Advertisement

ಉಗ್ರರ ದಾಳಿ ವಿರುದ್ಧ  ಸಿಡಿದೆದ್ದ ಭಾರತ

12:30 AM Feb 16, 2019 | |

ಹೊಸದಿಲ್ಲಿ: ಒಂದೆಡೆ ತನ್ನ ವೀರ ಕಂದಮ್ಮಗಳನ್ನು ಕಳೆದುಕೊಂಡ ಭಾರತ ಮಾತೆ ಕಣ್ಣೀರಿಡುತ್ತಿದ್ದರೆ, ಮತ್ತೂಂದೆಡೆ ಯೋಧರ ನೆತ್ತರು ಹರಿದಿರುವುದನ್ನು ನೋಡಿರುವ ದೇಶವಾಸಿಗಳ ರಕ್ತ ಕುದಿಯ ತೊಡಗಿದೆ. ಯಾರೂ ಕ್ಷಮಿಸಲಾಗದಂಥ ಪಾಪದ ಕೃತ್ಯವನ್ನು ಎಸಗಿರುವಂಥ ಪಾಕಿಸ್ಥಾನದ ವಿರುದ್ಧ ಪ್ರತೀಕಾರ ತೀರಿಸಲೇಬೇಕು ಎಂಬ ಒಕ್ಕೊರೊಲ ಆಗ್ರಹ ಎಲ್ಲೆಡೆಯಿಂದ ಕೇಳಿ ಬಂದಿದೆ. ಜನರ ಆಕ್ರೋಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಸ್ಪಂದಿಸಿದ್ದು, ಯೋಧರ ಸಾವಿಗೆ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ಗುಡುಗಿದ್ದು, ಸೇನೆಗೆ ಪರಮಾಧಿಕಾರ ನೀಡಿರುವುದಾಗಿ ಘೋಷಿಸಿದ್ದಾರೆ.

Advertisement

ಅದರ ಮೊದಲ ಹೆಜ್ಜೆಯಾಗಿ ಪಾಕ್‌ ವಿರುದ್ಧ ಹಲವು ಕಠಿನ ಕ್ರಮಗಳನ್ನು ಅವರು ಘೋಷಿಸಿದ್ದಾರೆ. ಪುಲ್ವಾಮಾದಲ್ಲಿ 44 ಯೋಧರನ್ನು ಹತ್ಯೆಗೈದಂಥ ಹೀನ ಕೃತ್ಯ ನಡೆದ ಬೆನ್ನಿಗೇ ಶುಕ್ರವಾರ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆ ನಡೆಸಿರುವ ಅವರು, ಪಾಕಿಸ್ಥಾನಕ್ಕೆ ನೀಡಲಾದ “ಪರಮಾಪ್ತ ರಾಷ್ಟ್ರ’ ಸ್ಥಾನಮಾನವನ್ನು ವಾಪಸ್‌ ಪಡೆದಿದ್ದಾರೆ. ಭಯೋತ್ಪಾದಕರ ವಿರುದ್ಧ ಪ್ರತೀಕಾರ ತೀರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ರಾಜ ತಾಂತ್ರಿಕ ಮಾರ್ಗಗಳ ಮೂಲಕ ಪಾಕಿ ಸ್ಥಾನವನ್ನು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಏಕಾಂಗಿಯಾಗಿಸುವ ನಿಟ್ಟಿ ನಲ್ಲೂ ಕಠಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದೇಶದ ಪ್ರತಿಯೋರ್ವ ಪ್ರಜೆಯಲ್ಲೂ ಮೂಡಿ ರುವ ಆಕ್ರೋಶ, ನೋವು, ಕಣ್ಣೀರಿಗೆ ಪ್ರತ್ಯುತ್ತರ ನೀಡಲು ನಾವು ಸಿದ್ಧ ಎಂಬುದನ್ನು ಪ್ರಧಾನಿ ಸಾರಿ ಹೇಳಿದ್ದಾರೆ.

ಸೇನೆಗೆ ಸಂಪೂರ್ಣ ಅಧಿಕಾರ
ಶುಕ್ರವಾರ ತೀವ್ರ ಭಾವುಕರಾಗಿ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮಾ ದಾಳಿ ವಿರುದ್ಧವಾಗಿ ಪ್ರತೀಕಾರ ಕೈಗೊಳ್ಳುವ ಪರಮಾಧಿಕಾರವನ್ನು ಸೇನೆಯ ತೀರ್ಮಾನಕ್ಕೆ ಬಿಟ್ಟಿದ್ದೇನೆ. ಹುತಾತ್ಮ ಯೋಧರ ಬಲಿದಾನ ನಷ್ಟವಾಗುವುದಿಲ್ಲ. ನಮ್ಮ ಯೋಧರ ಮೇಲೆ ದಾಳಿ ನಡೆ ಸುವ ಮೂಲಕ ಪಾಕಿಸ್ಥಾನವು ಅತೀ ದೊಡ್ಡ ತಪ್ಪನ್ನೇ ಮಾಡಿದೆ. ಅವರ ವಿರುದ್ಧ ಪ್ರತೀಕಾರ ತೆಗೆದು ಕೊಳ್ಳುವ ಸಮಯ, ಸ್ಥಳ, ವಿಧಾನ ಎಲ್ಲವನ್ನೂ ಸೇನೆಯೇ ಯೋಚಿಸಿ ತೀರ್ಮಾನಿಸಲಿದೆ ಎಂದು ಪಾಕಿ ಸ್ಥಾನಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದರು. ಪಾಕಿಸ್ಥಾನದ ಹೆಸರೆತ್ತದೆ, ಆ ದೇಶದ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ದೈನಂದಿನ ಖರ್ಚು ವೆಚ್ಚಕ್ಕೂ ಇತರ ರಾಷ್ಟ್ರಗಳ ಮುಂದೆ ಕೈಯೊಡ್ಡಿ ಬೇಡುವ ನೆರೆಯ ದೇಶ, ನಮ್ಮ ವಿರುದ್ಧ ಅತ್ಯಂತ ಹತಾಶೆಯ ರೀತಿಯಲ್ಲಿ ವರ್ತಿಸಿ ದಾಳಿ ನಡೆಸಿದೆ.

ಪುಲ್ವಾಮಾದಲ್ಲಿ ನಡೆಸಿದಂಥ ಕೃತ್ಯಗಳ ಮೂಲಕ ನಮ್ಮನ್ನು ಧೃತಿಗೆಡಿಸಬಹುದು ಎಂದು ಭಾವಿಸಿದ್ದರೆ, ಅದಕ್ಕಿಂತ ಮೂರ್ಖತನ ಬೇರೊಂದಿರಲಿಕ್ಕಿಲ್ಲ’ ಎಂದು ಹೇಳಿದ್ದಾರೆ. ಇದೇ ವೇಳೆ, “ನಮ್ಮನ್ನು ಟೀಕಿಸುವವರೂ ಈ ಸಂದರ್ಭದಲ್ಲಿ ರಾಜಕೀಯ ಮೇಲಾಟವನ್ನು ಬದಿಗಿಟ್ಟು, ಇಂಥ ಭಾವುಕ ಸಮಯದಲ್ಲಿ ಬೆಂಬಲ ನೀಡಬೇಕು’ ಎಂದು ಇತರ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ಕೇಂದ್ರದ ಜತೆ ನಾವು ಎಂದ ರಾಹುಲ್‌
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಕಾಂಗ್ರೆಸ್‌ ಬೆಂಬಲಿಸಿದೆ. ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, “ಇದೊಂದು ಭೀಕರ ದಾಳಿ ಮತ್ತು ಜಿಗುಪ್ಸೆ ಹುಟ್ಟಿಸುವಂಥ ಹೀನ ಕೃತ್ಯ. ಕಾಂಗ್ರೆಸ್‌ ಸಹಿತ ವಿಪಕ್ಷಗಳೆಲ್ಲವೂ ಸರಕಾರದ ಜತೆಗೆ ನಿಲ್ಲಲಿವೆ. ಭಯೋತ್ಪಾದನೆಯು ದೇಶವನ್ನು ವಿಭಜಿಸುತ್ತದೆ. ಆದರೆ ನಾವು ಅಂಥ ಬೆಳವಣಿಗೆಗೆ ಅವಕಾಶ ಮಾಡಿಕೊಡುವುದಿಲ್ಲ. ನಮ್ಮ ಒಗ್ಗಟ್ಟನ್ನು ಮುರಿಯಲು ಉಗ್ರವಾದಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಕಾಂಗ್ರೆಸ್‌ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಸಹಿತ ಪ್ರಮುಖರು ಸಭೆಯಲ್ಲಿದ್ದರು.

Advertisement

ಇಂದು ಸರ್ವಪಕ್ಷ ಸಭೆ
ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಮಿತಿಯು ಶನಿವಾರ ಸರ್ವಪಕ್ಷಗಳ ಸಭೆ ಕರೆದಿದೆ. ಎನ್‌ಡಿಎ ಸರಕಾರ ಬಂದ ಮೇಲೆ ಇದೇ ಮೊದಲ ಬಾರಿಗೆ ಇಂಥ ವಿಚಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಪುಲ್ವಾಮಾ ಉಗ್ರರ ದಾಳಿ ಮತ್ತು ಕಾಶ್ಮೀರದ ಭದ್ರತಾ ಸ್ಥಿತಿಗತಿ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳಿಗೂ ಈ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಸಚಿವ ಜೇಟಿÉ ಮಾಹಿತಿ ನೀಡಿದ್ದಾರೆ.

ಮತ್ತೆ ಬೆನ್ನಿಗೆ ಇರಿದ ಚೀನ
ಪಾಕ್‌ ಪ್ರಾಯೋಜಿತ ಜೈಶ್‌ ಉಗ್ರರು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದರೂ ಚೀನ ಮಾತ್ರ ತನ್ನ ಪಾಕ್‌ ಓಲೈಕೆ ತಂತ್ರವನ್ನು ಬಿಟ್ಟಿಲ್ಲ. ಅದೂ ಅಲ್ಲದೆ ಘಟನೆ ನಡೆದ 24 ಗಂಟೆಗಳ ಅನಂತರ ಖಂಡನೆ ವ್ಯಕ್ತಪಡಿಸಿರುವ ಚೀನ, ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಜಾಗತಿಕ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ತನ್ನ ಹಳೆ ಚಾಳಿ ಮುಂದುವರಿಸಿದೆ. ಅಜರ್‌ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.

ಪಾಕ್‌ ಒಬ್ಬಂಟಿಯಾಗಿಸಲು ಕ್ರಮ
ಪುಲ್ವಾಮಾ ದಾಳಿ ನಡೆಸಿ ನಮ್ಮ ಯೋಧರ ನೆತ್ತರು ಹರಿಸಿದ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಿರುವ ಕೇಂದ್ರ ಸರಕಾರ, ಪಾಕಿಸ್ಥಾನವನ್ನು ಏಕಾಂಗಿಯಾಗಿಸುವ ನಿಟ್ಟಿನಲ್ಲಿ ಶುಕ್ರವಾರ ಕಾರೃಪ್ರವೃತ್ತವಾಗಿದೆ. ಸಂಜೆ ವೇಳೆಗೆ ದಿಲ್ಲಿಯಲ್ಲಿರುವ ಎಲ್ಲ ರಾಷ್ಟ್ರಗಳ ರಾಯಭಾರ ಕಚೇರಿಗಳಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿಕೊಂಡು ಮಾತುಕತೆ ನಡೆಸಲಾಗಿದೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನದ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿ ಪಾಕ್‌ ಕುಕೃತ್ಯದ ಬಗ್ಗೆ ವಿವರಣೆ ನೀಡಲಾಗಿದೆ. ಈ ಎಲ್ಲ ದೇಶಗಳ ಪ್ರತಿನಿಧಿಗಳೂ ಉಗ್ರಗಾಮಿಗಳ ಕೃತ್ಯ ಖಂಡಿಸಿದ್ದಾರೆ.

ಉಗ್ರರನ್ನು  ಸುಮ್ಮನೆ ಬಿಡಬೇಡಿ
ಮಂಡ್ಯ: “ದೇಶ ಕಾಯೋರನ್ನು ಸಾಯಿಸಿಬಿಟ್ರಾ, ಅವರನ್ನು ಸುಮ್ಮನೆ ಬಿಡ ಬೇಡಿ. ಸೈನಿಕರನ್ನು ಯಾವ ರೀತಿ ಬಾಂಬ್‌ ಸ್ಫೋಟಿಸಿ ಸಾಯಿಸಿದರೋ ಹಾಗೆಯೇ ಅವರಿಗೂ ಬಾಂಬ್‌ ಹಾಕಿ ಸಾಯಿಸಿಬಿಡಿ… ಇದು ಮಂಡ್ಯದ ಹುತಾತ್ಮ ಯೋಧ ಎಚ್‌. ಗುರು ಅವರನ್ನು ಕಳೆದುಕೊಂಡ ಪತ್ನಿ ಕಲಾವತಿ ಅವರ ಆಕ್ರೋಶ ಭರಿತ ಮಾತು ಗಳು. ನನಗೆ ನನ್ನ ಗಂಡ ಬೇಕು, ಎಪ್ರಿಲ್‌ನಲ್ಲಿ ನಮ್ಮ ಮದುವೆ ವಾರ್ಷಿಕೋತ್ಸವ ಇತ್ತು. ಅದಕ್ಕೆ ಬರುತ್ತೇನೆ ಎಂದಿದ್ದರು ಎಂದು ಕಣ್ಣೀರಿಡುತ್ತಾ ಹೇಳುತ್ತಲೇ ಕುಸಿದರು. ಗುರು ಅವರು ಬೆಳಗ್ಗೆಯಷ್ಟೇ ಅಮ್ಮನ ಜತೆಗೂ ಮಾತನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next