ಹೊಸದಿಲ್ಲಿ: 2019ರ ಫೆಬ್ರವರಿಯಲ್ಲಿ ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನಗಳ ಮೇಲೆ ನಡೆದ ಭೀಕರ ಪುಲ್ವಾಮ ದಾಳಿಯ ಆರೋಪ ಪಟ್ಟಿಯನ್ನು ಇಂದು ಸಲ್ಲಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳವು ಇಂದು ಸಲ್ಲಿಸಿರುವ ಈ ಅರೋಪ ಪಟ್ಟಿಯಲ್ಲಿ ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜ್ಹರ್, ಆತನ ಸಹೋದರ ಅಬ್ದುಲ್ ರವೂಫ್ ಅಸ್ಗರ್, ಮೃತಪಟ್ಟಿರುವ ಉಗ್ರ ಮಹಮ್ಮದ್ ಉಮ್ಮರ್ ಫಾರೂಖ್, ಆತ್ಮಾಹುತಿ ಬಾಂಬರ್ ಅದಿಲ್ ಅಹಮ್ಮದ್ ದಾರ್ ಮತ್ತು ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಇನ್ನೂ ಹಲವು ಉಗ್ರರ ಹೆಸರುಗಳನ್ನು NIA ತನ್ನ ಆರೋಪಪಟ್ಟಿಯಲ್ಲಿ ನಮೂದಿಸಿದೆ.
ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಈಗಾಗಲೇ ಆರು ಜನರನ್ನು ಬಂಧಿಸಿದ್ದು ಅವರ ಹೆಸರುಗಳನ್ನೂ ಸಹ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ವಿಸ್ತೃತ ಆರೋಪ ಪಟ್ಟಿಯನ್ನು ಜಮ್ಮುವಿನಲ್ಲಿರುವ NIA ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಭೀಕರ ಆತ್ಮಾಹುತಿ ದಾಳಿಯನ್ನು ಪಾಕಿಸ್ತಾನವು ಹೇಗೆ ಸಂಚು ಮಾಡಿ ಪುಲ್ವಾಮದಲ್ಲಿ ಅದನ್ನು ಕಾರ್ಯರೂಪಕ್ಕೆ ತಂದಿತು ಎನ್ನುವ ಇಂಚಿಂಚೂ ವಿವರಗಳನ್ನು ಈ 5,000 ಪುಟಗಳ ಆರೋಪ ಪಟ್ಟಿಯಲ್ಲಿ ನೀಡಲಾಗಿದೆ ಎಂದು ಝೀನ್ಯೂಸ್ ವರದಿ ಮಾಡಿದೆ.
ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಾಶ್ಮೀರದ ಪುಲ್ವಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಆತ್ಮಾಹುತಿ ದಾಳಿ ನಡೆದಿತ್ತು. ಕಾರಿನ ತುಂಬ ಸ್ಪೋಟಕಗಳನ್ನು ತುಂಬಿಸಿಕೊಂಡಿದ್ದ ಆತ್ಮಾಹುತಿ ದಾಳಿಕೋರ ಭಾರತೀಯ ಸೇನೆಯ ಯೋಧರು ಸಾಗುತ್ತಿದ್ದ ಸೇನಾ ಬಸ್ಸಿಗೆ ತನ್ನ ಕಾರನ್ನು ಅಪ್ಪಳಿಸುವ ಮೂಲಕ ಈ ಭೀಕರ ದಾಳಿ ಸಂಭವಿಸಿತ್ತು.