ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ಮಂಗಳವಾರ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ನಾಶ ಮಾಡಿ, ಉಗ್ರರ ಕಮಾಂಡರ್ ಗಳನ್ನು ಹತ್ಯೆಗೈದ ಘಟನೆ ಬೆನ್ನಲ್ಲೇ ಪಾಕಿಸ್ತಾನ ಸಂಸತ್ ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಪಾಕ್ ಸಂಸತ್ ತುರ್ತು ಕಲಾಪ ಮಂಗಳವಾರ ಆರಂಭವಾಗುತ್ತಿದ್ದಂತೆಯೇ ಪಾಕ್ ಪ್ರಧಾನಿ ವಿರುದ್ಧ ಶೇಮ್, ಶೇಮ್ ಎಂದು ಘೋಷಣೆ ಕೂಗಿದ್ದಾರೆ. ಈ ದಾಳಿ ನಮೆಗೆಲ್ಲಾ ಭಾರೀ ಅವಮಾನ ತಂದಿದೆ. ಕಳೆದ 35 ವರ್ಷಗಳಲ್ಲಿಯೇ ಪಾಕ್ ಮೇಲೆ ಈ ರೀತಿಯ ದಾಳಿ ನಡೆದಿರಲಿಲ್ಲ ಎಂದು ಪಾಕ್ ಪ್ರಧಾನಿ ಖಾನ್ ಅವರನ್ನು ತರಾಟೆ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.
ಪಾಕಿಸ್ತಾನದ ಮೇಲೆ ಭಾರತ ವಾಯುಸೇನೆ ದಾಳಿ ನಡೆಸಿರುವುದಕ್ಕೆ ಪ್ರತೀಯಾಗಿ ಪಾಕಿಸ್ತಾನ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಪಾಕ್ ಸಂಸದರು ಆಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ತುರ್ತು ಸಭೆ ಅಂತ್ಯಗೊಂಡಿದೆ ಎಂದು ವರದಿ ಹೇಳಿದೆ.