ಹಾಸನ: ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ನಗರದ ವೈದ್ಯಕೀಯ ಕಾಲೇಜು ಆಸ್ಪತ್ರೆ ಆವರಣದಲ್ಲಿ ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವುದರ ಮೂಲಕ ಶೇ.100 ರಷ್ಟು ಸಾಧನೆಗೆ ಸಂಕಲ್ಪ ಮಾಡಲಾಗಿದೆ.
ಇಂದು ಲಸಿಕೆ ಹಾಕಿಸಲು ಸಾಧ್ಯವಾಗದಿದ್ದವರು ಮಾ.13 ರ ವರೆಗೂ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ನಿಯುಕ್ತರಾಗಿರುವ ಕಾರ್ಯಕರ್ತರು ಮನೆ, ಮನೆಗೆ ಬಂದು ಮಕ್ಕಳಿಗೆ ಲಸಿಕೆ ಹಾಕುವರು. ಪೋಷಕರು ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
1.28ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ: ಮಾರಕ ರೋಗ ಪೋಲಿಯೇ ನಿರ್ಮೂಲನೆಗೆ ಸರ್ಕಾರ ಸಂಕಲ್ಪ ಮಾಡಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಗದಿಪಡಿಸಿದ್ದು, ಹಾಸನ ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 1.28ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು 872 ಬೂತ್‌ಗಳನ್ನು ತೆರೆಯಲಾಗಿದೆ. ಒಟ್ಟು 3540 ಸರ್ಕಾರಿ ಸಿಬ್ಬಂದಿ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, 176 ಜನ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಕಳೆದ ವರ್ಷ ಶೇ.100 ರಷ್ಟು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಯೋ ಬೂತ್: ಪೋಲಿಯೋ ಲಸಿಕೆ ಹಾಕಿಸಿಕೊಳ್ಳದೆ ಐದು ವರ್ಷದೊಳಗಿನ ಯಾವುದೇ ಮಗುವೂ ಉಳಿಯಬಾರದು. ಈ ಬಗ್ಗೆ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿ ವ್ಯಾಪಕ ಪ್ರಚಾರ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ. ರೈಲ್ವೆ ಫ್ಲಾಟ್ ಫಾರಂ, ಬಸ್ ನಿಲ್ದಾಣ ಹಾಗೂ ರಾಷ್ಟೀಯ ಹೆದ್ದಾರಿಯಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಹಾಸನ ವೈದ್ಯಕೀಯ ಕಾಲೇಜು (ಹಿಮ್ಸ್) ನಿರ್ದೇಶಕ ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ನಗರಸಭೆ ಆಯುಕ್ತ ಬಿ.ಎ. ಪರಮೇಶ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಜನಾರ್ದನ್, ವಾರ್ತಾಧಿಕಾರಿ ವಿನೋದ್‌ಚಂದ್ರ, ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಶಿವಸ್ವಾಮಿ, ಸ್ವಾತಂತ್ರ ಹೋರಾಟಗಾರ ಎಚ್.ಎಂ. ಶಿವಣ್ಣ, ಹಿಮ್ಸ್ ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಾಜಗೋಪಾಲ್, ಹಾಸನ ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಂ.ವಿಜಯ್ ಮತ್ತಿತರರು ಉಪಸ್ಥಿತರಿದ್ದರು.