Advertisement

ನದಿ ನೀರೆತ್ತಿದ್ರೆ ಪಂಪ್‌ಸೆಟ್‌ ವಶಕ್ಕೆ

12:37 PM Mar 25, 2017 | Team Udayavani |

ದಾವಣಗೆರೆ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹರಿಸಿರುವ ನೀರನ್ನ ಪಂಪ್‌ಸೆಟ್‌ ಮೂಲಕ ಎತ್ತುವುದ ತಡೆಗೆ ನದಿ ದಡದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಜಿಲ್ಲಾಡಳಿತ, ಈ ಭಾಗದಲ್ಲಿರುವ ಹಳ್ಳಿಗಳಿಗೆ 10 ದಿನಗಳ ತ್ರಿಫೇಸ್‌ ವಿದ್ಯುತ್‌ ಸರಬರಾಜು ನಿಲುಗಡೆಗೆ ನಿರ್ಧರಿಸಿದೆ. 

Advertisement

ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಬಳ್ಳಾರಿ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಲಾಶಯದಿಂದ 3 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗಿದೆ.

ಮುಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಮನಗಂಡು ಈ ಕ್ರಮ ವಹಿಸಲಾಗಿದೆ ಎಂದರು. ನದಿಪಾತ್ರದ ಎಲ್ಲಾ ಕಡೆಗಳಲ್ಲಿ ಬಂದೋಬಸ್ತ್ ಕೈಗೊಳ್ಳಲಾಗುವುದು. ಅಧಿಕಾರಿಗಳ ತಂಡ ರಚಿಸಲಾಗಿದ್ದು, ನದಿಪಾತ್ರದಲ್ಲಿ ಈ ತಂಡ ನಿರಂತರ ಗಸ್ತು ತಿರುಗುತ್ತದೆ. ರೈತರು ಪಂಪ್‌ಸೆಟ್‌ ಅಳವಡಿಸಿದ್ದು ಕಂಡುಬಂದರೆ ತಕ್ಷಣ ತಂಡ ಅದನ್ನು ವಶಕ್ಕೆ ತೆಗೆದುಕೊಳ್ಳಲಿದೆ. 

ಈ ಹಿಂದೆ ನದಿಗೆ ನೀರು ಬಿಟ್ಟಾಗ ಒಂದೇ ಕಡೆ 300-400 ಪಂಪ್‌ಸೆಟ್‌ಗಳನ್ನು ಅಳವಡಿಸಿ, ನೀರೆತ್ತುವುದನ್ನು ಗಮನಿಸಿದ್ದೇನೆ. ಈ ಬಾರಿ ಆ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದೇವೆ ಎಂದು ಅವರು ಹೇಳಿದರು. ಈ ಹಿಂದೆ ಮೈಲಾರ ಲಿಂಗೇಶ್ವರ ಜಾತ್ರೆಗೆಂದು 1000 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿತ್ತು.

ಆದರೆ, ಆ ನೀರು ಹರಿಹರದವರೆಗೆ ಹರಿದು ಬರುವಷ್ಟರಲ್ಲಿ ರೈತರು ಪಂಪ್‌ಸೆಟ್‌ ಮೂಲಕ ತಮ್ಮ ಹೊಲಗಳಿಗೆ ಹರಿಸಿಕೊಂಡರು. ಕೊನೆಗೆ ಜಲಾಶಯದಿಂದ ಮತ್ತೆ 2000 ಕ್ಯುಸೆಕ್‌ ನೀರು ಬಿಟ್ಟು ಹರಿಸಿ, ಮೈಲಾರ ತಲುಪುವಂತೆ ಮಾಡಲಾಯಿತು. ಇದೀಗ ಮತ್ತೆ ಅಂತಹ ಸಮಸ್ಯೆ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ಇಂತಹ ಕ್ರಮ ಕೈಗೊಳ್ಳಲಾಗಿದೆ. 

Advertisement

ಸದ್ಯ ಭದ್ರಾ ಜಲಾಶಯದಲ್ಲಿ 126 ಅಡಿ ಅಂದರೆ 19.4 ಟಿಎಂಸಿ ಅಡಿ ನೀರಿದೆ. ಈ ಪೈಕಿ 13.82 ಟಿಎಂಸಿ ಅಡಿ ನೀರು ಬಳಸಲು ಬರುವುದಿಲ್ಲ. ಉಳಿದ 5.63 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಸಿಗಲಿದೆ. ಕೈಗಾರಿಕಾ ಉದ್ದೇಶಕ್ಕೆ ಇರಿಸಲಾಗಿದ್ದ 1.56 ಟಿಎಂಸಿ ಅಡಿ ನೀರನ್ನು ಸಹ ಕುಡಿಯುವ ಸಲುವಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 

ಜಲಾಶಯದಿಂದ 3 ಟಿಎಂಸಿ ಅಡಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಉಳಿದ ನೀರನ್ನು ಕಾಲುವೆ ಮೂಲಕ ಹರಿಸಲಾಗುತ್ತದೆ. ಅಲ್ಲಿಗೆ ಸಂಪೂರ್ಣ ಜಲಾಶಯ ಖಾಲಿ ಆಗಲಿದೆ. ಇನ್ನೂ ಮೂರೂವರೆ ತಿಂಗಳ ಕಾಲ ನಾಲ್ಕು ಜಿಲ್ಲೆಯ ಜನರಿಗೆ ನೀರು ಒದಗಿಸುವುದು ಅನಿವಾರ್ಯ ಇದೆ. ರೈತರು, ಸಾರ್ವಜನಿಕರು ಪರಿಸ್ಥಿತಿ ಅರ್ಥಮಾಡಿಕೊಂಡು ಸಹಕರಿಸಬೇಕೆಂದು ಎಂದು ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next