಡೆಲ್‌ ಸಲಕರಣೆ ಬಗ್ಗೆ ಹಲವು ರೈತರು ಮೆಚ್ಚುಗೆ ಹಾಗೂ ತೃಪ್ತಿ ವ್ಯಕ್ತಪಡಿಸಿದ್ದು, ಅನೇಕರಿಂದ ಬೇಡಿಕೆಯೂ ಬಂದಿದೆ. ರೈತರಿಗೆ ಪ್ರಯೋಜನಾಕಾರಿ ಪಂಪ್‌ಸೆಟ್‌ ಸಂರಕ್ಷಣೆ ಸಲಕರಣೆ ಅಭಿವೃದ್ಧಿಪಡಿಸಿರುವ ವಿಕಾಸ ಜಮಖಂಡಿ ನವೋದ್ಯಮಿಯಾಗಿ ಉದ್ಯಮ ರಂಗಕ್ಕೆ ಮುಂದಡಿ ಇರಿಸಲು, ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ ಅಪ್ಸ್‌ ಸಹಕಾರ ನೀಡಲು ಮುಂದಾಗಿದೆ. 

ನಾನು ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆಗಿದ್ದರೂ ರೈತರ ಮಗನಾಗಿ ರೈತರ ಸಂಕಷ್ಟ ಏನೆಂದು ಅರಿತಿದ್ದೇನೆ. ವಿದ್ಯುತ್‌ ಸಮಸ್ಯೆಯಿಂದಾಗಿ ಪಂಪ್‌ಸೆಟ್‌ಗಳು ಹಾನಿಗೀಡಾಗುವುದು, ಪ್ರಮುಖ ಸಂದರ್ಭದಲ್ಲಿ ಬೆಳೆಗಳಿಗೆ ನೀರಿಲ್ಲದೆ ರೈತರು ಪರದಾಡುವುದನ್ನು ಕಂಡು ಇದಕ್ಕೇನಾದರೂ ಪರಿಹಾರ ಹುಡುಕಬೇಕೆಂಬ ಛಲವೇ ಈ ಸಲಕರಣೆಗಳಾಗಿವೆ. ವರ್ಷದೊಳಗೆ ರಾಜ್ಯದ ಎಲ್ಲೆಡೆ ಹಾಗೂ ಸದರನ್‌ ಮಹಾರಾಷ್ಟ್ರದಲ್ಲಿ, ಮುಂದಿನ ಐದು ವರ್ಷದಲ್ಲಿ ದೇಶಾದ್ಯಂತ ಈ ಸಲಕರಣೆಗಳು ದೊರೆಯುವಂತೆ ಮಾಡುವ ಯೋಜನೆ ಹೊಂದಿರುವೆ.
. ವಿಕಾಸ ಆನಂದ ಜಮಖಂಡಿ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next