ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಐದು ವರ್ಷದೊಳಗಿನ ಮಕ್ಕಳಿಗೆ ಮಾ.10 ಮತ್ತು 13ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರದ 3,345 ಕಡೆ ಪೋಲಿಯೋ ಬೂತ್‌ಗಳನ್ನು ನಿರ್ಮಿಸಲಾಗಿದೆ.
ಬಿಬಿಎಂಪಿ ಹಾಗೂ ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ. ನಗರದಲ್ಲಿ ಐದು ವರ್ಷದೊಳಗಿನ 10,47,320 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ನಗರದ ಆರೋಗ್ಯ ಕೇಂದ್ರ, ಔಷಧಾಲಯಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಬೂತ್ ಸ್ಥಾಪಿಸಲಾಗಿದೆ.
ನಗರದ ಪ್ರಮುಖ ಉದ್ಯಾನಗಳು, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಖಾಸಗಿ ನರ್ಸಿಂಗ್ ಹೋಮ್, ಮಾಲ್‌ಗಳು ಸೇರಿ ಹಲವೆಡೆ 430 ಸ್ಥಿರ ಮತ್ತು 325 ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ. ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕೆಂಬ ಉದ್ದೇಶದಿಂದ ಒಟ್ಟು 14,670 ಲಸಿಕಾ ಕಾರ್ಯಕರ್ತರನ್ನು ಪಾಲಿಕೆಯಿಂದ ನೇಮಿಸಿಕೊಳ್ಳಲಾಗಿದೆ.
ನಗರದಲ್ಲಿ 775 ಕೊಳಚೆ ಪ್ರದೇಶಗಳಿದ್ದು, ಅಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆ ಹಿನ್ನೆಲೆಯಲ್ಲಿ ಆ ಭಾಗಗಳಲ್ಲಿಯೂ ಬೂತ್‌ಗಳನ್ನು ಸ್ಥಾಪಿಸಿದ್ದು, 734 ಮೇಲ್ವಿಚಾರಕರು ಹಾಗೂ 20 ವಿಶೇಷ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇಂದು ಜಾಗೃತಿ ಜಾಥಗೆ ಚಾಲನೆ: ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು ಎಂಬ ಉದ್ದೇಶದಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾಲಿಕೆಯಿಂದ ಶುಕ್ರವಾರ (ಮಾ.8) ನಗರದ ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯಿಂದ ಬಿಬಿಎಂಪಿ ಕೇಂದ್ರ ಕಚೇರಿವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಮೇಯರ್ ಗಂಗಾಂಬಿಕೆ ಜಾಥಾಗೆ ಚಾಲನೆ ನೀಡಲಿದ್ದಾರೆ.