ಹೊಸದಿಲ್ಲಿ : ”ಪುಲ್ವಾಮಾದಂತಹ ಉಗ್ರ ದಾಳಿಗಳು ಎಲ್ಲ ಕಾಲದಲ್ಲಿ ಸಂಭವಿಸುತ್ತವೆ; ಅದಕ್ಕಾಗಿ ಪಾಕಿಸ್ಥಾನವನ್ನು ದೂರುವುದು ಸರಿಯಲ್ಲ; ಮಾತ್ರವಲ್ಲ ಭಾರತೀಯ ವಾಯು ಪಡೆ ಎಲ್‌ಓಸಿ ದಾಟಿ ಪಾಕಿಸ್ಥಾನದಲ್ಲಿರುವ ಜೈಶ್ ಎ ಮೊಹಮಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿರುವುದು ಕೂಡ ಸರಿಯಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ತರಾಗಿರುವ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಕಳೆದ ಫೆ.14ರಂದು ಪುಲ್ವಾಮಾದಲ್ಲಿ ಜೈಶ್ ಉಗ್ರ ನಿಂದ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಿಆರ್‌ಪಿಎಫ್ ನ 40 ಮಂದಿ ಯೋಧರು ಹುತಾತ್ಮರಾಗಿದ್ದರು.
ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ಥಾನದ ಬಾಲಾಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ಐಎಎಫ್ ನಡೆಸಿದ್ದ ಬಾಂಬ್ ದಾಳಿಯನ್ನು ಮತ್ತೆ ಕೆದಕಿ ಪ್ರಶ್ನಿಸಿರುವ ಪಿತ್ರೋಡ, “ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಾಯು ಪಡೆ ನಡೆಸಿದ್ದ ಬಾಂಬ್ ದಾಳಿ ಯಶಸ್ವಿಯಾಗಿವೆಯೇ ಮತ್ತು ಆ ದಾಳಿಯಲ್ಲಿ 300 ಉಗ್ರರು ಹತರಾಗಿದ್ದಾರೆ ಎಂಬುದನ್ನು ಉತ್ತರಿಸಬೇಕಿದೆ’ ಎಂದು ಹೇಳಿದರು.
ಪುಲ್ವಾಮಾ ಉಗ್ರ ದಾಳಿಗಾಗಿ ಪಾಕಿಸ್ಥಾನವನ್ನು ದೂರಲು ನಿರಾಕರಿಸಿದ ಪಿತ್ರೋಡ, ಈ ರೀತಿಯ ಉಗ್ರ ದಾಳಿಗಳು ಎಲ್ಲ ಕಾಲದಲ್ಲೂ ನಡೆಯುತ್ತವೆ ಎಂದು ಹೇಳಿದರು.
”ಮುಂಬಯಿ ಮೇಲಿನ ಉಗ್ರ ದಾಳಿಯನ್ನು ಎಂಟು ಉಗ್ರರು ನಡೆಸಿದ್ದರು. ಆ ಕಾರಣಕ್ಕೆ ಆ ದಾಳಿಗೆ ಪಾಕಿಸ್ಥಾನವೇ ಕಾರಣ ಎಂದು ದೂರುವುದು ಸರಿಯಲ್ಲ. ಪುಲ್ವಾಮಾ ದಾಳಿ ನಡೆದಾಗ ಅದಕ್ಕೆ ಉತ್ತರವಾಗಿ ನಾವು ಒಂದಷ್ಟು ಯುದ್ಧ ವಿಮಾನಗಳನ್ನು ಕಳುಹಿಸಿ ಬಾಂಬ್ ದಾಳಿ ಮಾಡಿದೆವು. ಯಾರೋ ಕೆಲವರ ಕೃತ್ಯಕ್ಕೆ ಒಂದು ದೇಶವನ್ನೇ ಹೊಣೆಗಾರನನ್ನಾಗಿ ಮಾಡುವ ನಿಲುವನ್ನು ನಾನು ಒಪ್ಪುವುದಿಲ್ಲ. ಕೆಲವೇ ಕೆಲವು ಉಗ್ರರ ಕೃತ್ಯಗಳಿಗೆ ನಾವು ಒಂದು ದೇಶದ ಎಲ್ಲ ಪ್ರಜೆಗಳನ್ನು ದೂರುವುದು ಕೂಡ ಸರಿಯಲ್ಲ; ಈ ರೀತಿಯ ನಿಲುವಿನಲ್ಲಿ ನನಗೆ ನಂಬಿಕೆ ಇಲ್ಲ” ಎಂದು ಪಿತ್ರೋಡ ಅವರು ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಹೇಳಿದರು.