ಈ ಅಡ್ಡಹೆಸರಿಗೆ ವಿಶಿಷ್ಟ ಸೊಗಡಿದೆ. ಹುಟ್ಟು ಹೆಸರಿನಂತೆ ಇದನ್ನು ಯಾವುದೋ ಒಳ್ಳೆಯ ಮುಹೂರ್ತ ನೋಡಿ, ಜನ್ಮನಕ್ಷತ್ರಗಳಿಗೆ ಹೊಂದಿಕೆಯಾಗುವಂತೆ ಇಡುವುದಿಲ್ಲ. ಹೆಸರನ್ನಿಟ್ಟವರು ಕಿವಿಯಲ್ಲಿ ಮೂರು ಬಾರಿ ಪಿಸುಗುಡುವುದೂ ಇಲ್ಲ. ಯಾವುದೋ ಕನಸನ್ನಿಟ್ಟುಕೊಂಡು, ಆದರ್ಶವನ್ನಿಟ್ಟುಕೊಂಡು ಇದನ್ನು ನಾಮಕರಿಸುವುದೂ ಇಲ್ಲ. ನನಗೆ ಗೆಳೆಯರೆಲ್ಲ ಇಟ್ಟ “ಪುಳಿಚಾರ್’ ಕೂಡ ಅಶಾಸ್ತ್ರೀಯವಾಗಿ ಜನ್ಮತಾಳಿದ ಹೆಸರೇ ಆಗಿದೆ…
ಕಾಲೇಜು ಎನ್ನುವುದು ಅಡ್ಡಹೆಸರುಗಳ ದೊಡ್ಡ ಅಡ್ಡಾ. ಕ್ಲಾಸಿನ ನಡುವೆಯೂ ನಗಿಸುವ ಶೂರ ಇಲ್ಲಿ ಚಾಪ್ಲಿನ್, ಗೆಳೆಯರ ನಡುವೆ ಬಕ್ರಾ ಆಗುತ್ತಲೇ ಇದ್ದರೆ ಅವನು ಸಾಧು ಮಹಾರಾಜ್, ಇದ್ಯಾವುದೂ ಬೇಡ; ತಾನಾಯಿತು, ತನ್ನ ಪಾಡಾಯಿತು ಎನ್ನುವ ಸಾಧು ವ್ಯಕ್ತಿತ್ವದವನಿದ್ದರೆ ಆತ ಅಪ್ಪಟ ಗಾಂಧಿಯೇ. ಹೀಗೆ ಮಹನೀಯರನ್ನು ಸ್ಮರಿಸುತ್ತಲೇ, ಹೆಜ್ಜೆ ಇಡುತ್ತಿದೆ ನಮ್ಮ ಯುವಜನಾಂಗ! ಅಂತೆಯೇ ನಮ್ಮ ಕ್ಲಾಸಿನಲ್ಲೂ ಇಂಥ ಮಹಾಪುರುಷರ ನಡುವೆ ನಾನು ಬದುಕುತ್ತಿರುವೆ. ಎಲ್ಲರೂ ನನ್ನನ್ನು ಪ್ರೀತಿಯಿಂದ ಕರೆಯುವುದು, “ಪುಳಿಚಾರ್’ ಅಂತ.
ಈ ಅಡ್ಡಹೆಸರಿಗೆ ವಿಶಿಷ್ಟ ಸೊಗಡಿದೆ. ಹುಟ್ಟು ಹೆಸರಿನಂತೆ ಇದನ್ನು ಯಾವುದೋ ಒಳ್ಳೆಯ ಮುಹೂರ್ತ ನೋಡಿ, ಜನ್ಮನಕ್ಷತ್ರಗಳಿಗೆ ಹೊಂದಿಕೆಯಾಗುವಂತೆ ಇಡುವುದಿಲ್ಲ. ಹೆಸರನ್ನಿಟ್ಟವರು ಕಿವಿಯಲ್ಲಿ ಮೂರು ಬಾರಿ ಪಿಸುಗುಡುವುದೂ ಇಲ್ಲ. ಯಾವುದೋ ಕನಸನ್ನಿಟ್ಟುಕೊಂಡು, ಆದರ್ಶವನ್ನಿಟ್ಟುಕೊಂಡು ಇದನ್ನು ನಾಮಕರಿಸುವುದೂ ಇಲ್ಲ. ಈ ಅಡ್ಡನಾಮ, ವ್ಯಂಗ್ಯದ ಪ್ರತಿನಿಧಿ. ಅದರ ಹಿಂದೆ ಸಲುಗೆಯೋ, ಪ್ರೀತಿಯೋ, ಋಣವೋ ಜೋತುಬಿದ್ದಿರುತ್ತೆ. ಒಬ್ಬ ವ್ಯಕ್ತಿಯ ಹಾವಭಾವ, ಭಾಷೆ ಲಾಲಿತ್ಯ, ಮೈಬಣ್ಣ, ಕಣೊ°àಟ, ಅಭಿರುಚಿ, ದೌರ್ಬಲ್ಯ- ಇವುಗಳಲ್ಲಿ ಯಾವುದಾದರೂ ಒಂದು ಸಂಗತಿ “ನಿಕ್‌ನೇಮ್’ಗೆ ಕಾರಣ ಆಗಿರುತ್ತೆ. ಸದ್ದಿಲ್ಲದೇ, ನನ್ನ ಬದುಕಿಗೆ ಅಂಟಿಕೊಂಡ “ಪುಳಿಚಾರ್’ಗೂ ಒಂದು ಕತೆಯಿದೆ.
ಪುಳಿಚಾರ್ ಅಂದ ಕೂಡಲೆ ನಿಮಗೆ ನೆನಪಾಗುವುದು, ಇವನೊಬ್ಬ ಸಸ್ಯಾಹಾರಿ ಇದ್ದಿರಬೇಕು ಅಂತ. ಚಿಕನ್ ಮುಟ್ಟುವವನಲ್ಲ, ಮೊಟ್ಟೆಯನ್ನು ಮೂಸಿಯೂ ನೋಡುವವನಲ್ಲ ಅಂತ ನೀವು ಅಂದುಕೊಳ್ಳುವ ಹೊತ್ತಿನಲ್ಲಿ, ಒಂದೆರಡು ಜಾತಿಯ ಹೆಸರೂ ನಿಮ್ಮ ಸ್ಮತಿಪಟಲದಲ್ಲಿ ಸುಳಿದಾಡಿದರೆ, ಅದಕ್ಕೆ ನಾನು ಹೊಣೆಯಲ್ಲ.
ನಮ್ಮ ವಿಭಾಗದಲ್ಲಿ ಬಹುತೇಕ ಎಲ್ಲರೂ, ಚಿಕನ್ ಖಾದ್ಯಗಳನ್ನು ಇಷ್ಟಪಡುವವರು. ಎಲ್ಲರಿಗೂ ಅದು ಪಂಚಪ್ರಾಣ. ಅದೊಂದು ದಿನ ಮೊದಲ ಸೆಮಿಸ್ಟರ್ ಪರೀಕ್ಷೆ ಮುಗಿದ ಖುಷಿಯಲ್ಲಿ ಗೆಳೆಯರು, “ಮಗಾ ಪಾರ್ಟಿ ಮಾಡೋಣಾÌ?’ ಎಂದು ಪೀಡಿಸುತ್ತಿದ್ದರು. ಗೋಬಿಮಂಚೂರಿಯಲ್ಲೋ, ಮೈಸೂರ್ ಪಾಕ್‌ನಲ್ಲೋ ಪಾರ್ಟಿ ಮುಗಿದು ಹೋಗುತ್ತೆ ಅಂತ ನಾನೂ ಅದಕ್ಕೆ ಒಪ್ಪಿಬಿಟ್ಟೆ. ಅದು ಯಾವ ಪಾರ್ಟಿ ಅಂತೀರಾ, “ಪರಿಶುದ್ಧ’ ನಾನ್‌ವೆಜ್ ಪಾರ್ಟಿ! “ನಾನು ಬರೋದಿಲ್ಲಪ್ಪಾ… ನೀವೆಲ್ಲಾ ಹೋಗಿ’ ಎಂದೆ. ಆದರೆ, ಅವರು ಕೇಳಬೇಕೇ? ನನ್ನನ್ನು ಎಳಕೊಂಡು, ಹೊರಟೇಬಿಟ್ಟರು. ಅಂದಹಾಗೆ, ನಮ್ಮ ಬ್ಯಾಚ್‌ನಲ್ಲಿ ಇದ್ದಿದ್ದೇ ಇಪ್ಪತ್ತು ಹುಡುಗರು. ಅವರೆಲ್ಲರೂ ಚಿಕನ್ ಎಂದರೆ ಸಾಕು, ಬಾಯಿ ಬಿಡ್ತಾರೆ. ಅದರಲ್ಲಿ ನಾನೊಬ್ಬನೇ ಸೊಪ್ಪು- ಗಡ್ಡೆ ತಿನ್ನುವ ಬಡಪಾಯಿ! ಅವರೆಲ್ಲ ಒಟ್ಟಿಗೆ ಕುಳಿತಾಗ, ನನಗೆ ಆ ಚಿಕನ್ ವಾಸನೆ ಮೂಗಿಗೆ ಬಡಿದು, ಮನಸೊಳಗೆ ಏನೋ ಕಸಿವಿಸಿ ಆಗಿಹೋಯಿತು. ಮೈಲು ದೂರ ಓಡಿಬಿಟ್ಟಿದ್ದೆ. ಅವತ್ತಿನಿಂದ ನನಗೆ ಅವರೆಲ್ಲ “ಪುಳಿಚಾರ್’ ಅಂತಲೇ ಕರೆಯುತ್ತಿದ್ದಾರೆ.
ಹಾಂ ಆ ಚಿಕನ್‌ನಲ್ಲಿ ಅಂಥದ್ದೇನಿದೆ ಅಂತ. ಅದು ನನ್ನೊಳಗೇ ಇರುವ ಕುತೂಹಲವಷ್ಟೇ. ಅದನ್ನು ಈಡೇರಿಸುವ ಬಯಕೆ ಇಲ್ಲವಾದರೂ, ನನ್ನ ಗೆಳೆಯರೆಲ್ಲ ಅದನ್ನು ಆಸೆ ಪಡುವುದನ್ನು ನೋಡುವಾಗ, ಯಾಕೋ ಆ ಕುತೂಹಲ ಹಾಗೇ ಹುಟ್ಟಿಬಿಡುತ್ತದೆ. ಸಮಾಜ ಎಂದ ಮೇಲೆ ಎಲ್ಲ ಸಂಸ್ಕೃತಿಗಳೂ ಬೆರೆತಿರುತ್ತವೆ. ಇಲ್ಲಿ ಬೇಧಭಾವ ಮಾಡಿ ಬದುಕಲಾಗದು ಎನ್ನುವುದು ನನ್ನ ಹಿರಿಯರು ಕಲಿಸಿರುವ ದೊಡ್ಡ ಪಾಠ. ಅದಕಾರಣ, ವಿಭಿನ್ನ ಆಹಾರ ಸಂಸ್ಕೃತಿಗೆ ನನ್ನದೇನೂ ತಕರಾರಿಲ್ಲ.
ಆದರೆ, ನನ್ನ ಹಣೆಗೆ ಅಂಟಿಕೊಂಡ ಈ ‘ಪುಳಿಚಾರ್’ ಹೆಸರಿನ ಕತೆ? ಕಾರಿಡಾರಿನಲ್ಲಿ ಎಲ್ಲಿಗೇ ಹೋದರೂ, ಅದು ಯಾವ ದಿಕ್ಕಿನಿಂದಾದರೂ ಅಪ್ಪಳಿಸಿಬಿಡುತ್ತದಲ್ಲ…! ಕ್ಲಾಸ್ ರೂಮ್‌ನಲ್ಲೂ ಅಧ್ಯಾಪಕರು ಪಾಠ ಮಾಡುವಾಗ, ನಾನ್‌ವೆಜ್ ಕುರಿತು ವಿಷಯ ಬಂದಾಗ, ಅವರು ಕೂಡ “ಯಾರು ಇಲ್ಲಿ ಪುಳುಚಾರ್?’ ಅಂತ ಕೇಳುತ್ತಾರೆ. ಆಗ ಪಕ್ಕದಲ್ಲಿ- ಹಿಂದೆಮುಂದೆ ಕುಳಿತ ಗೆಳೆಯರೆಲ್ಲ, ನನ್ನ ಕೈ ಹಿಡಿದು, ಮೇಲಕ್ಕೆ ಎತ್ತುತ್ತಾರೆ. ಆಗ ಅಧ್ಯಾಪಕರು, “ನೋಡೋ ನೀನೊಬ್ಬನೇ’ ಅಂತ ನನ್ನನ್ನು ನಗಿಸುತ್ತಾರೆ. ಆದರೆ, ಇದರಿಂದ ನನಗೆ ಯಾವ ಬೇಸರವೂ ಇಲ್ಲ. ನನಗೆ ಇವರೆಲ್ಲ ಪ್ರೀತಿಯಿಂದ ಇನ್ನೊಂದು ಹೆಸರಿಟ್ಟರಲ್ಲ ಎಂಬ ಖುಷಿ . ಕಾಲೇಜು ಅಂದ್ರೆ ಜಾಲಿ ಲೈಫು. ಇವೆಲ್ಲ ಇದ್ದರೇನೇ ಅಲ್ಲಿ ಸಂತೋಷಕ್ಕೆ ಅರ್ಥ. ಅಲ್ಲವೇ?
ದಂದೂರು ಭರತ ಡಿ.ಎಸ್.