ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮಂಗಳವಾರ ನಡೆದಿರುವ ಎರಡನೇ ದಿನದ ಎನ್‌ಕೌಂಟರ್‌ನಲ್ಲಿ ಇನ್ನೋರ್ವ ಉಗ್ರ ಭದ್ರತಾ ಪಡೆಗಳ ಗುಂಡಿಗೆ ಹತನಾಗಿದ್ದಾನೆ. ಇನ್ನಷ್ಟು ಉಗ್ರರು ಇಲ್ಲಿ ಅಡಗಿಕೊಂಡಿರುವುದನ್ನು ಶಂಕಿಸಲಾಗಿರುವುದರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಎಎನ್‌ಐ ವರದಿ ಪ್ರಕಾರ ಹತ ಉಗ್ರನ ಮೃತ ದೇಹವು ಬಹಮ್‌ನೂ ಪ್ರದೇಶದಲ್ಲಿ ಪತ್ತೆಯಾಗಿದ್ದು ಅದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೇ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಸುಮಾರು 10 ಮಂದಿ ಪ್ರತಿಭಟನಕಾರರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಎರಡು ದಿನಗಳ ಎನ್‌ಕೌಂಟರ್‌ನಲ್ಲಿ ಈ ವರೆಗೆ ಒಟ್ಟು ಮೂವರು ಉಗ್ರರು ಹತರಾಗಿರುವುದಾಗಿ ಪೊಲೀಸ್ ಅಧಿಕಾರಿಯೋರ್ವರು ಪಿಟಿಐಗೆ ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಬಹಮ್‌ನೂ ಪ್ರದೇಶದಲ್ಲಿ ಮನೆಯೊಂದರಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ನಿನ್ನೆ ಸೋಮವಾರ ಎನ್‌ಕೌಂಟರ್ ಆರಂಭಿಸಿದ್ದವು. ಇಬ್ಬರು ಉಗ್ರರು ಎನ್‌ಕೌಂಟರ್‌ನಲ್ಲಿ ನಿನ್ನೆಯೇ ಹತರಾಗಿದ್ದರು. ಇಂದು ಮೂರನೇ ಉಗ್ರನೂ ಹತನಾಗಿದ್ದಾನೆ.
ಹತರಾಗಿರುವ ಈ ಉಗ್ರರೆಲ್ಲರೂ ಭಯೋತ್ಪಾದಕ ಸಂಘಟನೆಗೆ ಹೊಸದಾಗಿ ನೇಮಕಗೊಂಡವರಾಗಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿವೆ.
ನಿನ್ನೆ ಹತರಾಗಿದ್ದ ಇಬ್ಬರು ಉಗ್ರರನ್ನು ಕಿಯಾಫತ್ ಮತ್ತು ಜಹಾಂಗೀರ್ ಎಂದು ಗುರುತಿಸಲಾಗಿದ್ದು ಇವರು ಉಗ್ರ ಝಾಕೀರ್ ಮೂಸಾ ಸಮೂಹಕ್ಕೆ ಸೇರಿದವರೆಂದು ತಿಳಿದು ಬಂದಿದೆ.