ಕಾಸರಗೋಡು : ಕುಂಬಳೆ ರೈಲು ನಿಲ್ದಾಣವನ್ನು ರೈಲ್ವೇ ಟರ್ಮಿನಲ್ ಆಗಿ ಭಡ್ತಿಗೊಳಿಸುವ ಕೇಂದ್ರ ಸರಕಾರದ ತೀರ್ಮಾನದಿಂದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಹೆಬ್ಟಾಗಿಲು ಆಗಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆಯು ಅಭಿಪ್ರಾಯಪಟ್ಟಿದೆ.
ಕುಂಬಳೆ ರೈಲು ನಿಲ್ದಾಣವನ್ನು ಭಡ್ತಿ ಗೊಳಿಸಲು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹಲವು ಬಾರಿ ರೈಲ್ವೇ ಸಚಿವರಿಗೂ ರೈಲ್ವೇ ಅಧಿಕಾರಿಗಳಿಗೂ ಮನವಿ ಸಲ್ಲಿಸಿತ್ತು. ಅಗತ್ಯವುಳ್ಳ ಸ್ಥಳ ಕುಂಬಳೆಯಲ್ಲಿದೆ ಎಂದು ಮನವಿಯಲ್ಲಿ ಬೊಟ್ಟು ಮಾಡಿತ್ತು. ಕುಂಬಳೆ ರೈಲು ನಿಲ್ದಾಣಕ್ಕೆ 38 ಎಕರೆಗಳಿಗೂ ಅಧಿಕ ಸ್ಥಳವಿದೆ.
ಕುಂಬಳೆಯಲ್ಲಿ ರೈಲ್ವೇ ಟರ್ಮಿನಲ್ ನಿರ್ಮಿಸುವ ಕೇಂದ್ರ ಸರಕಾರದ ತೀರ್ಮಾನವನ್ನು ಬಿಜೆಪಿ ಸ್ವಾಗತಿಸಿದೆ. ಉತ್ತರ ಮಲಬಾರ್ ರೈಲ್ವೇ ಕನಸುಗಳು ಅವಗಣನೆಗೆ ತುತ್ತಾಗಿದ್ದವು. ನೂತನ ರೈಲುಗಳೂ, ಇತರ ಸೌಕರ್ಯಗಳು ಕನಸಾಗಿತ್ತು. ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಹಲವು ಅಂಡರ್ ಬ್ರಿಡ್ಜ್ ಮತ್ತು ಇತರ ಸೌಕರ್ಯಗಳು ನಿರ್ಮಾಣವಾಗಿವೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಭಿಪ್ರಾಯಪಟ್ಟಿದೆ.
ಸಭೆಯಲ್ಲಿ ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾ ಧ್ಯಕ್ಷ ಕೆ. ವಿನೋದನ್, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಕುಂಬಳೆ, ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಮಂಗಲ್ಪಾಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಕುಂಬಳೆ ಪಂ. ಬಿಜೆಪಿ ಅಧ್ಯಕ್ಷ ಶಂಕರ್ ಆಳ್ವ, ಪ್ರಧಾನ ಕಾರ್ಯದರ್ಶಿ ಸುಧಾಕರ ಕಾಮತ್, ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಎಂ. ಆದರ್ಶ್, ಮಂಡಲ ಕಾರ್ಯದರ್ಶಿ ಮಣಿಕಂಠ ರೈ ಮಾತನಾಡಿದರು.