Advertisement

ಪ್ರತಿ ಮಗುವಿಗೂ ಪೋಲಿಯೋ ಲಸಿಕೆ ಹಾಕಿಸಿ

10:29 AM Jan 12, 2022 | Team Udayavani |

ದೇವನಹಳ್ಳಿ: ಭಾರತ ಈಗಾಗಲೇ ಪೋಲಿಯೋ ನಿರ್ಮೂಲನಾ ದೇಶವಾಗಿದ್ದರೂ, ಭವಿಷ್ಯದ ಮುನ್ನೆಚ್ಚರಿಕೆಯ ಉದ್ದೇಶದಿಂದ ಜ. 23ರಿಂದ ಆರಂಭವಾಗಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ 0-5 ವರ್ಷದೊಳಗಿನ ಯಾವ ಮಕ್ಕಳೂ ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌ ಸೂಚಿಸಿದರು.

Advertisement

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದ ಕುರಿತುಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ. 23ರಂದು ಬೆಳಗ್ಗೆ8ಗಂಟೆಯಿಂದ ಸಾಯಂಕಾಲ 5ಗಂಟೆಯವರೆಗೆ ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು. ಜ. 24 ರಿಂದ 25ರವರೆಗೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹಾಗೂ ಜ. 24ರಿಂದ 26ರವರೆಗೆ ತಾಲೂಕಿನ ಪಟ್ಟಣ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ ಪಲ್ಸ್‌ ಪೋಲಿಯೋ ನೀಡಲಾಗುವುದು ಎಂದರು.

ತಾಲೂಕಿನಲ್ಲಿ 0 ಯಿಂದ 5 ವರ್ಷದ 22,424 ಮಕ್ಕಳು ಇದ್ದಾರೆ. 227 ಹಳ್ಳಿಗಳು ಇವೆ. 110 ಬೂತ್‌ಗಳು, ಎಚ್‌ಆರ್‌ಎ 98, ನಾನ್‌ ಎಚ್‌ಆರ್‌ಎ 120 ಒಟ್ಟು 220, 428 ಸಿಬ್ಬಂದಿ, 23 ಸೂಪರ್‌ ವೈಸರ್‌ಗಳು, ಕಾರ್ಯನಿರ್ವಹಿಸಲಿದ್ದಾರೆ. ಶಾಲೆಗಳು, ಅಂಗನವಾಡಿಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಟೋಲ್‌ಗ‌ಳಲ್ಲಿ ಪಲ್ಸ್‌ ಪೋಲಿಯೋ ನೀಡಲು ಕ್ರಮವಹಿಸಲಾಗಿದೆ ಎಂದರು.

ಪ್ರಚಾರ ಮಾಡಬೇಕು: ಪುರಸಭೆಗಳ ವ್ಯಾಪ್ತಿಯ ಕೊಳಚೆ ಮತ್ತು ಇತರೆ ಎಚ್‌ಆರ್‌ಎ ಪ್ರದೇಶಗಳಲ್ಲಿಆಟೋಗಳ ಮೂಲಕ ಎರಡು ದಿನಗಳ ಮುಂಚಿತವಾಗಿ ಪ್ರಚಾರ ಮಾಡಬೇಕು. ಆ ಪ್ರದೇಶಗಳಲ್ಲಿ ಬ್ಯಾನರ್‌ ಹಾಕಿಸುವುದು. ಭಿತ್ತಿಪತ್ರ ಮುದ್ರಿಸಿ ಪ್ರದರ್ಶಿಸಬೇಕು. ಜ. 21ರಂದು ಶಾಲಾಮಕ್ಕಳು ಹಾಗೂ ಸಂಘ-ಸಂಸ್ಥೆಗಳು ಒಳಗೊಂಡಂತೆ ಪಲ್ಸ್‌ ಪೋಲಿಯೋ ಲಸಿಕೆ ಜನ ಜಾಗೃತಿ ಜಾಥಾ ಮಾಡಲಾಗುವುದು ಎಂದರು.

ಜನರಲ್ಲಿ ಜಾಗೃತಿ ಮೂಡಿಸಿ: ಶಾಲಾ ಆರೋಗ್ಯ ತಂಡಗಳ ವೈದ್ಯರು, ಶಾಲಾ ಶಿಕ್ಷಕರಿಗೆ ಮತ್ತು ಶಾಲಾಮಕ್ಕಳಿಗೆ ತಮ್ಮ ಮನೆಯಲ್ಲಿರುವ ಮತ್ತು ಪಕ್ಕದ ಮನೆಗಳಲ್ಲಿರುವ 0-5 ವರ್ಷದೊಳಗಿನ ಮಕ್ಕಳಿಗೆಲಸಿಕೆ ಹಾಕಿಸಲು ತಿಳಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿಪಲ್ಸ್‌ ಪೋಲಿಯೋ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಗತ್ಯ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಹೇಳಿದರು.

Advertisement

ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ನಾಗವೇಣಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಸಹಾಯಕ ಅಭಿಯಂತರ ಸೋಮಶೇಖರ್‌, ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ಎ. ಎಚ್‌. ನಾಗರಾಜ್‌, ವಿಜಯಪುರಪುರಸಭಾ ಮುಖ್ಯಾಧಿಕಾರಿ ಮೋಹನ್‌, ದೈಹಿಕ ಶಿಕ್ಷಣಪರಿವೀಕ್ಷಕ ಜನಾರ್ಧನ್‌, ಆರೋಗ್ಯ ಸಹಾಯಕ ವೆಂಕಟೇಶ್‌, ರೇಖಾ ಹಾಗೂ ಮತ್ತಿತರರು ಇದ್ದರು.

ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸುವಂತೆ ಮನವೊಲಿಸಿ :  ತಾಲೂಕಿಗೆ ಹೊರ ರಾಜ್ಯಗಳಿಂದ ಬಂದಿರುವ ಅಲೆಮಾರಿ ಜನಾಂಗ, ವಲಸಿಗರು, ಇಟ್ಟಿಗೆಗೂಡಿನ ಕಾರ್ಮಿಕರು, ಕೃಷಿ ಕಾರ್ಮಿಕ ಕುಟುಂಬಗಳಲ್ಲಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿಕೊಳ್ಳಲು ತಿಳವಳಿಕೆ ನೀಡಿ, ಪೋಲಿಯೋ ಬೂತ್‌ಗಳಿಗೆ ತೆರಳಿ ಲಸಿಕೆ ಹಾಕಿಸುವಂತೆ ಮನವೊಲಿಸಬೇಕು. ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡಗಳ ಮಾಲೀಕರನ್ನು ಮತ್ತು ಮೇಸ್ತ್ರಿಗಳನ್ನು ಸಂಪರ್ಕಿಸಿ, ಕೂಲಿ ಕಾರ್ಮಿಕ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next