ಬಾರ್ಮರ್/ಪಠಾಣ್: ನಮ್ಮಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಪದೇ ಪದೆ ಬೆದರಿಸುವ ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚುರುಕು ಮುಟ್ಟಿಸಿದ್ದಾರೆ. ಭಾರತದಲ್ಲಿಯೂ ಪ್ರಬಲ ಪರಮಾಣು ಅಸ್ತ್ರಗಳಿವೆ. ನಮ್ಮಲ್ಲಿ ಇರುವುದು ದೀಪಾವಳಿ ಸಂದರ್ಭದಲ್ಲಿನ ಬಳಕೆಗೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ರಾಜಸ್ಥಾನದ ಬಾರ್ಮರ್‌ನಲ್ಲಿ ರವಿವಾರ ಪ್ರಚಾರ ನಡೆಸಿದ ವೇಳೆ ಅವರು ಈ ಅಂಶ ಪ್ರಸ್ತಾವ ಮಾಡಿದರು.
‘ಭಾರತ ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನದ ಬೆದರಿಕೆಯ ಮಾತುಗಳಿಗೆ ಮಣಿಯುವುದನ್ನು ಬಿಟ್ಟುಬಿಟ್ಟಿದೆ. ಪ್ರತಿ ಬಾರಿಯೂ ನಮ್ಮಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ. ಅದನ್ನು ಪ್ರಯೋಗಿಸುತ್ತೇವೆ ಎನ್ನುತ್ತಿದೆ ಪಾಕಿಸ್ಥಾನ. ನಮ್ಮಲ್ಲಿಯೂ ಅದು ಇದೆ. ಅದನ್ನೇನು ದೀಪಾವಳಿ ಸಂದರ್ಭಕ್ಕಾಗಿ ಕಾಯ್ದಿರಿಸಿದ್ದು ಅಲ್ಲ’ ಎಂದು ಹೇಳಿದರು.
ಗುಜರಾತ್‌ನ ಪಠಾಣ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಬಾಲಾಕೋಟ್ ದಾಳಿ ಬಳಿಕದ ಸಂಘರ್ಷದ ವೇಳೆ ಪಾಕಿಸ್ಥಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಬಿಡುಗಡೆ ಮಾಡದೇ ಇದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಪಾಕ್‌ಗೆ ಎಚ್ಚರಿಸಿದ್ದೆ. ಪ್ರಧಾನಿ ಹುದ್ದೆ ಹೋದರೂ ಚಿಂತೆಯಿಲ್ಲ. ನಾನು ಬದುಕಿರಬೇಕು, ಇಲ್ಲವೇ ಉಗ್ರರು ಬದುಕಿರಬೇಕು ಎಂದು ನಿರ್ಧರಿಸಿದ್ದೆ ಎಂದಿದ್ದಾರೆ. ಭಾರತದ ಎಚ್ಚರಿಕೆಗೆ ಹೆದರಿ ಅಭಿನಂದನ್‌ರನ್ನು ಪಾಕ್ ಬಿಡುಗಡೆ ಮಾಡಿತು ಎಂದೂ ಹೇಳಿದರು.
ಮೋದಿ 12 ಕ್ಷಿಪಣಿಗಳನ್ನು ಸಿದ್ಧಗೊಳಿಸಿದ್ದಾರೆ, ದಾಳಿ ನಡೆಸಿದರೆ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದರು. ಇದಾದ ಬಳಿಕ ಪಾಕಿಸ್ಥಾನವು ಪೈಲಟ್‌ನನ್ನು ವಾಪಸು ಕಳುಹಿಸುವ ಘೋಷಣೆ ಮಾಡಿತು ಎಂದಿದ್ದಾರೆ.
ಚಿನ್ನದಂಥ ಅವಕಾಶ ಕೈಬಿಟ್ಟಿದ್ದ ಕಾಂಗ್ರೆಸ್
1971ರ ಯುದ್ಧದ ಸಂದರ್ಭ ಪಾಕಿಸ್ಥಾನದ ಸಾವಿರಾರು ಸೈನಿಕರು ಭಾರತದ ವಶದಲ್ಲಿದ್ದರು. ಈ ಸಂದರ್ಭ ಕಾಶ್ಮೀರ ಸಮಸ್ಯೆಯನ್ನು ಅತ್ಯಂತ ಸುಲಭದಲ್ಲಿ ಪರಿಹರಿಸಬಹುದಿತ್ತು. ಆದರೆ ಅಂದಿನ ಕಾಂಗ್ರೆಸ್ ಸರಕಾರ ಚಿನ್ನದಂತಹ ಅವಕಾಶವನ್ನು ಕೈ ಚೆಲ್ಲಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.