ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸಿದ ಕೃತ್ಯಕ್ಕೆ ಭಾರತ ಒಂದೊಂದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಇಂಡಿಯನ್ ಫಿಲ್ಮ್ ಮಂಡಳಿ(ಎಐಸಿಡಬ್ಲ್ಯುಎ) ಪಾಕ್ ಚಿತ್ರ ನಟ, ನಟಿಯರಿಗೆ ಹಿಂದಿ ಸಿನಿಮಾದಲ್ಲಿ ನಟಿಸುವುದನ್ನು ನಿಷೇಧಿಸಿದೆ.
ಪಾಕ್ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಸೋಮವಾರವೂ ಕೂಡಾ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೇಜರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಇಂಡಿಯನ್ ಫಿಲ್ಮ್ ಮಂಡಳಿ ಬಿಡುಗಡೆ ಮಾಡಿರುವ ಪತ್ರದ ಪ್ರಕಾರ, ಬಾಲಿವುಡ್ ನಲ್ಲಿ ಪಾಕ್ ನ ನಟ, ನಟಿಯರು ನಟಿಸುವುದನ್ನು ನಿಷೇಧಿಸಿದೆ. ಒಂದು ವೇಳೆ ಯಾವುದೇ ಅಸೋಸಿಯೇಷನ್ ಆಗಲಿ, ಸಿನಿಮಾ ನಿರ್ದೇಶಕ, ನಿರ್ಮಾಪಕರಾಗಲಿ ಪಾಕ್ ನಟರಿಗೆ ಹಿಂದಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಘಟನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಬಾಲಿವುಡ್ ನ ಖ್ಯಾತ ನಟರಾದ ಅಮಿತ್ ತಾಬ್ ಬಚ್ಚನ್, ದಿಲ್ಜೀತ್ ಸೇರಿದಂತೆ ಹಲವು ನಟರು ಸಾಂತ್ವನ ಹಾಗೂ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನೂ ಮಂಡಳಿ ಘೋಷಿಸಿದೆ.