Advertisement

ಹನಿ ನೀರಿಲ್ಲದಿದ್ದರೂ ಪಂಪ್‌ ಮೋಟರ್‌ ಕೊಟ್ರು!

09:47 PM Jun 21, 2019 | Lakshmi GovindaRaj |

ನಂಜನಗೂಡು: ವಿವಿಧ ನಿಗಮಗಳಿಂದ ರೈತರ ಜಮೀನುಗಳಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಹನಿ ನೀರು ಬಾರದಿದ್ದರೂ ನೀರು ಬಂದಿದೆ ಎಂದು ಅಧಿಕಾರಿಗಳು ಶಿಫಾರಸು ಮಾಡಿರುವ ವಿಚಾರವನ್ನು ತಿಳಿದು ಶಾಸಕದ್ವಯರು ಕೆಂಡಾಮಂಡಲರಾದರು.

Advertisement

ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ ಹಾಗೂ ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಬಹಿರಂಗವಾಯಿತು.

ತಾಲೂಕಿನಲ್ಲಿ ಅಂಬೇಡ್ಕರ್‌, ವಾಲ್ಮೀಕಿ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಸಾಲದ ಯೋಜನೆಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಮಂಜೂರಾಗಿದ್ದ ಕೊಳವೆ ಬಾವಿಗಳಲ್ಲಿ ನೀರೇ ಬಾರದಿದ್ದರೂ ನೀರಿದೆ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಜಿಪಂ ಸದಸ್ಯರಾದ ಸದಾನಂದ, ದಯಾನಂದ ಬಹಿರಂಗ ಪಡಿಸಿದಾಗ ಶಾಸಕದ್ವಯರು ಬೆಚ್ಚಿ ಬಿದ್ದರು.

ಯೋಜನೆಗಳ ವೈಫ‌ಲ್ಯ: ಹಿಂದುಳಿದವರು ಮುಂದೆ ಬರಲಿ ಎಂಬ ಸದುದ್ದೇಶದಿಂದ ಸರ್ಕಾರ ನೀಡುತ್ತಿರುವ ಸಾಲ ಯೋಜನೆಗಳು ಅಧಿಕಾರಿಗಳ ಪಿತೂರಿಯಿಂದಾಗಿ ಹಳ್ಳ ಹಿಡಿಯುತ್ತಿವೆ. ಇತ್ತ ರೈತರ ಜಮೀನಿಗೆ ನೀರೂ ಇಲ್ಲಾ ಸರ್ಕಾರದ ಹಣವೂ ಪೋಲಾಗುತ್ತಿದೆ ಎಂದು ಜಿಪಂ ಸದಸ್ಯರು ಕಿಡಿಕಾರಿದರು.

ಕಮಿಷನ್‌: ಕೊಳವೆ ಬಾವಿಗಳು ವಿಫ‌ಲವಾಗಿದ್ದರೂ ನೀರಿದೆ ಎಂದು ಹೇಗೆ ಹೇಳಿದ್ದಿರಿ, ಈ ವ್ಯವಹಾರದ ಹಿಂದೆ ಎಷ್ಟು ಪರ್ಸೆಂಟ್‌ ಕಮಿಷನ್‌ ಪಡೆದಿದ್ದೀರಾ ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಸಮರ್ಥನೆ: ಕೊಳವೆ ಬಾವಿಗಳು ವಿಫ‌ಲವಾಗಿವೆ ಎಂದು ದಾಖಲಿಸಿದರೆ ಬಾವಿ ತೆಗೆದ ರೈತನಿಗೆ ನಷ್ಟವಾಗಲಿದೆ. ಹೀಗಾಗಿ ಅವರ ನಷ್ಟ ತಪ್ಪಿಸಲು ಈ ರೀತಿ ಶಿಫಾರಸು ಮಾಡಲಾಗಿದೆ ಎಂದು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ವಡ್ಡರ್‌ ಸಮರ್ಥಿಸಿಕೊಂಡರು.

ಇದರಿಂದ ಸಿಟ್ಟಾದ ಶಾಸಕರು, ಈ ಕೊಳಬೆಬಾವಿ ಅವ್ಯವಹಾರವನ್ನು ಲೋಕಾಯುಕ್ತಕ್ಕೆ ವಹಿಸಲಾಗುವುದು ಎಂದರು. ಸಭೆಯ ಪ್ರಾರಂಭದಲ್ಲೇ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲಿಸಲು ಪ್ರಾರಂಭಿಸಿದ ಇಬ್ಬರು ಶಾಸಕರಿಗೆ ಇಲಾಖೆಯ ಅವ್ಯವಸ್ಥೆ ಬಹಿರಂಗವಾಯಿತು.

ಆರೋಗ್ಯ ಇಲಾಖೆಗೇ ಅನಾರೋಗ್ಯ: ತಾಲೂಕಿನ ಆರೋಗ್ಯದ ಹೊಣೆ ಹೊತ್ತ ಇಲಾಖೆಯಲ್ಲಿ ಸ್ವತ್ಛತೆ ಮಾಡಲು ಸಿಬ್ಬಂದಿಗಳೇ ಇಲ್ಲ, ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ, ರೋಗಿಗಳಿಗೆ ಚಿಕಿತ್ಸೆ ನೀಡಲು ಸಮರ್ಪಕವಾಗಿ ವೈದ್ಯರು ಹಾಗೂ ನರ್ಸ್‌ಗಳಿಲ್ಲ. ಹೀಗಾಗಿ ಜನರ ರೋಗ ವಾಸಿ ಮಾಡಬೇಕಾದ ಇಲಾಖೆಗೆ ಅನಾರೋಗ್ಯ ಹಿಡಿದಿದೆ ಎಂದು ಜನಪ್ರತಿನಿಧಿಗಳು ದೂರಿದರು.

ಡೆಂಘೀ ಜ್ವರ: ನಕಲಿ ವೈದ್ಯರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸ್ವತಃ ವೈದ್ಯರಾದ ಡಾ. ಯತೀಂದ್ರ ಪ್ರಶ್ನಿಸಿದಾಗ, ಕೋಟೆಯಲ್ಲಿ ನಕಲಿ ವೈದ್ಯರ ಮೇಲೆ ಕ್ರಮ ಜರುಗಿಸಲಾಗುತ್ತಿದೆ. ಅದು ಪೂರ್ಣಗೊಂಡ ನಂತರ ನಂಜನಗೂಡಿನಲ್ಲಿ ಗಮನ ಹರಿಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಕಲಾವತಿ ತಿಳಿಸಿದರು. ತಾಲೂಕಿನಲ್ಲಿ ಡೆಂಘೀ ಹಾವಳಿ ಇಲ್ಲ ಎಂದಾಗ, ಸದಸ್ಯರು ಪ್ರತಿಕ್ರಿಯಿಸಿ, ಇದು ಸುಳ್ಳು, ಸಾಕಷ್ಟು ಕಡೆ ಡೆಂಘೀ ಜ್ವರ ಹರಿಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪಾಳು ಬಂಗಲೆಯಾದ ಆಸ್ಪತ್ರೆ: ತಗಡೂರು ಸಾರ್ವಜನಿಕ ಆಸ್ಪತ್ರೆ ಸ್ವತ್ಛತೆಯನ್ನು ಕಂಡು ಎಷ್ಟೋ ವರ್ಷವಾಗಿದೆ. ಪಾಳು ಬಂಗಲೆಯಂತೆ ಕಾಣುತ್ತಿದೆ. ನಿಮ್ಮಲ್ಲಿ ಸ್ವತ್ಛತೆಗೆ ಸಿಬ್ಬಂದಿ ಇಲ್ಲವೇ ಎಂದು ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ ಪ್ರಶ್ನಿಸಿದರು. ಸಿಬ್ಬಂದಿ ಇಲ್ಲದಿದ್ದರೆ ನಮಗೆ ಲಿಖೀತವಾಗಿ ತಿಳಿಸಿದರೆ ತಾಪಂ ಅಥವಾ ಗ್ರಾಪಂನಿಂದ ಆವರಣವನ್ನು ಸ್ವತ್ಛಗೊಳಿಸಲಾಗುವುದು ಎಂದು ಹೇಳಿದರು.

ಯಂತ್ರ ಖರೀದಿಗೆ ಹಣವಿಲ್ಲ: ಜನ್ಮ ಹಾಗೂ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸುವುದೇಕೆ ಎಂಬ ಶಾಸಕ ಹರ್ಷವರ್ಧನ್‌ ಪ್ರಶ್ನೆಗೆ ಪ್ರಮಾಣ ಪತ್ರ ನೀಡಲು ಯಂತ್ರವೇ ಇಲ್ಲ. ಅದನ್ನು ಖರೀದಿಸಲು ಅನುದಾನವೂ ಇಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಘಟಕಗಳಿದ್ದರೂ ಶುದ್ಧ ನೀರಿಲ್ಲ: ತಾಲೂಕಿನ ಶುದ್ಧ ನೀರಿನ ಘಟಕಗಳು ಎರಡು ವರ್ಷಗಳಾದರೂ ಆರಂಭವೇ ಆಗಿಲ್ಲ. ಪ್ರಾರಂಭವಾಗಿರುವ ಕೆಲ ಘಟಕಗಳಿಂದ ಒಂದೂ ದಿನವೂ ನೀರು ಬಂದಿಲ್ಲ ಎಂದಾಗ ರಾಜ್ಯ ಭೂಸೇನಾ ನಿಗಮದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಘಟಕಗಳನ್ನು ಶೀಘ್ರ ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಶಿಕ್ಷಣ, ಲೋಕೋಪಯೋಗಿ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಉಪಾಧ್ಯಕ್ಷ ಗೋಂದರಾಜು, ಜಿಪಂ ಸದಸ್ಯರಾದ ಮಧು ಸುಬ್ಬಣ್ಣ , ಮಂಗಳಾ, ಲತಾ, ಗುರುಸ್ವಾಮಿ, ತಹಶೀಲ್ದಾರ್‌ ಮಹೇಶ್‌ ಕುಮಾರ್‌, ತಾಪಂ ಇಒ ಅರಸು ಇತರರಿದ್ದರು.

ಪ್ರತಿ ಬೋರ್‌ವೆಲ್‌ಗ‌ೂ 20 ಸಾವಿರ ರೂ.ಲಂಚ: ತಾಲೂಕಿನಲ್ಲಿ ಈ ಬಾರಿ ಅಂಬೇಡ್ಕರ್‌, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮದಿಂದ 500ಕ್ಕೂ ಅಧಿಕ ಕೊಳವೆ ಬಾವಿಗಳನ್ನು ಮಂಜೂರು ಮಾಡಲಾಗಿದೆ. ಪ್ರತಿ ಕೊಳವೆ ಬಾವಿಗೂ ತಲಾ 20 ಸಾವಿರ ರೂ.ಗೂ ಹೆಚ್ಚು ಲಂಚ ನೀಡಲಾಗಿದೆ ಎಂದು ಸದಸ್ಯರು ಆರೋಪಿಸಿದರು. ಇದರಿಂದ ಕುಪಿತರಾದ ಶಾಸಕ ಹರ್ಷವರ್ಧನ್‌ ಹಾಗೂ ಡಾ.ಯತೀಂದ್ರ, ಎಷ್ಟು ಕೊಳವೆಬಾವಿಗಳಿಗೆ ಸುಳ್ಳು ಸರ್ಟಿಫಿಕೇಟ್‌ ನೀಡಿದ್ದೀರಿ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಅವ್ಯವಹಾರವನ್ನು ಲೋಕಾಯುಕ್ತದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಶ್ರೀಕಂಠೇಶ್ವರ ದೇಗುಲದಲ್ಲಿ 100 ಕೊಠಡಿ ಗೃಹ, ಬೆಳ್ಳಿ ರಥ: ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ 100 ಕೊಠಡಿಗಳ ಅತಿಥಿ ಗೃಹ ಹಾಗೂ ಬೆಳ್ಳಿ ರಥ ನಿರ್ಮಿಸಲಾಗುವುದು ಎಂದು ಶಾಸಕ ಹರ್ಷವರ್ಧನ ತಿಳಿಸಿದರು. ನಮ್ಮೆಲ್ಲರ ಆರಾಧ್ಯ ದೈವ ಶ್ರೀಕಂಠೇಶ‌Ìರನ ಭಕ್ತರಿಗಾಗಿ ಸದ್ಯದಲ್ಲೇ 100 ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದೆ. ಜೊತೆಗೆ ದೇವರಗೆ ಬೆಳ್ಳಿ ರಥ ನಿರ್ಮಿಸಲಾಗುವುದು ಎಂದು ಶಾಸಕ ಹರ್ಷವರ್ಧನ ಭರವಸೆ ನೀಡಿದರು.

ಅತಿಥಿ ಗೃಹ ಹಾಗೂ ಬೆಳ್ಳಿ ರಥದ ನಿರ್ಮಾಣದ ಅನುಮತಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಾವು ಲಿಖೀತವಾಗಿ ಈಗಾಗಲೇ ಮನವಿ ಮಾಡಿದ್ದು, ಅವರು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯದಲ್ಲೇ ಅನುಮತಿ ನೀಡಲಿದ್ದಾರೆ ಎಂದರು. ದೇವಾಲಯದ ಹಣ ಹಾಗೂ ಬೆಳ್ಳಿಯಿಂದಲೇ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದ ಅವರು, ರಾಜ್ಯ ಇತರೆ ಕಡೆಗಳಲ್ಲಿರುವ ಬೆಳ್ಳಿ ರಥಗಳ ಮಾಹಿತಿಯನ್ನು ಈಗಾಗಲೇ ಕ್ರೋಢೀಕರಿಸಲಾಗಿದ್ದು , ಅತ್ಯಂತ ಆಕರ್ಷಿತವಾಗಿ ರಥ ನಿರ್ಮಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next