ಲಖನೌ/ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕಳೆದ ವಾರವಷ್ಟೇ ಬಂಧಿತರಾದ ಜೈಶ್-ಎ-ಮೊಹಮ್ಮದ್‌ನ ಇಬ್ಬರು ಉಗ್ರರು, ಪುಲ್ವಾಮಾ ದಾಳಿಯ ಸಂಚುಕೋರರ ಜತೆ ನಂಟು ಹೊಂದಿರುವ ಅಚ್ಚರಿಯ ಅಂಶವನ್ನು ಬಾಯಿಬಿಟ್ಟಿದ್ದಾರೆ. ವಿದ್ಯಾರ್ಥಿಗಳ ಸೋಗಿನಲ್ಲಿದ್ದುಕೊಂಡೇ ಜೈಶ್‌ಗೆ ಯುವಕರನ್ನು ನೇಮಕ ಮಾಡುತ್ತಿದ್ದ ಜಮ್ಮು-ಕಾಶ್ಮೀರದ ಕುಲ್ಗಾಂನವರಾದ ಶಹನವಾಜ್ ತೆಲಿ ಮತ್ತು ಅಬ್ದುಲ್ ಅಖೀಬ್ ಮಲಿಕ್‌ನನ್ನು ಕಳೆದ ವಾರ ಉತ್ತರಪ್ರದೇಶ ಉಗ್ರ ನಿಗ್ರಹ ದಳವು ದೇವ್‌ಬಂದ್‌ನಲ್ಲಿ ಬಂಧಿಸಿತ್ತು. ವಿಚಾರಣೆ ವೇಳೆ ಈ ಇಬ್ಬರು ಯುವಕರೂ ಅನೇಕ ಆಘಾತಕಾರಿ ಅಂಶಗಳನ್ನು ಬಾಯಿಬಿಟ್ಟಿದ್ದಾರೆ.
ತಮಗೆ ಪುಲ್ವಾಮಾ ದಾಳಿಯ ಸಂಚುಕೋರ ಜೈಶ್-ಎ -ಮೊಹಮ್ಮದ್ ಉಗ್ರ ಅಬ್ದುಲ್ ರಶೀದ್ ಘಜಿ ಜೊತೆಗೆ ಸಂಪರ್ಕವಿತ್ತು. ಅಲ್ಲದೆ, ನಾವು ಕೂಡ ಇನ್ನೂ ದೊಡ್ಡ ವಿಧ್ವಂಸಕ ಕೃತ್ಯ ನಡೆಸುವ ಸಂಚು ರೂಪಿಸುತ್ತಿದ್ದೆವು ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇವರು ಉಗ್ರರೊಂದಿಗೆ ಮಾತುಕತೆ ನಡೆಸಿದ ಕರೆ ಧ್ವನಿಮುದ್ರಣವನ್ನೂ ಎಟಿಎಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ತೆಗೆದುಕೊಳ್ಳಬೇಕು ಎಂಬ ಸ್ಥಳಗಳ ಮಾಹಿತಿ ಯೂ ಸಂಭಾಷಣೆಯಲ್ಲಿದ್ದು, ಇವುಗಳ ಬಗ್ಗೆ ಇನ್ನಷ್ಟೇ ವಿವರ ಲಭ್ಯವಾಗಬೇಕಿದೆ. ಇವರು ಬಿಬಿಎಂ ಮೆಸೆಂಜರ್ ಅನ್ನು ಬಳಸುತ್ತಿದ್ದು, ವರ್ಚುವಲ್ ಸಂಖ್ಯೆಗಳನ್ನು ಬಳಸಿ ಗುರುತು ಸಿಗದಂತೆ ಸಂವಹನ ನಡೆಸುತ್ತಿದ್ದರು. ಶೀಘ್ರದಲ್ಲೇ ಇವರನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ಶಹನವಾಜ್ ಬಿಎ ಪ್ರಥಮ ವರ್ಷದ ವ್ಯಾಸಂಗವನ್ನು ಪೂರೈಸಿ ಕಂಪ್ಯೂಟರ್ ಕೋರ್ಸ್ ಮಾಡಿಕೊಂಡಿದ್ದ. ಇನ್ನು ಅಖೀಬ್ ಪಿಯು ವ್ಯಾಸಂಗ ಮಾಡಿದ್ದಾನೆ. ಶಹನವಾಜ್ ಕಳೆದ 18 ತಿಂಗಳಿಂದಲೂ ಉಗ್ರರೊಂದಿಗೆ ಸಂಪರ್ಕದಲ್ಲಿದ್ದು, ಅಖೀಬ್ ಕಳೆದ ಆರು ತಿಂಗಳಿಂದ ಉಗ್ರರ ಜೊತೆ ಸಂಪರ್ಕದಲ್ಲಿದ್ದ. ಜೈಶ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್‌ಗಳ ಸಂಪರ್ಕದಲ್ಲಿ ಇವರು ಇದ್ದರು ಎಂದು ಹೇಳಲಾಗಿದೆ.
ವಿಚಾರಣೆಗೆ ಅಂಗೀಕಾರ: ಕರ್ತವ್ಯ ನಿಭಾಯಿ ಸುವಾಗ ಜನಸಮೂಹದಿಂದ ದಾಳಿಗೊಳ ಗಾಗುವಂಥ ಭದ್ರತಾ ಪಡೆಗಳ ಮಾನವ ಹಕ್ಕುಗಳನ್ನು ರಕ್ಷಿಸಲು ಹೊಸ ನೀತಿ ರೂಪಿಸಬೇಕೆಂದು ಕೋರಿ ಸೇನಾಧಿಕಾರಿಗಳ ಪುತ್ರಿಯರಿಬ್ಬರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿದೆ. ಅರ್ಜಿ ಕುರಿತು ಕೇಂದ್ರ ಸರಕಾರ, ರಕ್ಷಣಾ ಇಲಾಖೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ, ಫೆ.14ರ ಪುಲ್ವಾಮಾ ದಾಳಿಗೆ 370 ಕೆಜಿ ಆರ್‌ಡಿಎಕ್ಸ್ ಬಳಕೆ ಮಾಡಲಾಗಿದ್ದು, ಇದರ ಹಿಂದೆ ದೊಡ್ಡ ಸಂಚು ಅಡಗಿರುವ ಶಂಕೆಯಿರುವ ಕಾರಣ ಈ ಬಗ್ಗೆ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
ಭಾರತದ ಸಾಮರ್ಥ್ಯ ವಿವರಿಸಿದ ಮುಷರ್ರಫ್: “ಭಾರತದೊಂದಿಗೆ ಅಣ್ವಸ್ತ್ರ ಯುದ್ಧದ ಬಗ್ಗೆ ಮಾತನಾಡುವುದೇ ಮೂರ್ಖತನದ ಕೆಲಸ. ಏಕೆಂದರೆ, ಪಾಕಿಸ್ಥಾನವು ಭಾರತದ ಮೇಲೆ ಒಂದು ಅಣು ಬಾಂಬ್ ಹಾಕಿದರೆ, ಭಾರತವು ನಮ್ಮ ಮೇಲೆ 20 ಅಣು ಬಾಂಬ್ ಹಾಕಿ ಪಾಕಿ ಸ್ಥಾನವನ್ನು ಸರ್ವನಾಶ ಮಾಡುತ್ತದೆ’ ಎಂದು ಪಾಕಿಸ್ಥಾನದ ಮಾಜಿ ಸೇನಾ ಮುಖ್ಯಸ್ಥ ಜ. ಪರ್ವೇಜ್ ಮುಷರ್ರಫ್ ಹೇಳಿದ್ದಾರೆ. ದುಬಾೖನಲ್ಲಿ ಮಾತನಾಡಿರುವ ಅವರು, “ಈಗ ಉಳಿದಿರುವ ಏಕೈಕ ಉಪಾಯವೆಂದರೆ, ಭಾರತವು ನಮ್ಮ ಮೇಲೆ 20 ಬಾಂಬ್ ಹಾಕುವ ಮೊದಲು ನಾವೇ ಆದೇಶದ ಮೇಲೆ 50 ಅಣು ಬಾಂಬ್ ಹಾಕಬೇಕು. ಈ ರೀತಿ ಮಾಡಲು ನೀವು ಸಿದ್ಧರಿದ್ದೀರಾ’ ಎಂದೂ ಮುಷರ್ರಫ್ ಪ್ರಶ್ನಿಸಿದ್ದಾರೆ.
ಶಾಂತಿಗೆ ಒಂದು ಅವಕಾಶ ಕೊಡಿ!: ಭಾರತ-ಪಾಕ್ ನಡುವೆ ಶಾಂತಿ ಸ್ಥಾಪಿಸಲು ಒಂದು ಅವಕಾಶ ಕೊಡಿ. ಹೀಗೆಂದು ಕೋರಿ ಕೊಂಡಿರುವುದು ಬೇರಾರೂ ಅಲ್ಲ. ಪಾಕ್ ಪ್ರಧಾನಿ ಇಮ್ರಾನ್ ಖಾನ್. ಸೋಮವಾರ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಬಂಧ ನನ್ನ ಮಾತಿಗೆ ನಾನು ಬದ್ಧವಾಗಿದ್ದೇನೆ. ಪುಲ್ವಾಮಾ ದಾಳಿಗೆ ಸಂಬಂಧಿಸಿದ ಸಾಕ್ಷ್ಯ ಕೊಟ್ಟರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಶಾಂತಿಗೆ ಒಂದು ಅವಕಾಶ ಕಲ್ಪಿಸಿ ಎಂದು ಪ್ರಧಾನಿ ಮೋದಿ ಅವರನ್ನು ಕೋರಿಕೊಂಡಿದ್ದಾರೆ.
ಹತರಲ್ಲಿ ಇಬ್ಬರು ಪಾಕಿಸ್ಥಾನೀಯರು
ರವಿವಾರ ಕಣಿವೆ ರಾಜ್ಯದ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಮೂವರು ಉಗ್ರರ ಪೈಕಿ ಇಬ್ಬರು ಪಾಕಿಸ್ಥಾನೀಯರಾಗಿದ್ದು, ಅವರು ಜೈಶ್‌ನ ಪ್ರಮುಖ ಕಮಾಂಡರ್‌ಗಳಾಗಿದ್ದರು ಮತ್ತು ಹಲವು ವಿಧ್ವಂಸಕ ಕೃತ್ಯಗಳಲ್ಲಿ ಬೇಕಾಗಿದ್ದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ವಲೀದ್ ಮತ್ತು ನೂಮನ್ ಎಂದು ಗುರುತಿಸಲಾಗಿದೆ. ಹತನಾದ ಮತ್ತೂಬ್ಬ ಉಗ್ರ ರಖೀಬ್ ಅಹ್ಮದ್ ಶೇಖ್ ಸ್ಥಳೀಯ ಕುಲ್ಗಾಂ ನಿವಾಸಿ ಎಂದೂ ಅವರು ಮಾಹಿತಿ ನೀಡಿದ್ದಾರೆ. ತುರಿಗಾಮ್ ಪ್ರದೇಶದಲ್ಲಿ ರವಿವಾರ ನಡೆದ ಎನ್‌ಕೌಂಟರ್‌ನಲ್ಲಿ ಈ ಮೂವರು ಉಗ್ರರನ್ನೂ ಭದ್ರತಾ ಪಡೆ ಹತ್ಯೆಗೈದಿತ್ತು. ಈ ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ಅಮನ್ ಠಾಕೂರ್ ಮತ್ತು ಯೋಧರೊಬ್ಬರು ಹುತಾತ್ಮರಾಗಿದ್ದರು.
ಪಾಕ್ ಪ್ರಾಯೋಜಿತ ಉಗ್ರವಾದ ಇಳಿಮುಖವಾಗುವ ಲಕ್ಷಣವೇ ಗೋಚರಿಸುತ್ತಿಲ್ಲ. ಆದರೂ, ನಾವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ, ರಾಜ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಬದ್ಧರಾಗಿದ್ದೇವೆ.
ದಿಲ್ಬಗ್ ಸಿಂಗ್, ಜಮ್ಮು-ಕಾಶ್ಮೀರ ಡಿಜಿಪಿ
ಭಾರತ ವಿರೋಧಿ ಬುದ್ಧಿಜೀವಿಗಳು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಮುಖ್ಯವಾಹಿನಿಯಲ್ಲಿ ಲೇಖಕರು, ಬುದ್ಧಿಜೀವಿಗಳೆಂದು ಗುರುತಿಸಿಕೊಳ್ಳಲು ವಿಫಲವಾದಾಗ ಅವರು ಇಂಥ ಕೆಲಸಕ್ಕೆ ಕೈಹಾಕುತ್ತಾರೆ.
ಜಿತೇಂದ್ರ ಸಿಂಗ್, ಕೇಂದ್ರ ಸಚಿವ